ಕಾರ್ಡಿನಲ್ ಝೆನಾರಿ: ಸಿರಿಯಾದಲ್ಲಿ ಭರವಸೆ ಸಾಯುತ್ತಿದೆ; ಪಾರಾಗಲು ಪ್ರಯತ್ನಿಸುತ್ತಿರುವ ಕ್ರೈಸ್ತರು
ವರದಿ: ಸಾಲ್ವತೋರೆ ಚೆರ್ನೂಝಿಯೋ, ಅಜಯ್ ಕುಮಾರ್
ಸಿರಿಯಾ ದೇಶಕ್ಕೆ ಪ್ರೇಷಿತ ರಾಯಭಾರಿಯಾಗಿರುವ ಕಾರ್ಡಿನಲ್ ಮಾರಿಯೋ ಝೆನಾರಿ ಅವರು ಪ್ರಸ್ತುತ ಸಿರಿಯಾ ದೇಶದ ಅಲೆಪ್ಪೋ ಪ್ರಾಂತ್ಯದ ಕುರಿತು ವ್ಯಾಟಿಕನ್ ನ್ಯೂಸ್ ಸುದ್ದಿತಾಣಕ್ಕೆ ಸಂದರ್ಶನವನ್ನು ನೀಡಿದ್ದು, ಅಲ್ಲಿನ ಸ್ಥಿತಿಗತಿಗಳ ಕುರಿತು ಮಾತನಾಡಿದ್ದಾರೆ. ಜಿಹಾದಿಗಳು ಅಲೆಪ್ಪೋ ನಗರವನ್ನು ವಶಪಡಿಸಿಕೊಂಡಿರುವ ಹಿನ್ನೆಲೆ, ಇಲ್ಲಿನ ಕ್ರೈಸ್ತರು ಇಲ್ಲಿಂದ ಪರಾರಿಯಾಗಲು ಪ್ರಯತ್ನಿಸುತ್ತಿದ್ದು, ಭರವಸೆ ಎಂಬುದೇ ಇಲ್ಲಿ ಉಳಿದಿಲ್ಲ ಎಂದು ಹೇಳಿದ್ದಾರೆ.
ಕಳೆದ ಹದಿನಾರು ವರ್ಷಗಳಿಂದ ಇಟಲಿಯ ಕಾರ್ಡಿನಲ್ ಮಾರಿಯೋ ಝೆನಾರಿ ಅವರು ಸಿರಿಯಾ ದೇಶಕ್ಕೆ ಪ್ರೇಷಿತ ರಾಯಭಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
"ಪ್ರಪ್ರಥಮ ಬಾರಿಗೆ ಸಿರಿಯಾ ದೇಶದ ಎರಡನೇ ಅತಿ ದೊಡ್ಡ ನಗರವಾದ ಅಲೆಪ್ಪೋ ಸರ್ಕಾರದ ಕೈಯಿಂದ ಬಿಡಿಸಿಕೊಂಡು, ಸಂಪೂರ್ಣ ಜಿಹಾದಿಗಳ ವಶದಲ್ಲಿದೆ" ಎಂದು ಕಾರ್ಡಿನಲ್ ಝೆನಾರಿ ಅವರು ವ್ಯಾಟಿಕನ್ ನ್ಯೂಸ್ ಸುದ್ದಿತಾಣಕ್ಕೆ ಹೇಳಿದ್ದಾರೆ.
