ಬಹಳ ಮುಖ್ಯವಾದ ಅಧ್ಯಕ್ಷೀಯ ಚುನಾವಣೆಯಲ್ಲಿ ಮತದಾನ ಮಾಡುವಂತೆ ಪ್ರಜೆಗಳಿಗೆ ಕರೆ ನೀಡಿದ ವೆನೆಜುಲಾ ಧರ್ಮಾಧ್ಯಕ್ಷರು
ವರದಿ: ಲೀಸಾ ಝೆಂಗಾರಿನಿ, ಅಜಯ್ ಕುಮಾರ್
ಇನ್ನೊಂದು ವಾರದಲ್ಲಿ ವೆನೆಜುಲಾ ದೇಶದಲ್ಲಿ ಅಧ್ಯಕ್ಷೀಯ ಚುನಾವಣೆಗಳು ನಡೆಯುತ್ತಿರುವ ಹಿನ್ನೆಲೆ, ಇದು ಅತ್ಯಂತ ಮಹತ್ವದ ಚುನಾವಣೆಗಳಾಗಿರುವುದರಿಂದ ಎಲ್ಲರೂ ಸಹ ಜವಾಬ್ದಾರಿಯುತವಾಗಿ ಮತದಾನವನ್ನು ಮಾಡಬೇಕು ಎಂದು ವೆನೆಜುಲಾದ ಕಥೋಲಿಕ ಧರ್ಮಾಧ್ಯಕ್ಷರ ಮಂಡಳಿಯು ಕರೆ ನೀಡಿದೆ.
ಹತ್ತು ವರ್ಷಗಳಲ್ಲೇ ಮೊದಲ ಬಾರಿಗೆ ಇದೇ ತಿಂಗಳ ೨೮ ರಂದು ವೆನೆಜುಲಾ ದೇಶದಲ್ಲಿ ಅಧ್ಯಕ್ಷೀಯ ಚುನಾವಣೆಗಳು ನಡೆಯಲಿವೆ. ಪ್ರಸ್ತುತ ಇಲ್ಲಿನ ಅಧ್ಯಕ್ಷ ನಿಕೊಲಾಸ್ ಮಾದುರೊ ಅವರು ಹತ್ತು ವರ್ಷಗಳಿಂದ ಅಧಿಕಾರದಲ್ಲಿದ್ದಾರೆ. ಕಳೆದ ಹತ್ತು ವರ್ಷಗಳಲ್ಲಿ ವೆನೆಜುಲಾ ದೇಶವು ಆರ್ಥಿಕ ಹೊಡೆತ ಸೇರಿದಂತೆ ಹಲವು ರಾಜಕೀಯ ಏರಿಳಿತಗಳಿಗೆ ಸಾಕ್ಷಿಯಾಗಿದೆ.
ಅಧ್ಯಕ್ಷ ಮಾದುರೋ ಅವರು ಮತ್ತೊಮ್ಮೆ ಅಧ್ಯಕ್ಷರಾಗಲು ಚುನಾವಣೆಯಲ್ಲಿ ಸ್ಪರ್ಧಿಸಿದ್ದು, ಇವರ ವಿರುದ್ಧ ಊರಿಟಾದ ಎಡ್ಮಂಡೋ ಗೊನ್ಸಾಲೆಝ್ ಅವರು ಸ್ಪರ್ಧಿಸಲಿದ್ದಾರೆ. ಇವರು ಮಾಜಿ ಸರ್ಕಾರಿ ಅಧಿಕಾರಿಯಾಗಿದ್ದಾರೆ.
ಈ ಕುರಿತು ಮಾತನಾಡಿರುವ ಇಲ್ಲಿನ ಕಥೋಲಿಕ ಧರ್ಮಾಧ್ಯಕ್ಷರ ಮಂಡಳಿಯ ಧರ್ಮಾಧ್ಯಕ್ಷರು ಎಲ್ಲರೂ ಸಹ ಜವಾಬ್ದಾರಿಯುತವಾಗಿ ತಮ್ಮ ಮತದಾನದ ಹಕ್ಕನ್ನು ನಿರ್ವಹಿಸಬೇಕು ಎಂದು ಹೇಳಿದ್ದಾರೆ ಹಾಗೂ ಜನತೆಗೆ ಕರೆ ನೀಡಿದ್ದಾರೆ.