ಹುಡುಕಿ

ಮೊದಲ ಆಗಮನಕಾಲದ ಪ್ರಬೋಧನೆಯನ್ನು ನೀಡಿದ ಫಾದರ್ ಪಸೋಲಿನಿ

ಇತ್ತೀಚೆಗಷ್ಟೇ ವಿಶ್ವಗುರುಗಳ ನಿವಾಸದ ಪ್ರಬೋಧಕರಾಗಿ ನೇಮಿತರಾದ ಕಪುಚಿನ್ ಸಭೆಯ ಫಾದರ್ ರೊಬೆರ್ತೋ ಪಸೋಲಿನಿ ಅವರು ಮೊದಲ ಬಾರಿಗೆ ಆಗಮನ ಕಾಲದ ಪ್ರಬೋಧನೆಯನ್ನು ಪೋಪ್ ಫ್ರಾನ್ಸಿಸ್ ಅವರು ಸೇರಿದಂತೆ ವ್ಯಾಟಿಕನ್ನಿನ ಕಾರ್ಡಿನಲ್ಲುಗಳು, ಧರ್ಮಾಧ್ಯಕ್ಷರು, ಗುರುಗಳು, ಧಾರ್ಮಿಕ ಸಹೋದರ ಸಹೋದರಿಯರು ಹಾಗೂ ಶ್ರೀಸಾಮಾನ್ಯರಿಗೆ ನೀಡಿದ್ದಾರೆ. ಜ್ಯೂಬಿಲಿಯ ವಿಷಯವಸ್ತು ಸೇರಿದಂತೆ ಭರವಸೆಯ ಅಂಶಗಳನ್ನು ಅವರ ಪ್ರಬೋಧನೆ ಒಳಗೊಂಡಿದೆ.

ವರದಿ: ಅಲೆಸಾಂದ್ರೋ ಡಿ ಬುಸ್ಸೋಲೋ, ಅಜಯ್ ಕುಮಾರ್

ಇತ್ತೀಚೆಗಷ್ಟೇ ವಿಶ್ವಗುರುಗಳ ನಿವಾಸದ ಪ್ರಬೋಧಕರಾಗಿ ನೇಮಿತರಾದ ಕಪುಚಿನ್ ಸಭೆಯ ಫಾದರ್ ರೊಬೆರ್ತೋ ಪಸೋಲಿನಿ ಅವರು ಮೊದಲ ಬಾರಿಗೆ ಆಗಮನ ಕಾಲದ ಪ್ರಬೋಧನೆಯನ್ನು ಪೋಪ್ ಫ್ರಾನ್ಸಿಸ್ ಅವರು ಸೇರಿದಂತೆ ವ್ಯಾಟಿಕನ್ನಿನ ಕಾರ್ಡಿನಲ್ಲುಗಳು, ಧರ್ಮಾಧ್ಯಕ್ಷರು, ಗುರುಗಳು, ಧಾರ್ಮಿಕ ಸಹೋದರ ಸಹೋದರಿಯರು ಹಾಗೂ ಶ್ರೀಸಾಮಾನ್ಯರಿಗೆ ನೀಡಿದ್ದಾರೆ. ಜ್ಯೂಬಿಲಿಯ ವಿಷಯವಸ್ತು ಸೇರಿದಂತೆ ಭರವಸೆಯ ಅಂಶಗಳನ್ನು ಅವರ ಪ್ರಬೋಧನೆ ಒಳಗೊಂಡಿದೆ.

"ಗೇಬ್ರಿಯೆಲ್ ದೇವದೂತನು ಮಾತೆ ಮರಿಯಳಿಗೆ ಮಂಗಳವಾರ್ತೆಯನ್ನು ನೀಡಿದ ನಂತರ ಮಾತೆ ಮರಿಯಮ್ಮನವರು ಆಶ್ಚರ್ಯ ಚಕಿತರಾಗಿ ಚಿಂತಿಸಿದಂತೆ ನಾವೂ ಸಹ ದೇವರ ಇರುವಿಕೆ ಹಾಗೂ ವರದಾನಗಳ ಕುರಿತು ಆಶ್ಚರ್ಯಚಕಿತರಾಗಿ ಚಿಂತಿಸಬೇಕು" ಎಂದು ಫಾದರ್ ಪಸೋಲಿನಿ ಅವರು ಹೇಳಿದರು.