ಸಿರಿಯಾದಲ್ಲಿ ಶಾಂತಿ ಮಾಯವಾಗಿದೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಕಾರ್ಡಿನಲ್ ಝೆನಾರಿ ಅವರು "ಕಳೆದ ಎರಡು ವರ್ಷಗಳಿಂದ ಮಾಧ್ಯಮಗಳಲ್ಲಿ ಸಿರಿಯಾ ಹೆಸರೇ ಇರಲಿಲ್ಲ. ಇದೀಗ ಜಿಹಾದಿಗಳು ದಾಳಿ ನಡೆಸಿದ ನಂತರ ಸಿರಿಯಾ ಎಲ್ಲಾ ಮಾಧ್ಯಮಗಳಲ್ಲೂ ಬರುತ್ತಿದೆ. ಇಲ್ಲಿನ ಕ್ರೈಸ್ತ ಸಮುದಾಯಕ್ಕೆ ಏನಾಗುತ್ತಿದೆ ಎಂಬ ಕುರಿತು ನಾನು ಇಲ್ಲಿನ ಧರ್ಮಾಧ್ಯಕ್ಷರು, ಗುರುಗಳು ಹಾಗೂ ಧಾರ್ಮಿಕರ ಸಂಪರ್ಕದಲ್ಲಿ ಸದಾ ಇದ್ದೇನೆ. ಕೆಲವೊಂದು ಸ್ಥಳಗಳಲ್ಲಿ ಶಾಂತಿಯುತ ವಾತಾವರಣವಿದ್ದರೂ ಸಹ ಒಮ್ಮೆಲೆ ಏನಾಗುತ್ತದೆ ಎಂಬ ಭಯ ಎಲ್ಲರನ್ನೂ ಕಾಡುತ್ತಿದೆ" ಎಂದು ಹೇಳಿದರು.
ಪ್ರಸ್ತುತ ಇಲ್ಲಿನ ಸ್ಥಿತಿಗತಿಗಳ ಕುರಿತು ಮಾತನಾಡಿ ಎಂಬ ಪ್ರಶ್ನೆಗೆ ಉತ್ತರಿಸುತ್ತಾ, ಕಾರ್ಡಿನಲ್ ಮಾರಿಯೋ ಝೆನಾರಿ ಅವರು "ಸದ್ಯಕ್ಕೆ ಇಲ್ಲಿ ಗೊಂದಲಮಯ ವಾತಾವರಣವಿದೆ. ಯಾವುದರ ಕುರಿತೂ ಸ್ಪಷ್ಟ ಚಿತ್ರಣವಿಲ್ಲ. ಆದರೆ, ಮುಂದೆ ಏನಾಗುತ್ತದೆ ಎಂಬ ಭಯ ಎಲ್ಲರಲ್ಲೂ ಇದೆ. ಇಲ್ಲಿಂದ ಪರಾರಿಯಾಗಬೇಕು ಎಂಬ ಕ್ರೈಸ್ತರಿಗೆ ನಮ್ಮ ಧರ್ಮಾಧ್ಯಕ್ಷರು ಹಾಗೂ ಗುರುಗಳು ನಾವೂ ಇಲ್ಲೇ ಇರುತ್ತೇವೆ ಎಂಬ ಧೈರ್ಯವನ್ನು ನೀಡುತ್ತಿದ್ದಾರೆ" ಎಂದು ಅವರು ಹೇಳಿದರು.
ಅಲೆಪ್ಪೋ ನಗರದಿಂದ ಇತರೆ ನಗರಗಳಿಗೆ ಹಿಂಸಾಚಾರ ಹಬ್ಬುವುದೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು "ಯಾವುದಕ್ಕೂ ಇಲ್ಲಿ ಸ್ಪಷ್ಟನೇ ಎಂಬುದಿಲ್ಲ. ಅದರ ಸಾಧ್ಯತೆಗಳನ್ನು ನಾವು ತಳ್ಳಿ ಹಾಕಲಾಗುವುದಿಲ್ಲ. ಮುಂದೇನಾಗುತ್ತದೋ ದೇವರಿಗೇ ಗೊತ್ತು. ಸದ್ಯಕ್ಕೆ ಮಾತ್ರ ಎಲ್ಲೆಡೆ ಭಯದ ವಾತಾವರಣವಿದೆ" ಎಂದು ಕಾರ್ಡಿನಲ್ ಮಾರಿಯೋ ಝೆನಾರಿ ಅವರು ಹೇಳಿದ್ದಾರೆ.