ಹಲವು ಕಷ್ಟಕರ ಪರಿಸ್ಥಿತಿಗಳನ್ನು ಬದಿಗೊತ್ತಿ ಪೋಪ್ ಫ್ರಾನ್ಸಿಸ್ ಅವರನ್ನು ನೋಡಲು ಆಗಮಿಸಿದ ಪಪುವಾ ನ್ಯೂಗಿನಿ ಭಕ್ತಾಧಿಗಳು
ವರದಿ: ಲಿಕಾಸ್ ನ್ಯೂಸ್
ಪೋಪ್ ಫ್ರಾನ್ಸಿಸ್ ಅವರು ಪಪುವಾ ನ್ಯೂಗಿನಿ ದೇಶಕ್ಕೆ ಭೇಟಿ ನೀಡುತ್ತಿರುವ ಹಿನ್ನೆಲೆ ದೇಶದ ವಿವಿಧ ಮೂಲೆಗಳಿಂದ ಭಕ್ತಾಧಿಗಳು ಹಲವು ಪ್ರಾಕೃತಿಕ ಸಂಕಷ್ಟಗಳ ನಡುವೆಯೂ ಸಹ ಆಗಮಿಸಿದ್ದಾರೆ. ಪಪುವಾ ನ್ಯೂಗಿನಿ ದೇಶವು ಕರಾವಳಿ ತೀರವಾಗಿದ್ದು, ಪರ್ವತಗಳು ಹಾಗೂ ಕಣಿವೆಗಳಿಂದ ಕೂಡಿದೆ. ಈ ನಡುವೆಯೂ ಸಹ ಅವರು ದೂರದ ಊರುಗಳಿಂದ ದುರ್ಗಮ ಪ್ರದೇಶಗಳಿಂದ ಪೋಪ್ ಫ್ರಾನ್ಸಿಸ್ ಅವರನ್ನು ಕಣ್ತುಂಬಿಕೊಳ್ಳಲು ಆಗಮಿಸಿದ್ದಾರೆ.
ಈ ಕುರಿತು ಮಾತನಾಡಿರುವ ಪಪುವಾ ನ್ಯೂಗಿನಿ ದೇಶದ ಲೇಹ್ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾದ ಅತಿ ಪೂಜ್ಯ ರೋಸಾರಿಯೋ ಮಿನೇಜಸ್ ಎಸ್. ಎಂ. ಎಂ. ಅವರು ಪಪುವಾ ನ್ಯೂಗಿನಿ ದೇಶದ ರಾಜಧಾನಿಯನ್ನು ಹೊರತು ಪಡಿಸಿ, ದೂರದ ದುರ್ಗಮ ಪ್ರದೇಶಗಳಿಂದ ಭಕ್ತಾಧಿಗಳು ಯಾವುದೇ ಸಂಕಷ್ಟಗಳನ್ನು ಲೆಕ್ಕಿಸದೆ ಪೋಪ್ ಫ್ರಾನ್ಸಿಸ್ ಅವರನ್ನು ನೋಡಲು ಬಂದಿರುವುದು ಅವರ ಬದ್ಧತೆ ಹಾಗೂ ಧರ್ಮಸಭೆಯೆಡೆಗಿನ ಪ್ರೀತಿಯನ್ನು ಸೂಚಿಸುತ್ತದೆ ಎಂದು ಹೇಳಿದ್ದಾರೆ.
ಮತ್ತೊಂದು ವಿಶೇಷತೆ ಎಂದರೆ ಧರ್ಮಾಧ್ಯಕ್ಷರಾದ ಅತಿ ಪೂಜ್ಯ ರೋಸಾರಿಯೋ ಮಿನೇಜಸ್ ಎಸ್. ಎಂ. ಎಂ. ಅವರು ನಮ್ಮ ಕರ್ನಾಟಕದವರೇ ಆಗಿದ್ದು, ಕೊಡಗಿನ ವಿರಾಜಪೇಟೆಯವರಾಗಿದ್ದಾರೆ. ಪಪುವಾ ನ್ಯೂಗಿನಿ ದೇಶದಲ್ಲಿ ಶುಭ ಸಂದೇಶ ಪ್ರಸಾರಕರಾಗಿ ಸೇವೆ ಸಲ್ಲಿಸುತ್ತಿದ್ದ ಅವರನ್ನು ಪೋಪ್ ಫ್ರಾನ್ಸಿಸ್ ಅವರು ಲೇಹ್ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರನ್ನಾಗಿ ನೇಮಿಸಿದ್ದರು.
ಪೋಪ್ ಫ್ರಾನ್ಸಿಸ್ ಅವರನ್ನು ನೋಡುವ ತವಕದಲ್ಲಿ ಪ್ರಯಾಣದ ಮಧ್ಯೆ ನಮ್ಮ ದೋಣಿ ಕೆಟ್ಟಿತ್ತಲ್ಲದೆ, ನಮ್ಮಲ್ಲಿದ್ದ ಪೆಟ್ರೋಲ್ ಸಹ ಖಾಲಿಯಾಗಿತ್ತು. ಯಾವುದೇ ಸಂಪರ್ಕವಿರದ ಕಾರಣ ನಮ್ಮ ಕುಟುಂಬಗಳು ನಾವು ಕಳೆದು ಹೋಗಿದ್ದೇವೆ ಎಂದು ಕೊಂಡಿದ್ದರು ಎಂದು ಹೇಳುವ ಮೂಲಕ ಇಲ್ಲಿನ ಭಕ್ತಾಧಿಗಳೊಬ್ಬರು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.