ಧರ್ಮಾಧ್ಯಕ್ಷ ದೀಕ್ಷೇಯ ವಜ್ರ ಮಹೋತ್ಸವ ಸಂಭ್ರಮದಲ್ಲಿ ಆರ್ಚ್’ಬಿಷಪ್ ಅಲ್ಫೋನ್ಸಸ್ ಮಥಾಯಸ್
ವರದಿ: ಅಜಯ್ ಕುಮಾರ್
ಬೆಂಗಳೂರು ಮಹಾಧರ್ಮಕ್ಷೇತ್ರದ ನಿವೃತ್ತ ಮಹಾಧರ್ಮಾಧ್ಯಕ್ಷರಾದ ಅತಿ ವಂ. ಡಾ. ಅಲ್ಫೋನ್ಸಸ್ ಮಥಾಯಸ್ (95) ಅವರು ತಮ್ಮ ಧರ್ಮಾಧ್ಯಕ್ಷ ದೀಕ್ಷೆಯ 60 ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ, ಭಾರತದ ವಿವಿಧ ಕಾರ್ಡಿನಾಲರು, ಮಹಾಧರ್ಮಾಧ್ಯಕ್ಷರು ಹಾಗೂ ಧರ್ಮಾಧ್ಯಕ್ಷರು ಅವರನ್ನು ಅಭಿನಂದಿಸಿ, ಸನ್ಮಾನಿಸಿದರು.
ಪ್ರಸ್ತುತ ನಡೆಯುತ್ತಿರುವ ಸಿಬಿಸಿಐ ಸಾರ್ವತ್ರಿಕ ಸಭೆಗಳಲ್ಲಿ ಪಾಲ್ಗೊಳ್ಳಲು ಭಾರತದ ಅನೇಕ ಧರ್ಮಕ್ಷೇತ್ರಗಳಿಂದ ಸುಮಾರು 175 ಕ್ಕೂ ಹೆಚ್ಚು ಧರ್ಮಾಧ್ಯಕ್ಷರು ಆಗಮಿಸಿದ್ದಾರೆ. ಇಂದು ಬೆಳಿಗ್ಗೆ ನಡೆದ ಬಲಿಪೂಜೆಯಲ್ಲಿ ಆರ್ಚ್’ಬಿಷಪ್ ಅಲ್ಫೋನ್ಸಸ್ ಮಥಾಯಸ್ ಅವರ ಜೀವನಕ್ಕೆ ಹಾಗೂ ಭಾರತದ ಧರ್ಮಸಭೆಗೆ ಅವರಿತ್ತ ಕೊಡುಗೆಗೆ ದೇವರಿಗೆ ಕೃತಜ್ಞತೆಯನ್ನು ಸಲ್ಲಿಸಿ, ಅವರ ಅನುಮಪ ಸೇವೆಯನ್ನು ಕಾರ್ಡಿನಾಲರುಗಳು ಸ್ಮರಿಸಿದರು.
ಜೂನ್ 22, 1928 ರಲ್ಲಿ ಮಂಗಳೂರಿನಲ್ಲಿ ಜನಿಸಿದ ಆರ್ಚ್’ಬಿಷಪ್ ಅಲ್ಫೋನ್ಸ್ ಮಥಾಯಸ್, ಆಗಸ್ಟ್ 24, 1954 ರಂದು ಮಂಗಳೂರು ಧರ್ಮಕ್ಷೇತ್ರಕ್ಕೆ ಗುರುವಾಗಿ ನೇಮಕಗೊಂಡರು. ಫೆಬ್ರವರಿ 05, 1964 ರಲ್ಲಿ ನೂತನವಾಗಿ ರಚನೆಗೊಂಡ ಚಿಕ್ಕಮಗಳೂರು ಧರ್ಮಕ್ಷೇತ್ರದ ಮೊದಲ ಧರ್ಮಾಧ್ಯಕ್ಷರಾಗಿ ನೇಮಕಗೊಂಡರು. ಚಿಕ್ಕಮಗಳೂರು ಧರ್ಮಕ್ಷೇತ್ರದಲ್ಲಿ ಇಪ್ಪತ್ತು ವರ್ಷಗಳ ಸೇವೆಯನ್ನು ಸಲ್ಲಿಸಿದ ನಂತರ ಅವರನ್ನು ಪೋಪ್ ದ್ವಿತೀಯ ಜಾನ್ ಪೌಲರು ಸೆಪ್ಟೆಂಬರ್ 12, 1986 ರಲ್ಲಿ ಬೆಂಗಳೂರು ಮಹಾಧರ್ಮಕ್ಷೇತ್ರದ ಮಹಾಧರ್ಮಾಧ್ಯಕ್ಷರನ್ನಾಗಿ ನೇಮಿಸಿದರು. ಮಾರ್ಚ್ 24, 1998 ರಂದು ಬೆಂಗಳೂರು ಮಹಾಧರ್ಮಾಧ್ಯಕ್ಷ ಪದವಿಗೆ ರಾಜಿನಾಮೆಯನ್ನು ನೀಡಿ ನಿವೃತ್ತರಾದರು.
ಆರ್ಚ್’ಬಿಷಪ್ ಅಲ್ಫೋನ್ಸ್ ಮಥಾಯಸ್ ಅವರು 1989-1994 ರವರೆಗೆ ಭಾರತದ ಕಥೋಲಿಕ ಧರ್ಮಾಧ್ಯಕ್ಷರ ಮಂಡಳಿ (ಸಿಬಿಸಿಐ) ನ ಅಧ್ಯಕ್ಷರಾಗಿಯೂ ಸೇವೆಯನ್ನು ಸಲ್ಲಿಸಿದ್ದಾರೆ.
95 ವರ್ಷ ವಯೋಮಾನದ ಮಹಾಧರ್ಮಾಧ್ಯಕ್ಷ ಮಥಾಯಸ್ ಜೀವಂತವಿರುವ ವಿಶ್ವದ ಕೆಲವೇ ಕೆಲವು ಮಹಾಧರ್ಮಾಧ್ಯಕ್ಷರಲ್ಲಿ ಒಬ್ಬರಾಗಿದ್ದು, ದ್ವಿತೀಯ ವ್ಯಾಟಿಕನ್ ಮಹಾಸಮ್ಮೇಳನದಲ್ಲಿ “ಕೌನ್ಸಿಲ್ ಫಾದರ್” ಆಗಿ ಭಾಗವಹಿಸಿದ ಧರ್ಮಾಧ್ಯಕ್ಷರ ಪೈಕಿ ಜೀವಂತವಿರುವ ನಾಲ್ಕು ಧರ್ಮಾಧ್ಯಕ್ಷರಲ್ಲಿ ಒಬ್ಬರಾಗಿದ್ದಾರೆ.