ಇದೇ ಸಂದರ್ಭದಲ್ಲಿ ಫಾದರ್ ಪಸೋಲಿನಿ ಅವರು ತಮ್ಮದೇ ಧಾರ್ಮಿಕ ಸಭೆಯ ವಿಶ್ವಗುರುಗಳ ನಿವಾಸದ ಹಿಂದಿನ ಪ್ರಬೋಧಕರಾದ ಕಾರ್ಡಿನಲ್ ರನೇರೋ ಕಾಂಟಲಮೆಸ್ಸಾ ಅವರಿಗೆ, ಅವರ 44 ವರ್ಷಗಳ ಸೇವೆಗಾಗಿ ಧನ್ಯವಾದಗಳನ್ನು ತಿಳಿಸಿದರು ಹಾಗೂ ತಮ್ಮ ಶೀರ್ಷಿಕೆಯ ಮೊದಲನೇ ಭಾಗವಾದ ಆಶ್ಚರ್ಯದ ದ್ವಾರದ ಚಿಂತನೆಗೆ ಎಲ್ಲರಿಗೂ ಆಹ್ವಾನವನ್ನು ನೀಡಿದರು.

ಆಧ್ಯಾತ್ಮಿಕ ಪಯಣದಲ್ಲಿ ಧೈರ್ಯವನ್ನು ಹೊಂದಿರುವ ಕುರಿತು ಪ್ರವಾದಿಗಳ ಧ್ವನಿಯನ್ನು ನಾವು ಆಲಿಸಬೇಕು ಎಂದು ಹೇಳಿದ ಫಾದರ್ ಪಸೋಲಿನಿ ಅವರು 'ಇತಿಹಾಸದಲ್ಲಿ ದೇವರ ಇರುವಿಕೆಯನ್ನು ಹಾಗೂ ಅವರ ಮಹತ್ಕಾರ್ಯಗಳನ್ನು ನಾವು ಗುರುತಿಸಬೇಕು. ಆ ಮೂಲಕ ಪ್ರವಾದಿಗಳ ಹಾದಿಯಲ್ಲಿ ಮುನ್ನಡೆಯಬೇಕು ಎಂದು ಹೇಳಿದರು. ಇದೇ ವೇಳೆ ಅವರು ಎಲಿಜಬೇತ್ ಹಾಗೂ ಮಾತೆ ಮರಿಯಮ್ಮನವರ ಉದಾಹರಣೆಯನ್ನು ನೀಡುವ ಮೂಲಕ ತಮ್ಮ ಪ್ರಬೋಧನೆಯ ಅಂಶಗಳನ್ನು ನೆರೆದಿದ್ದವರಿಗೆ ಮನವರಿಕೆ ಮಾಡಲು ಪ್ರಯತ್ನಿಸಿದರು.

ಮುಂದುವರೆದು ಫಾದರ್ ಪಸೋಲಿನಿ ಅವರು ಭರವಸೆಯ ಕುರಿತು ಮಾತನಾಡಿದರು. "ಜ್ಯೂಬಿಲಿ ವರ್ಷಕ್ಕೆ ನಾವು ಕಾಲಿಡುತ್ತಿದ್ದೇವೆ. ಜ್ಯೂಬಿಲಿ ಎಂದರೆ ಭರವಸೆಯನ್ನು ಹೊಂದುವುದು ಎಂದರ್ಥ. ನಮ್ಮ ಈ ಜಗತ್ತಿನಲ್ಲಿ ಎಂಥದ್ದೇ ನೋವು, ಸಂಕಷ್ಟಗಳು ಹಾಗೂ ನಕಾರಾತ್ಮಕತೆಗಳಿದ್ದರೂ ಅತ್ಯುತ್ತಮವಾದದ್ದು ಇನ್ನಷ್ಟೇ ಬರಲಿದೆ ಎಂಬ ನಂಬಿಕೆಯನ್ನು ನಾವು ಹೊಂದಬೇಕೆಂದು ಫಾದರ್ ಪಸೋಲಿನಿ ಅವರು ಹೇಳಿದರು.

ಅಂತಿಮವಾಗಿ ಮಾತನಾಡಿದ ಫಾದರ್ ಪಸೋಲಿನಿ ಅವರು ಮಾತೆ ಮರಿಯಮ್ಮನವರ ಸಮರ್ಪಣಾ ಭಾವವನ್ನು ನಾವೆಲ್ಲರೂ ಬದುಕಿನಲ್ಲಿ ಆಳವಡಿಸಿಕೊಳ್ಳುವುದರ ಪ್ರಾಮುಖ್ಯತೆಯ ಕುರಿತು ಮಾತನಾಡಿ, ಎಲ್ಲರಿಗೂ ಭರವಸೆಯಿಂದಿರುವಂತೆ ಹೇಳಿದರು.    

06 December 2024, 16:44