ವಿಶ್ವಸಂಸ್ಥೆ: ನೆಲಬಾಂಬುಗಳಿಂದ ಹೆಚ್ಚುತ್ತಿರುವ ನಾಗರೀಕರ ಸಾವುಗಳು
ವರದಿ: ಜೋಸೆಫ್ ಟಲ್ಲೋಚ್, ಅಜಯ್ ಕುಮಾರ್
ವಿಶ್ವಸಂಸ್ಥೆಯ ಮಕ್ಕಳ ಆಯೋಗವು ನಡೆಸಿದ ಸಂಶೋಧನೆಯು ನೆಲಬಾಂಬುಗಳ ಸ್ಪೋಟದಿಂದ ಉಂಟಾಗುವ ನಾಗರೀಕರ ಸಾವುಗಳಲ್ಲಿ ಇತ್ತೀಚೆಗೆ ತೀವ್ರ ಏರಿಕೆಯಾಗಿದೆ ಎಂದು ವರದಿ ಮಾಡಿದೆ. ಗುರುವಾರ, ಏಪ್ರಿಲ್ 04 ರಂದು ಅಂತರಾಷ್ಟ್ರೀಯ ನೆಲಬಾಂಬು ಜಾಗೃತಿ ಮತ್ತು ನೆರವು ದಿನಾಚರಣೆಯ ಪ್ರಯುಕ್ತ ಬಿಡುಗಡೆಯಾಗಿರುವ ಈ ವರದಿಯ ಪ್ರಕಾರ 2022 ರಿಂದ 2023 ರ ಅವಧಿಯ ನಡುವೆ ನೆಲಬಾಂಬುಗಳ ಸ್ಫೋಟದ ಕಾರಣ 1052 ನಾಗರೀಕರು ಮೃತಹೊಂದಿದ್ದಾರೆ. 2022 ಅಂಕಿಅಂಶಗಳಿಗೆ ಹೋಲಿಸಿದರೆ, ಈ ಕಳೆದ ವರ್ಷಲ್ಲಿ 390 ಕ್ಕೂ ಅಧಿಕ ಸಾವುಗಳು ವರದಿಯಾಗಿವೆ
ಈ ಸಾವುಗಳಲ್ಲಿ ಶೇ. 20% ಮಕ್ಕಳಾಗಿದ್ದು, ನೆಲಬಾಂಬುಗಳನ್ನು ಗುರುತಿಸುವಲ್ಲಿ ಮಕ್ಕಳು ವಿಫಲರಾಗುವ ಕಾರಣ, ಬಹುತೇಕ ಮಕ್ಕಳೇ ಇವುಗಳಿಗೆ ಬಲಿಪಶುಗಳಾಗುವ ಸಂಭವ ಹೆಚ್ಚಿದೆ.
ನೆಲಬಾಂಬುಗಳ ಹಿನ್ನೆಲೆಯಲ್ಲಿ ಸಂಭವಿಸುತ್ತಿರುವ ಸಾವುಗಳ ಸಂಖ್ಯೆಯಲ್ಲಿ ಮ್ಯಾನ್ಮಾರ್ ಪ್ರಥಮ ಸ್ಥಾನದಲ್ಲಿದ್ದು, ಈ ದೇಶದಲ್ಲಿ ಪ್ರಸ್ತುತ ನಡೆಯುತ್ತಿರುವ ನಾಗರೀಕ ಯುದ್ಧವೇ ಕಾರಣವಾಗಿದೆ ಎಂದು ಅಂದಾಜಿಸಲಾಗಿದೆ. ಯುದ್ಧದ ಕಾರಣ ದೇಶವು ನೆಲಬಾಂಬುಗಳಿಂದ ಕಲುಷಿತವಾಗಿದೆ ಎಂದೂ ಸಹ ಈ ವರದಿಯು ದಾಖಲಿಸಿದೆ.
ಪೋಪ್ ಫ್ರಾನ್ಸಿಸರ ಮಾತುಗಳು
ಕಳೆದ ತಿಂಗಳಷ್ಟೇ ತನ್ನ ಸಾರ್ವಜನಿಕ ದರ್ಶನದಲ್ಲಿ ಪೋಪ್ ಫ್ರಾನ್ಸಿಸ್ “ನೆಲಬಾಂಬುಗಳು ನಾಗರೀಕರನ್ನು ಒಳಗೊಂಡಂತೆ, ಮಕ್ಕಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಬಲಿ ಪಡೆಯುತ್ತಿವೆ” ಎಂದು ಹೇಳಿದ್ದರು. ಓಟ್ಟಾವ ನೆಲಬಾಂಬು ನಿಷೇದ ಒಪ್ಪಂದಕ್ಕೆ ಇಪ್ಪತ್ತೈದು ವರ್ಷಗಳಾದ ಹಿನ್ನೆಲೆಯಲ್ಲಿ ಮಾತನಾಡಿದ ಪೋಪ್ ಫ್ರಾನ್ಸಿಸ್ “ನೆಲಬಾಂಬುಗಳಿಂದ ಸಾವನ್ನಪ್ಪಿರುವ ಎಲ್ಲಾ ನತದೃಷ್ಟ ಜನರ ಕುಟುಂಬಗಳಿಗೆ ನನ್ನ ಶೋಕವನ್ನು ವ್ಯಕ್ತಪಡಿಸುತ್ತೇನೆ. ಅವರೊಂದಿಗೆ ನಾನು ಪ್ರಾರ್ಥನೆಯ ಮೂಲಕ ಐಕ್ಯತೆಯನ್ನು ವ್ಯಕ್ತಪಡಿಸುತ್ತೇನೆ” ಎಂದಿದ್ದರು.
“ನೆಲಬಾಂಬುಗಳಿಂದ ಕಲುಷಿತವಾಗಿರುವ ಪ್ರದೇಶಗಳನ್ನು ಸ್ವಚ್ಛ ಮಾಡುವ ಕಾರ್ಯದಲ್ಲಿ ಮಗ್ನರಾಗಿರುವ ಎಲ್ಲಾ ಒಳ್ಳೆಯ ಜನರಿಗೆ ನಾನು ಧನ್ಯವಾದಗಳನ್ನು ತಿಳಿಸುತ್ತೇನೆ. ಈ ವಿಶ್ವವನ್ನು ಶಾಂತಿಯುತ ವಿಶ್ವವನ್ನಾಗಿ ಮಾಡುವ ದಿಸೆಯಲ್ಲಿ ಇವರು ಘನ ಪ್ರಯತ್ನವನ್ನು ಮಾಡಿದ್ದಾರೆ” ಎಂದು ಪೋಪ್ ಫ್ರಾನ್ಸಿಸ್ ಈ ದಿಶೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲರನ್ನೂ ಶ್ಲಾಘಿಸಿದರು.