ಅಲ್ಪಸಂಖ್ಯಾತರ ಹಕ್ಕುಗಳನ್ನು ಪ್ರತಿಪಾದಿಸಿದ ಭಾರತದ ವಿವಿಧ ಕ್ರೈಸ್ತ ಪಂಗಡಗಳ ಧರ್ಮಾಧ್ಯಕ್ಷರುಗಳು
ವರದಿ: ಲಿಕಾಸ್ ನ್ಯೂಸ್
ಭಾರತದ ಕಥೋಲಿಕ ಧರ್ಮಾಧ್ಯಕ್ಷರುಗಳ ಮಂಡಳಿ (ಸಿಸಿಬಿಐ) ನೇತೃತ್ವದಲ್ಲಿ "ದಿ ನ್ಯಾಷನಲ್ ಎಕ್ಯುಮೆನಿಕಲ್ ಬಿಷಪ್ಸ್ ಫೆಲೊಷಿಪ್" ಸಂಘಟನೆಯು ಬೆಂಗಳೂರಿನ ಸೇಂಟ್ ಜಾನ್ಸ್ ನ್ಯಾಷನಲ್ ಅಕಾಡೆಮಿ ಆಫ್ ಹೆಲ್ತ್ ಸೈನ್ಸಸ್ ನಲ್ಲಿ ಸಭೆಯನ್ನು ನಡೆಸುತ್ತಿದ್ದು, ಈ ಸಭೆಯಲ್ಲಿ ಭಾರತದ ಎಲ್ಲಾ ಅಲ್ಪಸಂಖ್ಯಾತರ ಹಕ್ಕುಗಳ ಕುರಿತು ತೀವ್ರವಾಗಿ ಪ್ರತಿಪಾದಿಸಿದೆ ಎಂದು ಲಿಕಾಸ್ ನ್ಯೂಸ್ ವರದಿ ಮಾಡಿದೆ.
ಅಧಿವೇಶನದ ಅಧ್ಯಕ್ಷತೆಯನ್ನು ಸಿಬಿಸಿಐ ಅಧ್ಯಕ್ಷ ಆರ್ಚ್ ಬಿಷಪ್ ಆಂಡ್ರ್ಯೂಸ್ ಥಳತ್ ವಹಿಸಿದ್ದರು. ಅವರು ಈ ಸಭೆಗೆ ನೆರೆದಿದ್ದ ಎಲ್ಲರನ್ನೂ ಹೃತ್ಪೂರ್ವಕವಾಗಿ ಸ್ವಾಗತಿಸಿದರು. ಬಿಸಿಸಿಐ ಸಂವಾದ ಮತ್ತು ವಿವಿಧ ಕ್ರೈಸ್ತ ಪಂಗಡಗಳ ಕಾರ್ಯಾಲಯದ ಅಧ್ಯಕ್ಷ ಬಿಷಪ್ ಜೋಶುವಾ ಮಾರ್ ಇಗ್ನಾಥಿಯೋಸ್ ಅವರು ಉದ್ಘಾಟನಾ ಭಾಷಣ ಮಾಡಿದರು.
"ಈ ಸಭೆಯಲ್ಲಿ ಭಾರತದಲ್ಲಿ ಕ್ರೈಸ್ತ ಧರ್ಮಕ್ಕೆ ಸಂಬಂಧಿಸಿದ ವಿವಿಧ ಸಮಸ್ಯೆಗಳು ಹಾಗೂ ವಿಷಯಗಳ ಕುರಿತು ಚರ್ಚಿಸಲಾಗಿದ್ದು, ರಾಷ್ಟ್ರ ನಿರ್ಮಾಣದಲ್ಲಿ ಕ್ರೈಸ್ತರ ಪಾತ್ರದ ಕುರಿತೂ ಸಹ ಜಿಜ್ಞಾಸೆಯನ್ನು ನಡೆಸಲಾಗಿದೆ" ಎಂದು ಅಧಿಕೃತ ಹೇಳಿಕೆಯು ಹೇಳಿದೆ. ಮುಂದುವರೆದು, ಈ ಸಭೆಯಲ್ಲಿ ಭಾರತದಲ್ಲಿ ಎಲ್ಲಾ ಅಲ್ಪಸಂಖ್ಯಾತರ ರಕ್ಷಣೆ ಹಾಗೂ ಅವರ ಹಕ್ಕುಗಳ ಕುರಿತು ಪ್ರತಿಪಾದಿಸಲಾಗಿದೆ.