ಪೋಪ್ ಫ್ರಾನ್ಸಿಸ್: ನಮ್ಮ ಬದುಕನ್ನು ನಿಯಂತ್ರಿಸಲು ಜ್ಯೂಬಿಲಿ ಒಂದು ಸದಾವಕಾಶ
ವರದಿ: ಡೆವಿನ್ ವಾಟ್ಕಿನ್ಸ್, ಅಜಯ್ ಕುಮಾರ್
ಪೋಪ್ ಫ್ರಾನ್ಸಿಸ್ ಅವರು ಇಂದು ವ್ಯಾಟಿಕನ್ ನಗರದಲ್ಲಿ ಸಿಸ್ಟರ್ಸ್ ಆಫ್ ಹೋಲಿ ಫ್ಯಾಮಿಲಿ ಆಫ್ ನಝರೇತ್ ಧಾರ್ಮಿಕ ಸಭೆಯ ಭಗಿನಿಯರನ್ನು ಭೇಟಿ ಮಾಡಿದ್ದು, ಜ್ಯೂಬಿಲಿ ಎಂಬುದು ನಮ್ಮ ಬದುಕು ಎತ್ತ ಸಾಗುತ್ತಿದೆ ಎಂದು ತಿಳಿದುಕೊಳ್ಳಲು ಹಾಗೂ ಅದನ್ನು ಮತ್ತೆ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಇರುವ ಸದಾವಕಾಶ ಎಂದು ಹೇಳಿದ್ದಾರೆ.
ಸಿಸ್ಟರ್ಸ್ ಆಫ್ ಹೋಲಿ ಫ್ಯಾಮಿಲಿ ಆಫ್ ನಝರೇತ್ ಧಾರ್ಮಿಕ ಸಭೆಯು ತನ್ನ ಸ್ಥಾಪನೆಯ ನೂರೈವತ್ತನೇ ವರ್ಷಾಚರಣೆಯನ್ನು ಆಚರಿಸುತ್ತಿರುವ ಹಿನ್ನೆಲೆ ಪೋಪ್ ಫ್ರಾನ್ಸಿಸ್ ಅವರನ್ನು ಭೇಟಿ ಮಾಡಿ, ಅವರಿಗೆ ಶುಭಾಶಯಗಳನ್ನು ಕೋರಿದರು. ಈ ವೇಳೆ ಅವರು ಈ ಮಾತನ್ನು ಆಡಿದ್ದಾರೆ. ಈ ಧಾರ್ಮಿಕ ಸಭೆಯ ಭಗಿನಿಯರು ವಿಶ್ವದ ಹದಿನಾಲ್ಕು ದೇಶಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಈ ವರ್ಷಾಚರಣೆ ಹಿನ್ನೆಲೆಯಲ್ಲಿ ಅವರನ್ನು ಉದ್ದೇಶಿಸಿ ಮಾತನಾಡಿದ ಪೋಪ್ ಫ್ರಾನ್ಸಿಸ್ ಅವರು "ಈ ಸಂದರ್ಭದಲ್ಲಿ ದೇವರಿಗೆ ನೀವು ಕೃತಜ್ಞತೆಗಳನ್ನು ಸಲ್ಲಿಸಬೇಕು. ಪ್ರಭುವಿನ ಕಡೆಗೆ ಕೃತಜ್ಞತಾ ಭಾವದಿಂದ ನಿಮ್ಮ ಹೃದಯಗಳನ್ನು ಎತ್ತಬೇಕು" ಎಂದು ಹೇಳಿದ ಅವರು "ತಾಳ್ಮೆಯುಕ್ತ ಭರವಸೆಯಿಂದ ಅವರ ಬರುವಿಕೆಗಾಗಿ ಕಾತುರದಿಂದ ಕಾಯಬೇಕು" ಎಂದು ನೆರೆದಿದ್ದ ಭಗಿನಿಯರಿಗೆ ಪೋಪ್ ಫ್ರಾನ್ಸಿಸ್ ಅವರು ಕಿವಿಮಾತನ್ನು ಹೇಳಿದರು.
"ಈ ನಿಮ್ಮ ಆಚರಣೆಗಳು ನಿಮ್ಮ ಧಾರ್ಮಿಕ ಸಭೆಯ ಎಲ್ಲಾ ಸದಸ್ಯರಿಗೆ ಒಳಿತನ್ನು ಉಂಟುಮಾಡಲಿ ಎಂದು ನಾನು ಪ್ರಾರ್ಥಿಸುತ್ತೇನೆ" ಎಂದು ಹೇಳಿದ ಪೋಪ್ ಫ್ರಾನ್ಸಿಸ್ ಅವರು "ಪರಮ ಪ್ರಸಾದದ ಕ್ರಿಸ್ತರ ಕೃಪಾಶೀರ್ವಾದಗಳೊಂದಿಗೆ ನೀವೆಲ್ಲರೂ ಇನ್ನೂ ಹೆಚ್ಚು ಸೇವೆ ಸಲ್ಲಿಸುವಂತಾಗಲಿ" ಎಂದು ನುಡಿದರು.
ಇದೇ ಸಂದರ್ಭದಲ್ಲಿ ಯುದ್ಧದಿಂದ ಸಂಕಷ್ಟವನ್ನು ಎದುರಿಸುತ್ತಿರುವ ಕುಟುಂಬಗಳನ್ನು ನೆನಪಿಸಿಕೊಂಡ ಪೋಪ್ ಫ್ರಾನ್ಸಿಸ್ ಅವರು "ದಯಾಮಯ ದೇವರು ಇವರನ್ನು ಸಂಕಷ್ಟಗಳಿಂದ ಪಾರುಮಾಡಲಿ. ಅವುಗಳನ್ನು ಎದುರಿಸುವ ಶಕ್ತಿಯನ್ನು ಅವರಿಗೆ ನೀಡಲಿ. ಅಂತಿಮವಾಗಿ, ಈ ಜಗತ್ತಿನಲ್ಲಿ ನಡೆಯುತ್ತಿರುವ ಎಲ್ಲಾ ರೀತಿಯ ಯುದ್ಧಗಳು ಕೊನೆಗೊಂಡು, ಶಾಂತಿ ನೆಲೆಸಲಿ" ಎಂದು ಹೇಳಿದರು.