ಭಾರತದ ಧರ್ಮಾಧ್ಯಕ್ಷರಿಂದ ದೇಶದ ಕಥೋಲಿಕ ಕ್ರೈಸ್ತರಿಗಾಗಿ “ಕ್ಯಾಥೊಲಿಕ್ ಕನೆಕ್ಟ್” ಆ್ಯಪ್ ಬಿಡುಗಡೆ
ವರದಿ: ಅಜಯ್ ಕುಮಾರ್
ಭಾರತದ ಕಥೋಲಿಕ ಧರ್ಮಾಧ್ಯಕ್ಷರ ಮಂಡಳಿ (ಸಿಸಿಬಿಐ) “ಕ್ಯಾಥೊಲಿಕ್ ಕನೆಕ್ಟ್” ಎಂಬ ಮೊಬೈಲ್ ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡಿದ್ದು, ಈ ಆ್ಯಪ್ ಭಾರತದ ಕ್ರೈಸ್ತ ವಿಶ್ವಾಸಿಗಳಿಗೆ ಹಲವು ವಿಧದಲ್ಲಿ ನೆರವಾಗಲಿದೆ.
ಬೆಂಗಳೂರಿನ ಸೇಂಟ್ ಜಾನ್ಸ್ ನ್ಯಾಷನಲ್ ಅಕಾಡೆಮಿ ಆಫ್ ಹೆಲ್ತ್ ಸೈನ್ಸಸ್’ನಲ್ಲಿ ನಡೆದ ಸಿಸಿಬಿಐ 35ನೇ ಸಾರ್ವತ್ರಿಕ ಸಭೆಯಲ್ಲಿ ಕ್ಯಾಥೊಲಿಕ್ ಕನೆಕ್ಟ್ ಆ್ಯಪ್ ಅನ್ನು ಅನಾವರಣಗೊಳಿಸಲಾಯಿತು.
ಭಾರತದ ಕಥೋಲಿಕ ಧರ್ಮಾಧ್ಯಕ್ಷರ ಮಂಡಳಿ (ಸಿಸಿಬಿಐ) ಅಧ್ಯಕ್ಷರಾದ ಕಾರ್ಡಿನಲ್ ಫಿಲಿಪ್ ನೆರಿ ಫೆರಾವೊ, ಮುಂಬೈ ಮಹಾಧರ್ಮಕ್ಷೇತ್ರದ ಮಹಾಧರ್ಮಾಧ್ಯಕ್ಷ ಕಾರ್ಡಿನಲ್ ಓಸ್ವಾಲ್ಡ್ ಗ್ರೇಶಿಯಸ್, ಹೈದರಾಬಾದ್ ಮಹಾಧರ್ಮಕ್ಷೇತ್ರದ ಮಹಾಧರ್ಮಾಧ್ಯಕ್ಷ ಕಾರ್ಡಿನಲ್ ಅಂತೋಣಿ ಪೂಲ ಹಾಗೂ ಇನ್ನಿತರ ಮಹಾಧರ್ಮಾಧ್ಯಕ್ಷರು ಹಾಗೂ ಧರ್ಮಾಧ್ಯಕ್ಷರ ಸಮಕ್ಷಮದಲ್ಲಿ ಈ ನೂತನ ಮೊಬೈಲ್ ಆ್ಯಪ್ ಅನ್ನು ಲೋಕಾರ್ಪಣೆಗೊಳಿಸಲಾಯಿತು.
ಭಾರತದ ಪ್ರತಿಯೊಬ್ಬ ಕಥೋಲಿಕ ಕ್ರೈಸ್ತರೂ ಆರೋಗ್ಯ ವಿಮೆಯನ್ನು ಹೊಂದುವುದು, ತಮ್ಮ ಪ್ರದೇಶದಲ್ಲಿ ಹತ್ತಿರದ ಚರ್ಚುಗಳ ಬಗ್ಗೆ ಮಾಹಿತಿ, ತಮ್ಮ ಧರ್ಮಕ್ಷೇತ್ರ, ಧರ್ಮಕೇಂದ್ರದ ಕುರಿತು ಮಾಹಿತಿಯನ್ನು ಹೊಂದುವುದು, ಪ್ರತಿ ಚರ್ಚುಗಳ ಬಲಿಪೂಜಾ ಸಮಯಗಳ ಕುರಿತ ಮಾಹಿತಿ, ಕಥೋಲಿಕ ಪ್ರಕಾಶನಕಾರರು, ಉದ್ಯೋಗ, ವಿವಾಹ, ಪುಣ್ಯಕ್ಷೇತ್ರಗಳ ಮಾಹಿತಿ ಇತ್ಯಾದಿಗಳೆಲ್ಲವೂ ಒಂದೇ ಜಾಲತಾಣದ ಸೂರಿನಡಿಯಲ್ಲಿ ದೊರಕುವಂತೆ ಮಾಡುತ್ತಿರುವುದು ಈ ಕ್ಯಾಥೊಲಿಕ್ ಕನೆಕ್ಟ್ ಆ್ಯಪ್ ವಿಶೇಷತೆಯಾಗಿದೆ.
ಸಿಸಿಬಿಐ ನ ಉಪ ಪ್ರಧಾನ ಕಾರ್ಯದರ್ಶಿ ವಂ. ಡಾ. ಸ್ಟೀಫನ್ ಅಲಥರ, ಸಿಸಿಬಿಐ ಮಾಧ್ಯಮ ಸೇವೆಯ ಸಂಚಾಲಕ ವಂ. ಡಾ. ಸಿರಿಲ್ ವಿಕ್ಟರ್ ಜೋಸೆಫ್ ಈ ಆ್ಯಪ್ ಅನ್ನು ಹೊರತರುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ.