ಅಮೆರಿಕ ಮಧ್ಯಪ್ರವೇಶದ ನಂತರ ಗಾಜಾಕ್ಕೆ ಹೊಸ ನೆರವಿನ ಹಾದಿಗಳು ತೆರೆದುಕೊಳ್ಳಲಿವೆ
ವರದಿ: ನೇಥನ್ ಮೋರ್ಲೆ, ಅಜಯ್ ಕುಮಾರ್
ಅಮೆರಿಕಾದ ಅಧ್ಯಕ್ಷ ಜೋ ಬೈಡನ್, ಇಸ್ರೇಲ್ ಪ್ರಧಾನ ಮಂತ್ರಿ ಬೆಂಜಮೀನ್ ನೇತನ್ಯಹು ಅವರಿಗೆ ಕರೆ ಮಾಡಿ ಮಾತನಾಡಿದ ನಂತರ, ಇಸ್ರೇಲ್ ಈ ನಡೆಯನ್ನು ವ್ಯಕ್ತಪಡಿಸಿದೆ ಎಂದು ಅಂದಾಜಿಸಲಾಗಿದೆ. ಮಾನವೀಯ ನೆರವನ್ನು ನೀಡಲು ಗಾಜಾ ಪಟ್ಟಿಗೆ ಹೊಸ ನೆರವಿನ ಹಾದಿಗಳನ್ನು ತೆರೆಯುವುದಾಗಿ ಇಸ್ರೇಲ್ ಘೋಷಿಸಿದೆ.
ಕಳೆದ ವರ್ಷ, ಇಸ್ರೇಲ್ ಸೇನೆಯ ಮೇಲೆ ಹಮಾಸ್ ಹಟಾತ್ ದಾಳಿ ನಡೆಸಿದ ನಂತರ, ಇದೇ ಮೊದಲ ಬಾರಿಗೆ ಎರ್ಜೆನ್ ಕ್ರಾಸಿಂಗ್ ತೆರೆಯಲಿದೆ ಎಂದು ಜೆರುಸಲೇಂ ಮೂಲಗಳು ವರದಿ ಮಾಡಿವೆ.
ಇಸ್ರೇಲ್ ಪ್ರಧಾನ ಮಂತ್ರಿ ನೆತನ್ಯಹು ಅವರ ಕಚೇರಿಯ ಮೂಲಗಳು ಹೇಳುವ ಪ್ರಕಾರ, ಗಾಜಾಪ್ರದೇಶಕ್ಕೆ ಮಾನವೀಯ ನೆರವನ್ನು ನೀಡಲು ಆಶಿದೋದ್ ಎಂಬಲ್ಲಿ ಹಾದಿಯನ್ನು ತೆರೆಯಲಾಗುವುದು ಹಾಗೂ ಅದೇ ರೀತಿ ಜೋರ್ಡಾನ್ ದೇಶದಿಂದ ಬರುವ ಮಾನವೀಯ ನೆರವನ್ನು ಗಾಜಾ ಪ್ರದೇಶಕ್ಕೆ ರವಾನಿಸಲು ಕೆರೆಂ ಶಾಲೋಮ್ ಎಂಬ ಪ್ರದೇಶದಲ್ಲಿ ಹಾದಿಯನ್ನು ತೆರೆಯಲಾಗುವುದು ಎಂದು ವರದಿಯಾಗಿದೆ.
ಕಳೆದ ವರ್ಷ ಅಕ್ಟೋಬರ್ ತಿಂಗಳಿನಲ್ಲಿ ಇಸ್ರೇಲ್ ದೇಶವು ಗಾಜಾ ಪ್ರದೇಶಕ್ಕೆ ಬರುವ ಎಲ್ಲಾ ರೀತಿಯ ವಿದ್ಯುತ್ ನೀರು ಹಾಗೂ ಆಹಾರಗಳ ಸರಬರಾಜನ್ನು ನಿಲ್ಲಿಸಿದ ಪರಿಣಾಮ, ಗಾಜಾದ ಜನರು ಅಕ್ಷರಶಃ ಬರಗಾಲವನ್ನು ಎದುರಿಸುತ್ತಿದ್ದಾರೆ ಎಂದು ವಿಶ್ವಸಂಸ್ಥೆಯ ತಜ್ಞರು ಎಚ್ಚರಿಕೆ ನೀಡಿದ್ದಾರೆ.
