Ethiopian Orthodox faithful celebrate Easter Eve in Wukro

ಇತಿಯೋಪಿಯ ಬಿಷಪ್: ಪ್ರಾರ್ಥನೆ ಮತ್ತು ನ್ಯಾಯ ನಮ್ಮ ಸಾಮಾಜಿಕ ವಿಭಜನೆಯನ್ನು ಗುಣಪಡಿಸಬಲ್ಲದು

ಆಫ್ರಿಕಾ ಖಂಡದ ಇತಿಯೋಪಿಯಾ ದೇಶದ ಸಾಮಾಜಿಕ ಹಾಗೂ ರಾಜಕೀಯ ವಿಭಜನೆಯನ್ನು ಗುಣಪಡಿಸಲು ಧಾರ್ಮಿಕ ನಾಯಕರು ಮಧ್ಯವರ್ತಿಗಳಾಗಿ ಕಾರ್ಯನಿರ್ವಹಿಸಬೇಕು ಎಂದು ಇತಿಯೋಪಿಯಾದ ಬಿಷಪ್ ಅವರು ಹೇಳಿದ್ದಾರೆ.

ವರದಿ: ಡೆವಿನ್ ವಾಟ್ಕಿನ್ಸ್, ಅಜಯ್ ಕುಮಾರ್

ಧಾರ್ಮಿಕ ನಾಯಕರು ಹಾಗೂ ರಾಜಕೀಯ ನಾಯಕರಿಗೆ ಯುವ ಸಮೂಹವನ್ನು ಅಭಿವೃದ್ಧಿಯ ಹಾದಿಯಲ್ಲಿ ನಡೆಸುವ ಜವಾಬ್ದಾರಿ ಇದೆ. ಯುವ ಸಮೂಹವನ್ನು ಯುದ್ಧಕ್ಕೆ ಮುನ್ನಡೆಸುವುದಲ್ಲ," ಎಂದು ಇಥಿಯೋಪಿಯಾದ ಬಿಷಪ್ ಟೆಶೋಮ್ ಫಿಕ್ರೆ ವಾಲ್ಡೋಟೆನ್ಸೆ ಅವರು ಹೇಳಿದ್ದಾರೆ. ಎಮ್ಡೆಬರ್ ಧರ್ಮಕ್ಷೇತ್ರದ ನಿಯೋಜಿತ ಧರ್ಮಾಧ್ಯಕ್ಷರಾಗಿರುವ ಬಿಷಪ್ ಟೆಶೋಮ್ ಫಿಕ್ರೆ ವಾಲ್ಡೋಟೆನ್ಸೆ ಇಥಿಯೋಪಿಯನ್ ಟಿವಿ ವಾಹಿನಿಯೊಂದಕ್ಕೆ ಸಂದರ್ಶನವನ್ನು ನೀಡುತ್ತಾ, ಹೇಳಿದರು.

ಕಳೆದ ಹಲವು ವರ್ಷಗಳಲ್ಲಿ ತನ್ನ ದೇಶದ ಸ್ಥಿತಿಗತಿಗಳು ದುರ್ಬರವಾಗಿರುವ ಕುರಿತು ಇಥಿಯೋಪಿಯಾ ದೇಶದ ಧರ್ಮಾಧ್ಯಕ್ಷರುಗಳ ಮಂಡಳಿಯ ಪ್ರಧಾನ ಕಾರ್ಯದರ್ಶಿ ಅವರು ಮೆಲುಕು ಹಾಕಿದ್ದಾರೆ. 

"ಒಂದಾನೊಂದು ಕಾಲದಲ್ಲಿ ನಮ್ಮನ್ನು ವಿಶ್ವಾಸ ಹಾಗೂ ಮುಗ್ಧತೆಯ ಜನರೆಂದು ಕರೆಯಲಾಗಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಸಂಘರ್ಷ, ಯುದ್ಧ ಹಾಗೂ ಅಸುರಕ್ಷಿತ ಮನೋಭಾವವೇ ವ್ಯಾಪಿಸುತ್ತಿದೆ ಹಾಗೂ ಎಲ್ಲೆಲ್ಲೂ ರಕ್ತವೇ ಕಾಣಸಿಗುತ್ತಿದೆ" ಎಂದು ಬಿಷಪ್ ಟೆಶೋಮ್ ಹೇಳಿದರು.

ಇತ್ತೀಚಿನ ದಶಕಗಳಲ್ಲಿ ಇಥಿಯೋಪಿಯಾ ದೇಶದಲ್ಲಿ ಜನಾಂಗೀಯ ಸಂಘರ್ಷ, ಯುದ್ಧ, ಪ್ರಾಕೃತಿಕ ವಿಕೋಪಗಳು`ಒಂದರ ಹಿಂದೆ ಒಂದು ಬಂದೊದಗುತ್ತಿವೆ. 

"ಧಾರ್ಮಿಕ ನಾಯಕರು ಜನಾಂಗೀಯ ಸಂಘರ್ಷ ಹಾಗೂ ಇನ್ನಿತರ ಮನಸ್ಥಾಪಗಳನ್ನು ಬದಿಗೊತ್ತಿ, ಸಂಧಾನ ಹಾಗೂ ಶಾಂತಿಯನ್ನು ಉತ್ತೇಜಿಸಬೇಕು ಎಂದು ಅವರು ಹೇಳಿದರು. ಮುಂದುವರೆದು ಮಾತನಾಡಿದ ಅವರು "ಜನಾಂಗೀಯ ವಿಷಯಗಳಿಂದ ದೂರವಿದ್ದು, ದೇಶವನ್ನು ಬಾಧಿಸುತ್ತಿರುವ ಯುದ್ಧ ಹಾಗೂ ಸಂಘರ್ಷಗಳನ್ನು ನಿಲ್ಲಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಾ, ಈ ದೇಶದ ಸಾಂಸ್ಕೃತಿಕ ಶಾಂತಿ ಹಾಗೂ ಸಾಮರಸ್ಯವನ್ನು ಮರುಸ್ಥಾಪಿಸಬೇಕಾಗಿದೆ." ಎಂದು ಹೇಳಿದರು.   

 

09 May 2024, 16:00