ಸಾಲ ಮನ್ನಾ ಮಾಡುವಂತೆ ಉಳ್ಳ ದೇಶಗಳಿಗೆ ಆಫ್ರಿಕಾ ಧಾರ್ಮಿಕ ನಾಯಕರ ಮನವಿ
ವರದಿ: ಲೀಸಾ ಝೆಂಗಾರಿನಿ, ಅಜಯ್ ಕುಮಾರ್
ಆಫ್ರಿಕಾದ ಕ್ರೈಸ್ತ ಹಾಗೂ ಧಾರ್ಮಿಕ ನಾಯಕರು ಧರ್ಮಸಭೆಯು 2025 ರ ವರ್ಷದಲ್ಲಿ ಜ್ಯೂಬಿಲಿಯನ್ನು ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಸೌಕರ್ಯವುಳ್ಳ ಶ್ರೀಮಂತ ದೇಶಗಳು ಆಫ್ರಿಕಾ ಖಂಡದ ದೇಶಗಳ ಮೇಲಿನ ಸಾಲವನ್ನು ಮನ್ನಾ ಮಾಡಬೇಕೆಂದು ಜಿ20, ಜಿ7, ಹಾಗೂ ಮುಂತಾದ ಅಂತರಾಷ್ಟ್ರೀಯ ಶೃಂಗಸಭೆಗಳಲ್ಲಿ ಮನವಿಯನ್ನು ಮಾಡಿಕೊಂಡಿದ್ದಾರೆ.
ಆಫ್ರಿಕಾ ಖಂಡದ ಕಥೋಲಿಕ ಕ್ರೈಸ್ತ ಧರ್ಮಾಧ್ಯಕ್ಷರು, ರಾಷ್ಟ್ರೀಯ ಕ್ರೈಸ್ತ ಪಂಗಡಗಳ ಧಾರ್ಮಿಕ ನಾಯಕರು ಹಾಗೂ ವಿವಿಧ ಮುಸ್ಲಿಂ ಪಂಗಡಗಳ ನಾಯಕರುಗಳನ್ನು ಒಳಗೊಂಡ ಸಮಿತಿಯು ಮುಂದಿನ ವರ್ಷದಲ್ಲಿ ಆಫ‌್ರಿಕಾ ದೇಶಗಳ ಮೇಲೆ ಇರುವ ಸಾಲವನ್ನು ಮನ್ನಿಸುವಂತೆ ಸಾಲಗಾರ ದೇಶಗಳಿಗೆ ಹಾಗೂ ಶ್ರೀಮಂತ ದೇಶಗಳಿಗೆ ಮನವಿ ಮಾಡಿದ್ದಾರೆ. ಮುಂದುವರೆದು ಮಾತನಾಡಿರುವ ಈ ಒಕ್ಕೂಟವು ಇದರಿಂದ ಸಾಲ ಕಟ್ಟುವ ಕಂತುಗಳ ಹಣವನ್ನು ತಮ್ಮ ದೇಶಗಳ ನಿವಾಸಿಗಳಿಗೆ ಉತ್ತಮ ಆರೋಗ್ಯ, ಶಿಕ್ಷಣ ಸೇರಿದಂತೆ ಮೂಲ ಸೌಕರ್ಯಗಳನ್ನು ನೀಡಲು ಸಹಾಯಕವಾಗುತ್ತದೆ ಎಂದು ಹೇಳಿದ್ದಾರೆ.
ಈ ಹಿಂದೆ ವಿಶ್ವಗುರು ಅನೇಕ ಬಾರಿ ಮುಂದುವರೆದ ದೇಶಗಳು ಅತ್ಯಂತ ಬಡ ದೇಶಗಳು ಹಾಗೂ ದ್ವೀಪರಾಷ್ಟ್ರಗಳ ಮೇಲಿನ ಸಾಲವನ್ನು ಮನ್ನಿಸಬೇಕೆಂದು ಮನವಿ ಮಾಡಿದ್ದರು. ವಿಶ್ವಸಂಸ್ಥೆಯಲ್ಲಿಯೂ ಸಹ ವ್ಯಾಟಿಕನ್ನಿನ ಅಧಿಕಾರಿಗಳು ಪೋಪ್ ಫ್ರಾನ್ಸಿಸ್ ಅವರ ಮಾತುಗಳನ್ನು ಪುನರುಚ್ಛರಿಸಿದ್ದರು.