ಪಪುವಾ ನ್ಯೂಗಿನಿಯಲ್ಲಿ ಬುಡಕಟ್ಟು ಹಿಂಸಾಚಾರ ಉಲ್ಬಣ
ವರದಿ: ಲಿಂಡಾ ಬೊರ್ಡೋನಿ, ಅಜಯ್ ಕುಮಾರ್
ಪಪುವಾ ನ್ಯೂಗಿನಿ ದೇಶದಲ್ಲಿ ಚಿನ್ನದ ಗಣಿಯ ವಿಚಾರವಾಗಿ ಎರಡು ವಿಭಿನ್ನ ಬುಡಕಟ್ಟುಗಳ ನಡುವೆ ಹಿಂಸಾಚಾರ ಭುಗಿಲೆದ್ದಿದೆ. ಪಪುವಾ ನ್ಯೂಗಿನಿ ದೇಶವು ಸ್ವಾಭಾವಿಕ ಸಂಪನ್ಮೂಲಗಳ ಆಗರವಾಗಿದ್ದು, ಚಿನ್ನದ ನಿಕ್ಷೇಪಗಳಿರುವ ಪ್ರದೇಶದ ಮೇಲೆ ನಿಯಂತ್ರಣ ಸಾಧಿಸಲು ಇಲ್ಲಿನ ಬುಡಕಟ್ಟುಗಳು ಪರಸ್ಪರ ಸೆಣಸಾಟ ನಡೆಸುತ್ತಲೇ ಬಂದಿವೆ.
ಪೋಪ್ ಫ್ರಾನ್ಸಿಸ್ ಅವರು ಕಳೆದ ವಾರವಷ್ಟೇ ಪಪುವಾ ನ್ಯೂಗಿನಿ ದೇಶಕ್ಕೆ ಪ್ರೇಷಿತ ಭೇಟಿಯನ್ನು ನೀಡಿದ್ದರು. ತಮ್ಮ ಭೇಟಿಯ ವೇಳೆಯೂ ಸಹ ಅವರು ಇಲ್ಲಿನ ಸ್ವಾಭಾವಿಕ ಸಂಪನ್ಮೂಲಗಳ ಕುರಿತು ಮಾತನಾಡಿ, ಅವು ದೇವರು ನೀಡಿರುವ ವರದಾನವಾಗಿದ್ದು, ಎಲ್ಲರಿಗೂ ದಕ್ಕಬೇಕು. ಅದರಲ್ಲಿ ಎಲ್ಲರ ಪಾಲೂ ಇದೆ. ಅದನ್ನು ಸಂರಕ್ಷಿಸಬೇಕು ಎಂದು ಹೇಳಿದ್ದರು. ಇಲ್ಲಿಗೆ ಭೇಟಿ ನೀಡಿದ ಅದೇ ದಿನ ಪೋಪ್ ಫ್ರಾನ್ಸಿಸ್ ಅವರು ಸ್ವಾಭಾವಿಕ ಸಂಪನ್ಮೂಲಗಳ ಮೇಲೆ ಪಾರಮ್ಯ ಸಾಧಿಸಲು ವಿವಿಧ ಬುಡಕಟ್ಟುಗಳ ನಡುವೆ ನಡೆಯುತ್ತಿರುವ ಹಿಂಸಾತ್ಮಕ ಹೋರಾಟವನ್ನು ನಿಲ್ಲಿಸುವಂತೆ ಕರೆ ನೀಡಿದ್ದರು.
ಪಪುವಾ ನ್ಯೂಗಿನಿಯ ಎಂಗಾ ಪ್ರಾಂತ್ಯದಲ್ಲಿ ಈ ಹಿಂಸಾಚಾರ ಆರಂಭವಾಗಿದ್ದು, ಇದರಿಂದ ಸುಮಾರು ಇಪ್ಪತ್ತು ಜನರು ಮೃತರಾಗಿದ್ದಾರೆ ಎಂದು ವರದಿಯಾಗಿದೆ. ಆದರೆ, ಪಪುವಾ ನ್ಯೂಗಿನಿ ದೇಶಕ್ಕೆ ವಿಶ್ವಸಂಸ್ಥೆಯ ಮಾನವೀಯ ಸಲಹೆಗಾರರಾದ ಮಟೆ ಬೊಗೊಸ್ಸೆ ಅವರ ಪ್ರಕಾರ ಸುಮಾರು ಐವತ್ತಕ್ಕೂ ಹೆಚ್ಚು ಜನರು ಸತ್ತಿರುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.
"ಈ ಹಿಂಸಾಚಾರಗಳು ಕೊನೆಗೊಳ್ಳಲಿ. ವಿಶೇಷವಾಗಿ ಬುಡಕಟ್ಟು ಹಿಂಸಾಚಾರ ಎಂಬುದು ಕೊನೆಗೊಂಡು ಎಲ್ಲರೂ ಶಾಂತಿಯಿಂದ ಜೀವಿಸುವಂತಾಗಲಿ" ಎಂದು ಪೋಪ್ ಫ್ರಾನ್ಸಿಸ್ ಹೇಳಿದ್ದಾರೆ.