ಪೋಪ್ ಫ್ರಾನ್ಸಿಸ್: ವಲಸಿಗರನ್ನು ಶೋಷಿಸಲಾಗುತ್ತಿದೆ; ಗುಲಾಮಗಿರಿಗೆ ತಳ್ಳಲಾಗುತ್ತಿದೆ
ವರದಿ: ಕೀಲ್ಚೆ ಗುಸ್ಸೀ, ಅಜಯ್ ಕುಮಾರ್
ಪೋಪ್ ಫ್ರಾನ್ಸಿಸ್ ಅವರು ಇಂದು ವ್ಯಾಟಿಕನ್ ನಗರದಲ್ಲಿ "ರೆಸ್ಕ್ಯೂ: ಪೀಪಲ್ ಸೇವಿಂಗ್ ಪೀಪಲ್" ಎಂಬ ಸಂಸ್ಥೆಯ ಸದಸ್ಯರನ್ನು ಭೇಟಿ ಮಾಡಿ, ಅವರೊಂದಿಗೆ ಮಾತುಕತೆಯನ್ನು ನಡೆಸಿದ್ದಾರೆ. ಮೆಡಿಟರೇನಿಯನಾದ್ಯಂತ ವಲಸಿಗರಿಗೆ ಈ ಸಂಸ್ಥೆಯು ನೀಡುತ್ತಿರುವ ನೆರವನ್ನು ಪೋಪ್ ಫ್ರಾನ್ಸಿಸ್ ಶ್ಲಾಘಿಸಿದ್ದಾರೆ.
2013 ರಿಂದ ಈವರೆಗೂ ಉತ್ತಮ ಬದುಕನ್ನು ಅರಸುತ್ತಾ ಮೆಡಿಟರೇನಿಯನ್ ಸಾಗರವನ್ನು ದಾಟಲು ಪ್ರಯತ್ನಿಸುತ್ತಿರುವ ಸಂಧರ್ಭದಲ್ಲಿ ಸುಮಾರು 31,000 ಜನರು ಸಾವನ್ನಪ್ಪಿದ್ದಾರೆ. ಕಳೆದ ವರ್ಷವೊಂದರಲ್ಲೇ ಈ ಸಾಗರವನ್ನು ದಾಟುತ್ತಿರುವ ಸಂದರ್ಭದಲ್ಲಿ ಸುಮಾರು ಮೂರು ಸಾವಿರ ವಲಸಿಗರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ರೆಸ್ಕ್ಯೂ ಸಂಸ್ಥೆಯು ಈ ಸಾಗರವನ್ನು ದಾಟುತ್ತಿರುವ ಸಂದರ್ಭದಲ್ಲಿ ನೀರಿನಲ್ಲಿ ಮುಳುಗುವ ವಲಸಿಗರನ್ನು ರಕ್ಷಿಸುವ ಕಾರ್ಯದಲ್ಲಿ ಮಗ್ನವಾಗಿದೆ. ಮೇಕ್'ಶಿಫ್ಟ್ ಬೋಟ್'ಗಳ ಮೂಲಕ ಜನರನ್ನು ರಕ್ಷಿಸುವ ಕಾರ್ಯವನ್ನು ಮಾಡುತ್ತಿರುವ ಈ ಸಂಸ್ಥೆಯ ಕಾರ್ಯವನ್ನು ಪೋಪ್ ಫ್ರಾನ್ಸಿಸ್ ಅವರು ಶ್ಲಾಘಿಸಿದ್ದಾರೆ. ನೀವು ಅತ್ಯಂತ ಉನ್ನತ ಕಾರ್ಯಗಳನ್ನು ಮಾಡುತ್ತಿದ್ದೀರಿ. ಜನರ ಜೀವಗಳನ್ನು ಉಳಿಸುವ ಕಾರ್ಯಗಳನ್ನು ಮಾಡುತ್ತಿದ್ದೀರಿ ಎಂದು ಹೇಳಿದ್ದಾರೆ.
ಉತ್ತಮ ಜೀವನವನ್ನು ಅರಸುತ್ತಾ, ವಿವಿಧ ಬಡ ಹಾಗೂ ಹಿಂದುಳಿದ ದೇಶಗಳಿಂದ ಸಾವಿರಾರು ವಲಸಿಗರು ಯೂರೋಪ್ ಖಂಡಕ್ಕೆ ವಲಸೆ ಬರುತ್ತಿದ್ದಾರೆ. ಉತ್ತಮ ಜೀವನವನ್ನು ಹಾಗೂ ಘನತೆಯನ್ನು ಅರಸಿ ಬರುತ್ತಿರುವ ಇವರ ಜೀವಗಳು ಅಪಾಯದಲ್ಲಿದ್ದಾಗ, ಅವುಗಳನ್ನು ನೀವು ರಕ್ಷಿಸುವ ಮಹೋನ್ನತ ಕಾರ್ಯವನ್ನು ಮಾಡುತ್ತಿದ್ದೀರಿ ಎಂದು ಪೋಪ್ ಫ್ರಾನ್ಸಿಸ್ ಅವರು ಹೇಳಿದ್ದಾರೆ.
ಮುಂದುವರೆದು ಮಾತನಾಡಿದ ಪೋಪ್ ಫ್ರಾನ್ಸಿಸ್ ಅವರು "ವಲಸಿಗರನ್ನು ಅನ್ಯಾಯವಾಗಿ ಶೋಷಿಸಲಾಗುತ್ತಿದೆ. ಅವರನ್ನು ಅತ್ಯಂತ ಕ್ರೂರವಾಗಿ ನಡೆಸಿಕೊಳ್ಳಲಾಗುತ್ತಿದೆ. ಬಲವಂತವಾಗಿ ಅವರನ್ನು ಗುಲಾಮಗಿರಿಗೆ ತಳ್ಳಲಾಗುತ್ತಿದೆ. ಇದಕ್ಕೆ ಯಾರೂ ಸಹ ಆಸ್ಪದ ಕೊಡಬಾರದು. ರೆಸ್ಕ್ಯೂ ಸಂಸ್ಥೆಯಂತಹ ಗುಂಪುಗಳು ಮಾತ್ರವಲ್ಲದೆ ಇನ್ನೂ ಹೆಚ್ಚಿನ ಜನರು ಹಾಗೂ ಸಂಸ್ಥೆಗಳು ವಲಸಿಗರನ್ನು ರಕ್ಷಿಸುವ ಹಾಗೂ ಅವರಿಗೆ ಉತ್ತಮ ಜೀವನವನ್ನು ರೂಪಿಸಿಕೊಳ್ಳಲು ನೆರವಾಗುವ ಕಾಯಕದಲ್ಲಿ ತೊಡಗಿಕೊಳ್ಳಬೇಕೆಂದು ಪೋಪ್ ಫ್ರಾನ್ಸಿಸ್ ನುಡಿದರು.