ಮಾನವೀಯ ನೆರವು ಕಾರ್ಯಕರ್ತರ ಮೇಲಿನ ದಾಳಿ: ದುಃಖಕರ ಘಟನೆ ಎಂದ ಇಸ್ರಯೇಲ್ ಸೇನೆ
ವರದಿ: ನೇಥನ್ ಮೋರ್ಲೆ, ಅಜಯ್ ಕುಮಾರ್
ಇಸ್ರಯೇಲ್ ಸೇನೆಯು ಮಾನವೀಯ ನೆರವು ಸಿಬ್ಬಂಧಿಯನ್ನು ತಪ್ಪಾಗಿ ಗುರುತಿಸಿದ ಕಾರಣ, ತಪ್ಪಾದ ದುರ್ಘಟನೆ ನಡೆದಿದೆ ಎಂದು ಇಸ್ರಯೇಲ್ ಸರ್ಕಾರದ ವಕ್ತಾರ ಸೋಮವಾರ ಅಮೇರಿಕಾದ ವರ್ಲ್ಡ್ ಸೆಂಟ್ರಲ್ ಕಿಚನ್ ಸಿಬ್ಬಂಧಿಯ ಮೇಲೆ ನಡೆದ ವೈಮಾನಿಕ ದಾಳಿಯ ಕುರಿತು ಹೇಳಿದ್ದಾರೆ. ಆ ಮೂಲಕ ಇಸ್ರಯೇಲ್ ಸೇನೆಯ ತಪ್ಪನ್ನು ಸರ್ಕಾರವು ಒಪ್ಪಿಕೊಂಡಿದೆ.
ಈ ಮಾನವೀಯ ನೆರವಿನ ಸಂಸ್ಥಾಪಕರ ಹೇಳಿಕೆಯ ಪ್ರಕಾರ, ಉದ್ದೇಶಪೂರ್ವಕವಾಗಿ ಈ ದಾಳಿಯನ್ನು ಮಾಡಲಾಗಿದ್ದು, ನೆರವು ಸಿಬ್ಬಂಧಿಯ ವಾಹನವನ್ನು ಸುಮಾರು ಒಂದು ಕಿಲೋಮೀಟರ್'ವರೆಗೂ, ಅಂದರೆ ಎಲ್ಲರೂ ಸಾವನ್ನಪ್ಪುವವರೆಗೂ ಗುರಿ ಮಾಡಲಾಗಿತ್ತು ಎಂದು ಹೇಳಿದ್ದಾರೆ. ಈ ಘಟನೆಯ ನಂತರ ವಿಶ್ವಸಂಸ್ಥೆಯ ಮಾನವೀಯ ನೆರವು ಕಾರ್ಯಕರ್ತರು ಗಾಜಾದಲ್ಲಿ ರಾತ್ರಿಯ ವೇಳೆ ನೆರವು ನೀಡುವುದನ್ನು ಸ್ಥಗಿತಗೊಳಿಸಿದ್ದಾರೆ.
ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಂತೋನಿಯೋ ಗುಟೇರೆಸ್ ಅವರ ವಕ್ತಾರ ಸ್ಟೆಫಾನ್ ಡುಜಾರಿಕ್ ಹೇಳುವ ಪ್ರಕಾರ ವಿಶ್ವಸಂಸ್ಥೆಯ ಮಾನವೀಯ ನೆರವು ಕಾರ್ಯಕರ್ತರ ಮೇಲೆ ಪರಿಣಾಮ ಬೀರಿದ ಈ ಘಟನೆಯ ರಕ್ಷಣಾ ವ್ಯವಸ್ಥೆಯನ್ನು ಮೌಲ್ಯಮಾಪನ ಮಾಡುವ ಸಲುವಾಗಿ ಈ ಕ್ರಮವನ್ನು ಕೈಗೊಳ್ಳಲಾಗಿದೆ.
ಗಾಜಾದಲ್ಲಿ ಯುದ್ಧ ಆರಂಭವಾದಾಗಿನಿಂದ ಈವರೆಗೂ ಸುಮಾರು 176 ಮಾನವೀಯ ನೆರವು ಕಾರ್ಯಕರ್ತರು ಹತ್ಯೆಯಾಗಿದ್ದು, ಇವರಲ್ಲಿ 175 ಜನರು ವಿಶ್ವಸಂಸ್ಥೆಯ ವಿವಿಧ ಮಾನವೀಯ ನೆರವು ಸಂಸ್ಥೆಗಳಿಗೆ ಸೇರಿದವರಾಗಿದ್ದಾರೆ ಎಂದು ವರದಿಯಾಗಿದೆ.
ಇತ್ತೀಚೆಗೆ ಜೋರ್ಡಾನ್ ದೇಶದ ರಾಜ ಎರಡನೇ ಅಬ್ದುಲ್ಲಾ ಹಾಗೂ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಮಾನವೀಯ ನೆರವನ್ನು ನೀಡುವ ಪ್ರಕ್ರಿಯೆಯಲ್ಲಿ ನಿರತರಾಗಿರುವ ವ್ಯಕ್ತಿಗಳನ್ನು ರಕ್ಷಿಸುವುದರ ಪ್ರಾಮುಖ್ಯತೆಯ ಕುರಿತು ಮಾತನಾಡಿದ್ದರು.