ಹುಡುಕಿ

ವಾಷಿಂಗ್ಟನ್ ಡಿ.ಸಿ. ಮಹಾಧರ್ಮಕ್ಷೇತ್ರದ ಮಹಾಧರ್ಮಾಧ್ಯಕ್ಷ ಕಾರ್ಡಿನಲ್ ವಿಲ್ಟನ್ ಗ್ರೆಗರಿ ವಾಷಿಂಗ್ಟನ್ ಡಿ.ಸಿ. ಮಹಾಧರ್ಮಕ್ಷೇತ್ರದ ಮಹಾಧರ್ಮಾಧ್ಯಕ್ಷ ಕಾರ್ಡಿನಲ್ ವಿಲ್ಟನ್ ಗ್ರೆಗರಿ   (Arcidiocesi di Washington)

ಡಿಗ್ನಿತಾಸ್ ಇನ್ಫಿನೀತಾ: ಸಮತೂಕದ, ಸವಾಲಿನ ದಾಖಲೆ ಎಂದ ಕಾರ್ಡಿನಲ್ ಗ್ರೆಗರಿ

ಅಮೇರಿಕಾದ ವಾಷಿಂಗ್ಟನ್ ಡಿ.ಸಿ ಮಹಾಧರ್ಮಕ್ಷೇತ್ರದ ಮಹಾಧರ್ಮಾಧ್ಯಕ್ಷರಾಗಿರುವ ಕಾರ್ಡಿನಲ್ ವಿಲ್ಟನ್ ಗ್ರೆಗರಿ ಅವರು ಮಾನವ ಘನತೆ, ರಾಷ್ಟ್ರೀಯ ಬಲಿಪೂಜಾ ಪುನಶ್ವೇತನ, ಹಾಗೂ ಸಿನೊಡಾಲಿಟಿ ಕುರಿತು ವ್ಯಾಟಿಕನ್ ನ್ಯೂಸ್’ನೊಂದಿಗೆ ಮಾತನಾಡಿದ್ದಾರೆ.

ವರದಿ: ಕ್ರಿಸ್ಟೋಫರ್ ವೆಲ್ಸ್, ಅಜಯ್ ಕುಮಾರ್

ಮಾನವ ಘನತೆಯ ಕುರಿತ ವ್ಯಾಟಿಕನ್ನಿನ ನೂತನ ಘೋಷವಾಕ್ಯ ದಾಖಲೆಯಾಗಿರುವ “ಡಿಗ್ನಿತಾಸ್ ಇನ್ಫಿನಿತಾ” (ಡಿಐ) ಕುರಿತು ಮಾತನಾಡಿದ ಕಾರ್ಡಿನಲ್ ವಿಲ್ಟನ್ ಗ್ರೆಗರಿ “ಇದು ಈ ಕಾಲಘಟ್ಟದಲ್ಲಿ ಧರ್ಮಸಭೆಯು ಈ ವಿಷಯದ ಮೇಲೆ ನೀಡಿರುವ ಅತ್ಯಂತ ಸಮಗ್ರ ಸಾರಾಂಶವಾಗಿದೆ.” ಎಂದು ಹೇಳಿದ್ದಾರೆ.

ಪೇಪಲ್ ಫೌಂಡೇಶನ್ ಬೋರ್ಡ್ ಮೀಟಿಂಗ್ ಹಾಗೂ ನಾರ್ಥ್ ಅಮೇರಿಕನ್ ಕಾಲೇಜ್ ಆಯೋಜಿಸಿದ್ದ ರೆಕ್ಟರ್ ಡಿನ್ನರ್ ಮೀಟಿಂಗ್ ಕಾರ್ಯಕ್ರಮಗಳ ನಿಮಿತ್ತ ರೋಮ್ ನಗರಕ್ಕೆ ಆಗಮಿಸಿದ್ದ ಕಾರ್ಡಿನಲ್ ಗ್ರೆಗರಿ, ವ್ಯಾಟಿಕನ್ ನ್ಯೂಸ್’ನೊಂದಿಗೆ ಮಾತನಾಡಿದರು.

ಡಿಗ್ನಿತಾಸ್ ಇನ್ಫಿನಿತಾ ದಾಖಲೆಯಲ್ಲಿ ಎತ್ತಲಾಗಿರುವ ಸಮಸ್ಯೆಗಳ ಕುರಿತು ಕೇಳಿದಾಗ, ಕಾರ್ಡಿನಲ್ ಗ್ರೆಗರಿ “ಈ ದಾಖಲೆಯು “ಬಿಸಿ ತುಪ್ಪ” ಎನಿಸಿಕೊಂಡಿರುವ ಅನೇಕ ಸಮಸ್ಯೆಗಳ ಕುರಿತು ಮಾತನಾಡಿದೆ ಹಾಗೂ ಎರಡೂ ಕಡೆಗಳಲ್ಲೂ ವಿವಾದಕ್ಕೆ ಕಾರಣವಾಗಿದೆ” ಎಂದು ಹೇಳಿದರು. “ಆದರೆ, ಇಡೀ ದಾಖಲೆಯನ್ನು ಒಟ್ಟಾರೆಯಾಗಿ ತೆಗೆದುಕೊಂಡರೆ ಇದು ಕೇವಲ ಒಂದು ನಿರ್ದಿಷ್ಟ ಸಮಸ್ಯೆಯ ಕುರಿತು ಮಾತನಾಡದೆ, ಮಾನವ ಘನತೆಗೆ ಸಂಬಂಧಿಸಿದ ಎಲ್ಲಾ ಆಯಾಮಗಳ ಕುರಿತು ಮಾತನಾಡುವ ಧರ್ಮಸಭೆಯ ದಾಖಲೆಯಾಗಿದೆ” ಎಂದು ಹೇಳುತ್ತಾರೆ.