ಇದೇ ವೇಳೆ, ವರ್ಲ್ಡ್ ಸೆಂಟ್ರಲ್ ಕಿಚನ್ ಸಂಸ್ಥೆಯು ಅದರ ಏಳು ಮಂದಿ ಸಿಬ್ಬಂದಿಗಳು ಇಸ್ರೇಲ್ ಸೇನೆಯು ನಡೆಸಿದ ವಾಯುದಾಳಿಯ ಹಿನ್ನೆಲೆಯಲ್ಲಿ ಹತ್ಯೆಯಾದ ಕಾರಣ ಈ ಕುರಿತು ಸ್ವತಂತ್ರ ತನಿಖೆಯನ್ನು ನಡೆಸುವಂತೆ ಒತ್ತಾಯಿಸಿದೆ.
ಗಾಜಾಪ್ರದೇಶದಲ್ಲಿ ಏನು ನಡೆದಿದೆ ಎಂಬುದನ್ನು ನಿಖರವಾಗಿ ತಿಳಿದುಕೊಳ್ಳಲು ಸ್ವತಂತ್ರ ತನಿಖೆಯೊಂದೇ ಪರಿಹಾರ ಎಂದು ಹೇಳಿರುವ ಈ ಸಂಸ್ಥೆಯು, ಪಾರದರ್ಶಕತೆ ಹಾಗೂ ಉತ್ತರದಾಯಿತ್ವಕ್ಕಾಗಿ ಈ ಘಟನೆಯ ಹಿಂದೆ ಇರುವ ವ್ಯಕ್ತಿಗಳನ್ನು ಹೊಣೆಗಾರರನ್ನಾಗಿಸಲು ಹಾಗೂ ಭವಿಷ್ಯದಲ್ಲಿ ಇಂತಹ ದಾಳಿಗಳನ್ನು ತಡೆಗಟ್ಟಲು ಸ್ವತಂತ್ರ ತನಿಖೆಯನ್ನು ನಡೆಸಲೇಬೇಕೆಂದು ಒತ್ತಾಯಿಸಿದ್ದಾರೆ.
ಬುಧವಾರ ನಡೆದ ವಾಯು ದಾಳಿಯ ಹಿನ್ನೆಲೆಯಲ್ಲಿ ಮೃತ ಹೊಂದಿದ ಆರು ಜನ ಮಾನವೀಯ ನೆರವು ಕಾರ್ಯಕರ್ತರ ಪಾರ್ಥಿವ ಶರೀರಗಳನ್ನು ರಫಾ ಕ್ರಾಸಿಂಗ್ ಮೂಲಕ ಅಂತ್ಯಸಂಸ್ಕಾರಕ್ಕಾಗಿ ರವಾನಿಸಲಾಗಿದೆ. ಈ ದಾಳಿಯನ್ನು ಅಂತರರಾಷ್ಟ್ರೀಯ ಸಮುದಾಯವು ತೀವ್ರವಾಗಿ ಖಂಡಿಸಿದೆ.
ಈ ವಾಯು ದಾಳಿಗೆ ಕಾರಣಕರ್ತರಾದ ಇಸ್ರೇಲ್ ಸೇನೆಯ ಹಿರಿಯ ಸೇನಾಧಿಕಾರಿಗಳನ್ನು ಇಸ್ರೇಲ್ ಸೇನೆಯು ಅಮಾನತ್ತು ಮಾಡಿದೆ.