ತೈವಾನ್ ಭೂಕಂಪ: 9 ಜನರ ದುರ್ಮರಣ, 900 ಜನರಿಗೆ ತೀವ್ರ ಹಾನಿ
ವರದಿ: ವ್ಯಾಟಿಕನ್ ನ್ಯೂಸ್
ತೈವಾನ್ ದ್ವೀಪದ ಪೂರ್ವ ಕರಾವಳಿಯಲ್ಲಿ ಸಂಭವಿಸಿದ ಭೂಕಂಪವು ಬುಧವಾರ 9 ಜನರ ಮರಣಕ್ಕೆ ಕಾರಣವಾಗಿದ್ದು ಇದರಿಂದ ಸುಮಾರು ಸಾವಿರಕ್ಕೂ ಅಧಿಕ ಜನರು ಅಪಾರ ಸಂಕಷ್ಟವನ್ನು ಹಾಗೂ ಹಾನಿಯನ್ನು ಅನುಭವಿಸಿದ್ದಾರೆ. ಇದು ತೈವಾನ್ ದ್ವೀಪದ ಇತಿಹಾಸದಲ್ಲೇ ಕಳೆದ 25 ವರ್ಷಗಳಲ್ಲಿ ಸಂಭವಿಸಿದ ಅತಿ ದೊಡ್ಡ ಭೂಕಂಪವಾಗಿದೆ. ಈ ಭೂಕಂಪದ ತೀವ್ರತೆ 7.4 ಮ್ಯಾಗ್ನಿಟ್ಯೂಡ್'ನಷ್ಟಿದೆ.
ಅಮೆರಿಕ ಭೌಗೋಳಿಕ ಸರ್ವೇಕ್ಷಣೆಯ ಪ್ರಕಾರ ಈ ಭೂಕಂಪದ ಕೇಂದ್ರಬಿಂದು ದಕ್ಷಿಣ ತೈವಾನಿನ ಹುವಾಲಿಯನ್ ನಗರದ ಬಳಿ ಇದೆ. ಮುಂಜಾನೆ ಸುಮಾರು ಎಂಟು ಗಂಟೆಗೆ ಸಂಭವಿಸಿದ ಈ ಭೂಕಂಪವು, ಹಲವು ತರಂಗಗಳನ್ನು ಸೃಷ್ಟಿಸಿದ್ದು, ದ್ವೀಪದಾದ್ಯಂತ ಹಳೆಯ ಕಟ್ಟಡಗಳ ಮೇಲಿನಿಂದ ಚಾವಣಿಗಳು ಬಿದ್ದಿರುವುದು ವರದಿಯಾಗಿದೆ ಎಂದು ತೈವಾನಿನ ರಾಷ್ಟ್ರೀಯ ಅಗ್ನಿಶಾಮಕ ದಳವು ಖಚಿತಪಡಿಸಿದೆ. ಭೂಕಂಪ ಸಂಭವಿಸಿದ ತಕ್ಷಣವೇ ಶಾಲೆಗಳಲ್ಲಿನ ವಿದ್ಯಾರ್ಥಿಗಳನ್ನು ತೆರೆದ ಮೈದಾನಕ್ಕೆ ವರ್ಗಾಯಿಸಲಾಗಿದ್ದು, ಅವರಿಗೆ ಹಳದಿ ಬಣ್ಣದ ರಕ್ಷಣಾತ್ಮಕ ಹೆಲ್ಮೆಟ್'ಗಳನ್ನು ನೀಡಲಾಯಿತು.
ಸಾಮಾನ್ಯವಾಗಿ, ತೈವಾನ್ ದ್ವೀಪವು ನಿಯಮಿತವಾಗಿ ಭೂಕಂಪನಗಳಿಗೆ ಸಾಕ್ಷಿಯಾಗುತ್ತದೆ. ಆದರೆ ಸರ್ಕಾರವು ಈ ಬಾರಿಯ ಭೂಕಂಪ ಸಣ್ಣ ಮಟ್ಟದ್ದಾಗಿದ್ದು ಯಾವುದೇ ಗುರುತರ ಹಾನಿ ಉಂಟಾಗುವುದಿಲ್ಲ ಎಂದು ಅಂದಾಜಿಸಿದ ಕಾರಣ ನಾಗರಿಕರಿಗೆ ಯಾವುದೇ ಮುನ್ನೆಚ್ಚರಿಕೆಯನ್ನು ನೀಡಿರುವುದಿಲ್ಲ.
ಭೂಕಂಪದ ಹಿನ್ನೆಲೆಯಲ್ಲಿ ತೈವನ್ ದ್ವೀಪದ ಪೂರ್ವ ಕರಾವಳಿಯಾದ್ಯಂತ ಟ್ರಾಫಿಕ್ ಜಾಮ್ ಉಂಟಾಗಿದ್ದು, ಭೂಕಂಪದ ಅವಶೇಷಗಳು ಹೆದ್ದಾರಿಗಳಲ್ಲಿ ಬಿದ್ದಿವೆ. ಈ ಭೂಕಂಪದಲ್ಲಿ ಸುಮಾರು 12 ಕ್ಕೂ ಹೆಚ್ಚಿನ ಜನರು ಸಿಲುಕಿಕೊಂಡಿದ್ದಾರೆ. ದ್ವೀಪದಾದ್ಯಂತ ರೈಲು ಸೇವೆಗಳನ್ನು ಅಮಾನತ್ತು ಮಾಡಲಾಗಿದ್ದು, ಈ ಕುರಿತು ಸರ್ಕಾರವು ಮುಂದಿನ ಆದೇಶದವರೆಗೆ ಯಾವುದೇ ಸೇವೆ ಲಭ್ಯವಿರುವುದಿಲ್ಲ ಎಂದು ನಾಗರಿಕರಿಗೆ ತಿಳಿಸಿದೆ.
ಹುವಾಲಿಯನ್ ಧರ್ಮಕ್ಷೇತ್ರದಲ್ಲಿ ಯಾವುದೇ ಕಥೋಲಿಕ ಭಕ್ತಾಧಿಗಳಿಗೂ ಹಾನಿಯುಂಟಾಗಿರುವುದಿಲ್ಲ.
ಹುವಾಲಿಯನ್ ಧರ್ಮಕ್ಷೇತ್ರದ ಧರ್ಮಾಧ್ಯಕ್ಷ ಫಿಲಿಪ್ ಹುವಾಂಗ್ ಅವರ ಪ್ರಕಾರ ಹುವಾಲಿಯನ್ ಧರ್ಮಕ್ಷೇತ್ರದಲ್ಲಿ ಯಾವುದೇ ಕಥೋಲಿಕ ಭಕ್ತಾಧಿಗಳಿಗೂ ಹಾನಿಯುಂಟಾಗಿರುವುದಿಲ್ಲ. ಯಾವುದೇ ಚರ್ಚ್ ಅಥವಾ ಚರ್ಚಿಗೆ ಸಂಬಂಧಿಸಿದ ಕಟ್ಟಡಗಳಿಗೆ ಹಾನಿಯಾಗಿರುವುದಿಲ್ಲ ಎಂದೂ ವರದಿಯಾಗಿದೆ. ಅದಾಗ್ಯೂ, ಇಲ್ಲಿನ ಧರ್ಮಾಧ್ಯಕ್ಷರು ಜನರಿಗೆ ಮುನ್ನೆಚ್ಚರಿಕೆಯಿಂದಿರುವಂತೆ ಮನವಿ ಮಾಡಿದ್ದಾರೆ.