ವ್ಯಾಟಿಕನ್ನಿನಲ್ಲಿ ಆಗಮನ ಕಾಲದ ಪ್ರಬೋಧನೆಗಳ ಶೀರ್ಷಿಕೆ "ಭರವಸೆ" ಆಗಿರಲಿದೆ
ವರದಿ: ತಿಝಿಯಾನ ಚಂಪೀಸಿ, ಅಜಯ್ ಕುಮಾರ್
ಪೋಪ್ ಆರನೇ ಪೌಲರ ಸಭಾಂಗಣದಲ್ಲಿ ಕ್ರಿಸ್ಮಸ್ ಹಬ್ಬದವರೆಗೂ ಪ್ರತಿ ಶುಕ್ರವಾರ ವಿಶ್ವಗುರುಗಳ ನಿವಾಸದ ಅಧಿಕೃತ ಪ್ರಬೋಧಕರಾಗಿರುವ ಕಪುಚಿನ್ ಸಭೆಯ ಫಾದರ್ ರೊಬೆರ್ತೊ ಪಸೋಲಿನಿ ಅವರು ಅಗಮನ ಕಾಲದ ಪ್ರಬೋಧನೆಗಳನ್ನು ನೀಡಲಿದ್ದು, ಈ ಪ್ರಬೋಧನೆಗಳ ಶೀರ್ಷಿಕೆ "ಭರವಸೆ" ಯಾಗಿರಲಿದೆ ಎಂದು ವ್ಯಾಟಿಕನ್ ವರದಿ ಮಾಡಿದೆ.
"ಭರವಸೆಯ ದ್ವಾರಗಳು: ಕ್ರಿಸ್ತ ಜಯಂತಿಯ ಪ್ರವಾದನೆಯ ಮೂಲಕ ಪವಿತ್ರ ವರ್ಷದ ಆರಂಭದೆಡೆಗೆ" ಎಂಬುದು ಈ ವರ್ಷ ವಿಶ್ವಗುರುಗಳ ನಿವಾಸದ ಪ್ರಬೋಧನೆಗಳ ಅಧಿಕೃತ ಶೀರ್ಷಿಕೆಯಾಗಲಿದ್ದು, ಇದೇ ಮೊಟ್ಟ ಮೊದಲ ಬಾರಿಗೆ ವಿಶ್ವಗುರುಗಳ ನಿವಾಸದ ಅಧಿಕೃತ ಪ್ರಬೋಧಕರಾಗಿ ನೇಮಕವಾಗಿರುವ ಕಪುಚಿನ್ ಸಭೆಯ ಫಾದರ್ ರೊಬೆರ್ತೊ ಪಸೋಲಿನಿ ಅವರು ಪ್ರಬೋಧನೆಯನ್ನು ನೀಡಲಿದ್ದಾರೆ.
ಫಾದರ್ ರೊಬೆರ್ತೊ ಪಸೋಲಿನಿ ಅವರು ವ್ಯಾಟಿಕನ್ನಿನಲ್ಲಿರುವ ಕಾರ್ಡಿನಲ್ಲುಗಳು, ಮಹಾಧರ್ಮಾಧ್ಯಕ್ಷರುಗಳು, ಧರ್ಮಾಧ್ಯಕ್ಷರುಗಳು, ಗುರುಗಳು, ಧಾರ್ಮಿಕ ಸಹೋದರ-ಸಹೋದರಿಯರು ಹಾಗೂ ವ್ಯಾಟಿಕನ್ ಕುಟುಂಬದಲ್ಲಿ ಕಾರ್ಯನಿರ್ವಹಿಸುತ್ತಿರುವ ಶ್ರೀಸಾಮಾನ್ಯರನ್ನು ಉದ್ದೇಶಿಸಿ ಪ್ರಬೋಧನೆಯನ್ನು ನೀಡಲಿದ್ದಾರೆ. ರೋಮನ್ ಕ್ಯೂರಿಯಾದ ಸದಸ್ಯರೂ ಸೇರಿದಂತೆ, ವ್ಯಾಟಿಕನ್ನಿನ ಗವರ್ನರೇಟ್'ನ ಉದ್ಯೋಗಿಗಳಿಗೂ ಸಹ ಫಾದರ್ ಪಸೋಲಿನಿ ಅವರು ಬೋಧಿಸಲಿದ್ದು, ವಿಶ್ವಗುರುಗಳ ಪ್ರಾರ್ಥನಾಲಯದ ಭಾಗವಾಗಿರುವ ವಿವಿಧ ಧಾರ್ಮಿಕ ಸಭೆಗಳ ಆಡಳಿತಗಾರರು ಹಾಗೂ ಮುಖ್ಯಾಧಿಕಾರಿಗಳಿಗೂ ಸಹ ಇದು ಸಲ್ಲುತ್ತದೆ.
ಶುಕ್ರವಾರಗಳ ಚಿಂತನೆಗೆ ಎಲ್ಲರನ್ನೂ ಪತ್ರದ ಮೂಲಕ ಆಹ್ವಾನಿಸಿರುವ ಫಾದರ್ ಪಸೋಲಿನಿ ಅವರು ಈ ವರ್ಷ ನಮಗೆ ಕ್ರಿಸ್ತ ಜಯಂತಿ ಮಾತ್ರ ವಿಶೇಷವಲ್ಲ. ಇದರ ಜೊತೆಗೆ ನಾವು ಪವಿತ್ರ ವರ್ಷವಾದ ಜ್ಯೂಬಿಲಿ ವರ್ಷಕ್ಕೆ ಕಾಲಿಡುತ್ತಿದ್ದೇವೆ" ಎಂದು ಹೇಳಿದ್ದಾರೆ.