ಬಿಷಪ್ ಸಿಮಾರ್ಡ್: ಉಪಶಮನಕಾರಿ ಆರೈಕೆಯು ಜನತೆಯೊಂದಿಗೆ ನಡೆಯುತ್ತದೆ
ವರದಿ: ಕ್ರಿಸ್ಟೋಫರ್ ವೆಲ್ಸ್, ಅಜಯ್ ಕುಮಾರ್
"ಉಪಶಮನ ಆರೈಕೆ ಎಂಬುದು ಒಬ್ಬರ ಜೀವನವನ್ನು ಕೊನೆಗೊಳಿಸುವುದಲ್ಲ; ಬದುಕು ಕೊನೆಯಾಗುವಾಗ, ಅವರ ಬದುಕಿನ ಕಡೆ ಘಳಿಗೆಯಲ್ಲಿ ಅವರೊಂದಿಗಿರುವುದು" ಎಂದು ಕೆನಡಾದ ಕೆಬೆಕ್ ಪ್ರಾಂತ್ಯದ ವ್ಯಾಲೀಸ್'ಫೀಲ್ಡ್ ಧರ್ಮಾಧ್ಯಕ್ಷ ನೋಯೆಲ್ ಸಿಮಾರ್ಡ್ ಅವರು ಹೇಳಿದ್ದಾರೆ. ಅವರು ಸಾಯುವ ಘಳಿಗೆಯಲ್ಲಿ ಅವರೊಂದಿಗೆ ಆತ್ಮೀಯವಾಗಿ, ದೈಹಿಕವಾಗಿ ಹಾಗೂ ಮಾನಸಿಕವಾಗಿ ಇದ್ದು, ಅವರಿಗೆ ಧೈರ್ಯ ತುಂಬುವುದಾಗಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಕೆನಡಾದ ಕಥೋಲಿಕ ಧರ್ಮಾಧ್ಯಕ್ಷರ ಮಂಡಳಿ ಹಾಗೂ ಪೊಂಟಿಫಿಕಲ್ ಅಕಾಡೆಮಿ ಆಫ್ ಲೈಫ್ ಸಹಯೋಗದೊಂದಿಗೆ ಈ ವಾರ ಕೆನಡಾದಲ್ಲಿ ನಡೆಯಲಿರುವ ಉಪಶಮನ ಆರೈಕೆ ಕುರಿತು ನಡೆಯುವ ಸಿಂಪೋಸಿಯಮ್ ನ ಅಧ್ಯಕ್ಷತೆಯನ್ನು ಬಿಷಪ್ ಸಿಮಾರ್ಡ್ ಅವರು ವಹಿಸಲಿದ್ದಾರೆ.
ಉಪಶಮನದ ಆರೈಕೆ ಎಂಬುದು ಸಾವಿನಂಚಿನಲ್ಲಿರುವ ಜನತೆಯ ಜೊತೆಗೆ ಕೊನೆ ಕ್ಷಣಗಳನ್ನು ಕಳೆಯುವುದಾಗಿದೆ ಎಂದು ಅವರು ಹೇಳಿದ್ದಾರೆ. ಹೌದು, ನೋವು ಹಾಗೂ ಯಾತನೆಯನ್ನು ಅನುಭವಿಸುತ್ತಿರುವವರಿಗೆ ನಾವು ಪ್ರತಿಕ್ರಿಯಿಸಬೇಕಿದೆ ಎಂದು ಹೇಳಿದರು.
"ಭರವಸೆಯೊಂದಿಗೆ ನಡಿಗೆ" ಎಂಬ ಶೀರ್ಷಿಕೆಯ ಅಡಿಯಲ್ಲಿ ನಡೆಯಲಿರುವ ಈ ಸಿಂಪೋಸಿಯಮ್, ಜವಾಬ್ದಾರಿಯ ಸಂಸ್ಕೃತಿಯನ್ನು ಬೆಳೆಸುವ ಹೊತ್ತಿನಲ್ಲೇ ಉಪಶಮನಕಾರಿ ಆರೈಕೆಯನ್ನು ನೀಡುವ ಉದ್ದೇಶವನ್ನು ಹೊಂದಿದೆ.
"ಅವರ ಜೊತೆಗಿರುವುದರ" ಕುರಿತು ವಿವರಿಸಿದ ಬಿಷಪ್ ಸಿಮಾರ್ಡ್, ಅವರ ಸಾವಿನ ಹೊತ್ತಿನಲ್ಲಿ ಅವರು ಯಾರಿಗೂ ಭಾರವಾಗಿಲ್ಲ ಎಂದು ತಿಳಿಸುತ್ತಾ, ದೇವರು ಅವರನ್ನು ಈಗಲೂ ಪ್ರೀತಿಸುತ್ತಾರೆ ಹಾಗೂ ಅವರು ಇನ್ನೂ ದೇವರ ಮಕ್ಕಳಾಗಿದ್ದಾರೆ ಎಂದು ತಿಳಿಸುವುದಾಗಿದೆ" ಎಂದು ಹೇಳಿದರು. ಹೀಗೆ ಅವರು ವಿವರಿಸುವಾಗ ಬಹಳ ಎಚ್ಚರಿಕೆಯಿಂದ ಪದಗಳನ್ನು ಆಯ್ದುಕೊಂಡರು.
ಬದುಕಿನ ಕೊನೆಯ ಘಟ್ಟದಲ್ಲಿರುವವರ ಮಾತುಗಳನ್ನು ಆಲಿಸುವುದರ ಪ್ರಾಮುಖ್ಯತೆಯ ಕುರಿತು ಮಾತನಾಡಿದ ಬಿಷಪ್ ಸಿಮಾರ್ಡ್ ಅವರು, ಈ ಸಂದರ್ಭದಲ್ಲಿ ಅವರ "ನೋವು, ಹತಾಶೆ, ಭಯ ಹಾಗೂ ಮತ್ತೆಲ್ಲಾ ಭಾವನೆಗಳನ್ನು ತಾಳ್ಮೆಯಿಂದ ಆಲಿಸುವುದಾಗಿದೆ" ಎಂದರು.
ಪೋಪ್ ಫ್ರಾನ್ಸಿಸ್ ಅವರು ಪದೇ ಪದೇ ಕರೆ ನೀಡುವ ಐಕ್ಯತೆಯ ಕುರಿತು ಮಾತನಾಡಿದ ಅವರು, ಪ್ರೀತಿ ಪಾತ್ರರ ಬದುಕಿನ ಅಂತಿಮ ಘಟ್ಟದಲ್ಲಿ ಅವರ ಕೈಹಿಡಿದು ಅವರೊಂದಿಗೆ ಐಕ್ಯತೆಯನ್ನು ವ್ಯಕ್ತಪಡಿಸುವುದರ ಪ್ರಾಮುಖ್ಯತೆಯನ್ನು ಕುರಿತು ವಿವರಿಸುವುದರ ಮೂಲಕ ತಮ್ಮ ಮಾತನ್ನು ಮುಗಿಸಿದರು.