ಬಡವರೊಂದಿಗೆ ಊಟ ಮಾಡುವುದು ನೂತನ ಕಾರ್ಡಿನಲ್ ಒಬ್ಬರ ಮೊದಲ ಕಾರ್ಯವಾಗಿದೆ
ವರದಿ: ಕೀಲ್ಚೆ ಗುಸ್ಸೀ, ಅಜಯ್ ಕುಮಾರ್
ಫ್ರೆಂಚ್ ಕಾರ್ಡಿನಲ್ ಜಿಯಾನ್-ಪೌಲ್ ವೆಸ್ಕೋ ಅವರು ಕಾರ್ಡಿನಲ್ ಆದ ನಂತರ, ಅಂದರೆ ಎರಡನೇ ದಿನ ರೋಮ್ ನಗರದ ಬಡವರೊಂದಿಗೆ ಊಟವನ್ನು ಮಾಡುವ ಮೂಲಕ ಸರಳತೆಯನ್ನು ಮೆರೆದಿದ್ದಾರೆ.
ಡಿಸೆಂಬರ್ 7ನೇ ತಾರೀಖಿನಂದು ಪೋಪ್ ಫ್ರಾನ್ಸಿಸ್ ಅವರು ಅಲ್ಜೀರಿಯಾದ ಅಲ್ಜಿಯೆರ್ಸ್ ಧರ್ಮಕ್ಷೇತ್ರದ ಮಹಾಧರ್ಮಾಧ್ಯಕ್ಷರಾಗಿದ್ದ ಇವರನ್ನು ಕಾರ್ಡಿನಲ್ ಪದವಿಗೇರಿಸಿದರು. ಕಾರ್ಡಿನಲ್ ಜಿಯಾನ್-ಪೌಲ್ ವೆಸ್ಕೋ ಅವರು ಡೊಮಿನಿಕನ್ ಸಭೆಯ ಗುರುಗಳಾಗಿದ್ದಾರೆ. ಇವರು ಗುರುಗಳಾಗುವುದಕ್ಕೂ ಮೊದಲು ವಕೀಲರಾಗಿ ಸೇವೆ ಸಲ್ಲಿಸುತ್ತಿದ್ದರು. ತಮ್ಮ 34ನೇ ವಯಸ್ಸಿನಲ್ಲಿ ಡೊಮಿನಿಕನ್ ಸಭೆಯನ್ನು ಸೇರಿದ ಇವರನ್ನು ಹದಿನಾಲ್ಕು ವರ್ಷಗಳ ನಂತರ ಅಲ್ಜೀರಿಯಾದ ಒರಾನ್ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾಗಿ ನೇಮಿಸಲ್ಪಡುತ್ತಾರೆ.
ವಿಶೇಷತೆ ಎಂದರೆ ಇವರು ಕಾರ್ಡಿನಲ್ ಪದವಿಗೇರುವ ಸಂದರ್ಭದಲ್ಲಿ ಸಾಂಪ್ರದಾಯಿಕ ಕಾರ್ಡಿನಲ್ ಉಡುಗೆಯನ್ನು ತೊಡದೆ, ಡೊಮಿನಿಕನ್ ಸಭೆಯ ಶ್ವೇತ ಅಂಗಿಯಲ್ಲಿಯೇ ಕಾರ್ಡಿನಲ್ ಪದವಿಯನ್ನು ಪಡೆದರು. ಇವರೊಂದಿಗೆ ಇದೇ ಡೊಮಿನಿಕನ್ ಸಭೆಯ ಫಾದರ್ ಥಿಮೊಥಿ ರ್ಯಾಡ್ಕ್ಲಿಫ್ ಅವರೂ ಸಹ ಶ್ವೇತ ಅಂಗಿಯಲ್ಲಿಯೇ ಕಾರ್ಡಿನಲ್ ಪದವಿಯನ್ನು ಪಡೆದರು.
ಕಾರ್ಡಿನಲ್ ಜಿಯಾನ್-ಪೌಲ್ ವೆಸ್ಕೋ ಅವರು ರೋಮ್ ನಗರದ ಬಡವರೊಂದಿಗೆ ರಾತ್ರಿಯ ಊಟವನ್ನು ಮಾಡುವ ಮೂಲಕ ಧರ್ಮಸಭೆಯ ನಿಜವಾದ ಕಾಳಜಿಯನ್ನು ಸಾರಿದ್ದಾರೆ ಹಾಗೂ ಮಾದರಿಯಾಗಿದ್ದಾರೆ.