ರೋಮ್ ಸಭೆಯ ನಂತರ, ಸಿನೋಡಾಲಿಟಿ ಪ್ರಸಾರಕರಾಗಿ ತಾಯ್ನಾಡಿಗೆ ತೆರಳಿದ ಧರ್ಮಕೇಂದ್ರದ ಗುರುಗಳು

ಸಿನೋಡ್'ಗಾಗಿ ಧರ್ಮಕೇಂದ್ರದ ಗುರುಗಳು ಎಂಬ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸುಮಾರು ಮುನ್ನೂರು ಧರ್ಮಕೇಂದ್ರದ ಗುರುಗಳಲ್ಲಿ ಮೂರು ಗುರುಗಳು ತಮ್ಮ ಅನುಭವವನ್ನು ವ್ಯಾಟಿಕನ್ ನ್ಯೂಸ್'ನೊಂದಿಗೆ ಹಂಚಿಕೊಂಡಿದ್ದಾರೆ.

ವರದಿ: ಜೋಸೆಫ್ ಟಲ್ಲೋಚ್, ಅಜಯ್ ಕುಮಾರ್

ಕಳೆದ ವಾರ ವಿಶ್ವದ ವಿವಿಧ ಧರ್ಮಕ್ಷೇತ್ರಗಳಿಂದ ಸುಮಾರು ಮುನ್ನೂರಕ್ಕೂ ಹೆಚ್ಚು ಧರ್ಮಕೇಂದ್ರದ ಗುರುಗಳು ರೋಮ್ ನಗರಕ್ಕೆ ಆಗಮಿಸಿದ್ದರು. ಇವರೆಲ್ಲರೂ ಸಿನೋಡ್ ಆಯೋಗ ಹಾಗೂ ವ್ಯಾಟಿಕನ್ ಪೀಠದ ಗುರುಗಳ ಆಯೋಗವು ಜಂಟಿಯಾಗಿ ಆಯೋಜಿಸಿದ್ದ "ಸಿನೋಡ್'ಗಾಗಿ ಧರ್ಮಕೇಂದ್ರದ ಗುರುಗಳು" ಎಂಬ ನಾಲ್ಕು ದಿನಗಳ ಕಾರ್ಯಾಗಾರದಲ್ಲಿ ಭಾಗವಹಿಸಲು ಆಗಮಿಸಿದ್ದರು.

ಈ ನಾಲ್ಕು ದಿನಗಳಲ್ಲಿ ಧರ್ಮಕೇಂದ್ರದ ಗುರುಗಳಿಗೆ ಸಿನೋಡ್ ಒಳಗೊಂಡಂತೆ ವಿವಿಧ ವಿಷಯಗಳ ಕುರಿತು ಉಪನ್ಯಾಸವನ್ನು ವಿವಿಧ ಸಂಪನ್ಮೂಲ ವ್ಯಕ್ತಿಗಳು ನೀಡಿದರು. ಆಲಿಸುವ ಧರ್ಮಸಭೆಯಲ್ಲಿ ಧರ್ಮಕೇಂದ್ರದ ಗುರುಗಳ ಪಾತ್ರ, ಭಕ್ತಾಧಿಗಳ ವಿವಿಧ ಅವಶ್ಯಕತೆಗಳ ಸ್ಪಂದನೆ ಹಾಗೂ ಇನ್ನೂ ಅನೇಕ ವಿಷಯಗಳ ಕುರಿತು ಇವರಿಗೆ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು.

ಇವರ ಕಾರ್ಯಕ್ರಮದ ಕೊನೆಯ ದಿನ ಪೋಪ್ ಫ್ರಾನ್ಸಿಸ್ ಇವರಿಗೆ ಪತ್ರವನ್ನು ಬರೆದು "ಧರ್ಮಕೇಂದ್ರದ ಗುರುಗಳು ಇಲ್ಲದಿದ್ದರೆ ಧರ್ಮಸಭೆಯನ್ನು ಊಹಿಸಿಕೊಳ್ಳುವುದು ಅಸಾಧ್ಯ" ಎಂದು ಹೇಳಿ, ಇವರ ಬದ್ಧತೆಯ ಸೇವೆಗೆ ಶ್ಲಾಘನೆಯನ್ನು ವ್ಯಕ್ತಪಡಿಸಿ, ಇವರನ್ನು ಹುರಿದುಂಬಿಸಿದ್ದರು.