ಸವಾಲಿನ ದಾಖಲೆ

ಮುಂದುವರೆದು ಮಾತನಾಡಿದ ಕಾರ್ಡಿನಲ್ ಗ್ರೆಗರಿ “ಇದು ಕೆಲವು ಜನರಿಗೆ ಸವಾಲಿನ ದಾಖಲೆ ಎನಿಸಬಹುದು ಏಕೆಂದರೆ ಇದರಲ್ಲಿ ಜನರು ತಾವು ಪೂರ್ಣವಾಗಿ ಒಪ್ಪುವಂತಹ ವಿಷಯಗಳನ್ನು ಕಾಣಬಹುದು ಅಥವಾ ಅವರು ಯೋಚಿಸಬೇಕಾದ ಕೆಲವು ವಿಚಾರಗಳ ಕುರಿತು ಚಿಂತಿಸಬಹುದು” ಎಂದು ಹೇಳಿದರು.

“ಆದರೆ ನಿಜವಾಗಿಯೂ ಹೇಳಬೇಕೆಂದರೆ, ಇದು ಯಶಸ್ವಿ ದಾಖಲೆಯ ಸಂಕೇತವೆಂದೇ ಹೇಳಬಹುದು. ಇದು ನೀವು ನಂಬುವ, ಅರ್ಥಮಾಡಿಕೊಳ್ಳುವ ಹಾಗೂ ಒಪ್ಪಿಕೊಳ್ಳುವ ಅಂಶವನ್ನು ಪ್ರತಿಪಾದಿಸುತ್ತದೆ. ಇದರ ಜೊತೆಗೆ, ನಿಮಗೆ ಸವಾಲೆನಿಸುವ ಧಾರ್ಮಿಕ ಅಥವಾ ಸಾಮಾಜಿಕ ಬದುಕಿನ ಇನ್ನುಳಿದ ಆಯಾಮಗಳ ಕುರಿತು ಯೋಚಿಸುವಂತೆ ಪ್ರೇರೇಪಿಸುತ್ತದೆ” ಎಂದು ಹೇಳುತ್ತಾರೆ.

ನಿರ್ಣಾಯಕ ಪ್ರಾಮುಖ್ಯತೆಯ ಸಮಸ್ಯೆಗಳು

ಈ ಸಂದರ್ಭದಲ್ಲಿ ಕಾರ್ಡಿನಲ್ ವಿಲ್ಟನ್ ಗ್ರೆಗರಿ ತಮ್ಮ ವಾಷಿಂಗ್ಟನ್ ಮಹಾಧರ್ಮಕ್ಷೇತ್ರದಲ್ಲಿನ ಸಮಸ್ಯೆಗಳ ಕುರಿತೂ ಸಹ ಮಾತನಾಡಿದರು. ಅಲ್ಲಿನ ಸಮಕಾಲೀನ ಸಮಸ್ಯೆಗಳಾದ ಎಲ್.ಜಿ.ಬಿ.ಟಿ.ಕ್ಯೂ, ಲಿಂಗತ್ವ ಗುರುತಿನ ಕುರಿತು ಹೋರಾಡುತ್ತಿರುವ ಜನರ ಕುರಿತು ತಮ್ಮ ಚಿಂತನೆಗಳನ್ನು ಹಂಚಿಕೊಂಡರು.

“ಈ ದಾಖಲೆಯು ಅವರ ಘನತೆಯನ್ನು ಗುರುತಿಸುವುದು ಮಾತ್ರವಲ್ಲದೆ, ಸೃಷ್ಟಿಯಲ್ಲಿ ದೇವರು ಅವರಿಗೆ ಗುರುತಿನ ಘನತೆಯನ್ನು ನೀಡಿದ್ದಾರೆ ಎಂಬುದನ್ನು ಅವರು ಒಪ್ಪಿಕೊಳ್ಳಬೇಕೆಂದು ಕರೆ ನೀಡುತ್ತದೆ.” ಎಂದು ಹೇಳಿದ್ದಾರೆ.

ತಮ್ಮ ಮಹಾಧರ್ಮಕ್ಷೇತ್ರದಲ್ಲಿ ಪ್ರಸ್ತುತ ನಡೆಯುತ್ತಿರುವ ಸಿನೊಡ್ ಪ್ರಕ್ರಿಯೆಯ ಕುರಿತು ಮಾತನಾಡಿರುವ ಕಾರ್ಡಿನಲ್ ಗ್ರೆಗರಿ, “ಇಂತಹ ಯೋಜಿತ ಸಮುದಾಯದ ಮೇಷಪಾಲಕನಾಗಿರುವುದಕ್ಕೆ ನಾನು ಅದೃಷ್ಟ ಮಾಡಿದ್ದೇನೆ ಎನಿಸುತ್ತದೆ. ಏಕೆಂದರೆ ನಮ್ಮ ಮಹಾಧರ್ಮಕ್ಷೇತ್ರದಲ್ಲಿ ಸಿನೋಡ್ ಪ್ರಕ್ರಿಯೆಗಳು ಬಹಳ ಅಚ್ಚುಕಟ್ಟಾಗಿ, ಎಲ್ಲಾ ಸಮುದಾಯಗಳನ್ನು ಗಣನೆಗೆ ತೆಗೆದುಕೊಳ್ಳುವ ಮೂಲಕ ಹಾಗೂ ಅವರ ಧ್ವನಿಗೆ ಕಿವಿಗೊಡುವ ಮೂಲಕ ನಡೆಯುತ್ತಿದೆ” ಎಂದು ಹೇಳಿದರು.

11 April 2024, 15:28