ಈ ಕುರಿತು ವ್ಯಾಟಿಕನ್ ನ್ಯೂಸ್ ಸುದ್ದಿತಾಣಕ್ಕೆ ಹಲವು ಗುರುಗಳು ತಮ್ಮ ಅನುಭವ ಹಾಗೂ ಚಿಂತನೆಗಳನ್ನು ಹಂಚಿಕೊಂಡಿದ್ದಾರೆ.

ಆಸ್ಟ್ರೀಯಾ ದೇಶದ ಗ್ರಾಝ್-ಸಕಾವ್ ಧರ್ಮಕ್ಷೇತ್ರದ ಗುರು ಫಾದರ್ ಸ್ಟೆಫಾನ್ ಉಲ್ಝ್ ಮಾತನಾಡಿ, ಸಿನೋಡ್ ಅಥವಾ ಸಿನೋಡಲ್ ಚರ್ಚ್ ಎಂದರೆ "ಪವಿತ್ರಾತ್ಮರು ಪೋಪರು, ಧರ್ಮಾಧ್ಯಕ್ಷರು ಹಾಗೂ ಗುರುಗಳ ಮೂಲಕ ಮಾತ್ರವಲ್ಲದೆ ಎಲ್ಲರ ಮೂಲಕವೂ ಮಾತನಾಡುತ್ತಾರೆ ಎಂಬುದನ್ನು ತಿಳಿದುಕೊಳ್ಳುವುದಾಗಿದೆ" ಎಂದು ಹೇಳಿದರು.

 ಶ್ರೀಲಂಕಾ ದೇಶದ ಕೊಲಂಬೋ ಮಹಾಧರ್ಮಕ್ಷೇತ್ರದ ಗುರು ಫಾದರ್ ಜೂಡ್ ರಾಜ್ ಫರ್ನಾಂಡೋ ಅವರಿಗೆ ಸಿನೋಡ್ ಅಥವಾ ಆಲಿಸುವ ಧರ್ಮಸಭೆ ಎಂದರೆ "ಸಂಕಷ್ಟದಲ್ಲಿ ಯಾತನೆಯನ್ನು ಅನುಭವಿಸುತ್ತಿರುವವರಿಗೆ ಹತ್ತಿರವಾಗುವುದು ಎಂದರ್ಥ. ಮುಂದುವರೆದು ಮಾತನಾಡುವ ಅವರು ಸಿನೋಡ್ ಎಂದರೆ ನ್ಯಾಯ ಹಾಗೂ ಶಾಂತಿ ದೊರೆಯುವವರೆಗೂ ಜನರೊಂದಿಗೆ ನಡೆಯುವುದಾಗಿದೆ ಎಂದು ಹೇಳುತ್ತಾರೆ.

ಅಮೇರಿಕಾದ ಗ್ಯಾಲ್ವೆಸ್ಟನ್-ಹ್ಯೂಸ್ಟನ್ ಧರ್ಮಕ್ಷೇತ್ರದ ಗುರು ಫಾದರ್ ಕ್ಲಿಂಟ್ ರೆಸ್ಲರ್ ಅವರ ಧರ್ಮಕೇಂದ್ರದ ಜನರ ಪ್ರಕಾರ ಸಿನೋಡಲ್ ಧರ್ಮಸಭೆ ಎಂದರೆ ವಿಶ್ವಾಸವನ್ನು ತಮ್ಮ ಮಕ್ಕಳಿಗೆ ಅಂದರೆ ಮುಂದಿನ ತಲೆಮಾರಿಗೆ ವರ್ಗಾಯಿಸುವುದಾಗಿದೆ. ಮುಂದುವರೆದು ಮಾತನಾಡುವ ಅವರು ನಮ್ಮ ಧರ್ಮಕೇಂದ್ರದ ಹಲವು ಜನರನ್ನು ಈ ಕುರಿತು ಹುರಿದುಂಬಿಸುವುದು ಕಷ್ಟಕಾರಕ ಮಾತ್ರವಲ್ಲದೆ ನೋವಿನದ್ದಾಗಿದೆ ಎಂದು ಹೇಳುತ್ತಾರೆ. ಎಲ್ಲರನ್ನೂ ಒಳಗೊಳ್ಳಲು ನಾವು ಹೊಸ ಹಾದಿಗಳನ್ನು ಕಂಡುಕೊಳ್ಳಬೇಕಿದೆ ಎಂದು ತಮ್ಮ ಮಾತುಗಳನ್ನು ಹಂಚಿಕೊಂಡಿದ್ದಾರೆ.    

 

03 May 2024, 18:06