ನೆರವಿನ ಆತ್ಮಹತ್ಯೆಯ ವಿಧೇಯಕದ ವಿರುದ್ಧ ಹೋರಾಡುವಂತೆ ಕಥೋಲಿಕರಿಗೆ ಕರೆ ನೀಡಿದ ಕಾರ್ಡಿನಲ್ ನಿಕೋಲ್ಸ್
ವರದಿ: ಲೀಸಾ ಝೆಂಗಾರಿನಿ
ಇಂಗ್ಲೆಂಡ್ ಹಾಗೂ ವೇಲ್ಸ್ ದೇಶಗಳ ಕಥೋಲಿಕ ಧರ್ಮಾಧ್ಯಕ್ಷರುಗಳ ಮಂಡಳಿಯ ಅಧ್ಯಕ್ಷರಾದ ಕಾರ್ಡಿನಲ್ ವಿನ್ಸೆಂಟ್ ನಿಕೋಲ್ಸ್ ಅವರು ಇಂಗ್ಲೆಂಡ್ ಸಂಸತ್ತು ನೆರವಿನ ಆತ್ಮಹತ್ಯೆಯ ಕುರಿತು ರೂಪಿಸಿರುವ ವಿಧೇಯಕದ ವಿರುದ್ಧ ಕಥೋಲಿಕರು ಹೋರಾಡಬೇಕು. ಇದನ್ನು ಬೆಂಬಲಿಸದಂತೆ ಸಂಸತ್ ಸದಸ್ಯರ ಮನವೊಲಿಸಬೇಕು ಎಂದು ಪಾಲನಾ ಪತ್ರವನ್ನು ಕಥೋಲಿಕರಿಗೆ ಬರೆದಿದ್ದಾರೆ.
ಇಂಗ್ಲೆಂಡಿನ ಸಂಸತ್ತಾದ ಹೌಸ್ ಆಫ್ ಕಾಮನ್ಸ್'ನಲ್ಲಿ ಲೇಬರ್ ಪಾರ್ಟಿ ಸಂಸದ ಕಿಮ್ ಲೀಡ್'ಬೀಟರ್ ಅವರು ಮಾರಣಾಂತಿಕ ಖಾಯಿಲೆಯಿಂದ ಬಳಲುತ್ತಿರುವ ವಯಸ್ಕರು ತಮ್ಮ ಕುಟುಂಬಸ್ಥರಿಗೆ ಹೊರೆಯಾಗದಂತೆ, ನೆರವಿನ ಆತ್ಮಹತ್ಯೆಯನ್ನು ಮಾಡಿಕೊಳ್ಳಲು ಅವಕಾಶವನ್ನು ನೀಡುವ ವಿದೇಯಕವನ್ನು ಮಂಡಿಸಿದರು. ಈ ವಿಷಯದ ಕುರಿತು ನವೆಂಬರ್ 29 ರಂದು ಸಂಸದರುಗಳು ಮತವನ್ನು ಹಾಕಲಿದ್ದಾರೆ.
ಈ ಸಮಸ್ಯೆಯ ಕುರಿತಾಗಿ ಇಂಗ್ಲೆಂಡ್ ಹಾಗೂ ವೇಲ್ಸ್ ಪ್ರಾಂತ್ಯಗಳ ಕಥೋಲಿಕರಿಗೆ ಪಾಲನಾ ಪತ್ರವನ್ನು ಬರೆದಿರುವ ಕಾರ್ಡಿನಲ್ ವಿನ್ಸೆಂಟ್ ನಿಕೋಲ್ಸ್ ಅವರು ಈ ವಿದೇಯಕವು ಕಾನೂನಾಗಿ ಮಾರ್ಪಡುವುದನ್ನು ಎಲ್ಲರೂ ತಡೆಯಬೇಕು. ಇದಕ್ಕಾಗಿ ಸಂಸದರುಗಳಿಗೆ ಇದರ ಕುರಿತು ಮಾಹಿತಿಯನ್ನು ನೀಡಿ ಅದರ ವಿರುದ್ಧ ಮತ ಚಲಾಯಿಸುವಂತೆ ಅವರ ಮನವೊಲಿಸಬೇಕು ಎಂದು ಹೇಳಿದ್ದಾರೆ.
ಮುಂದುವರೆದು ತಮ್ಮ ಪತ್ರದಲ್ಲಿ ಮಾತನಾಡಿರುವ ವೆಸ್ಟ್'ಮಿನಿಸ್ಟರ್ ಮಹಾಧರ್ಮಕ್ಷೇತ್ರದ ಮಹಾಧರ್ಮಾಧ್ಯಕ್ಷರೂ ಆಗಿರುವ ಕಾರ್ಡಿನಲ್ ವಿನ್ಸೆಂಟ್ ನಿಕೋಲ್ಸ್ ಅವರು "ದೇವರು ಈ ಜೀವವನ್ನು ನಮಗಾಗಿ ನೀಡಿದ್ದಾರೆ. ಅವರು ನೀಡಿರುವುದನ್ನು ತೆಗೆಯುವುದಕ್ಕೆ ಯಾರಿಗೂ ಹಕ್ಕಿಲ್ಲ. ಅದೇ ರೀತಿ ಯಾತನೆ ಎಂಬುದು ಮನುಷ್ಯ ಬದುಕಿನ ಅವಿಭಾಜ್ಯ ಹಾಗೂ ಅನಿವಾರ್ಯ ಅಂಶವಾಗಿದ್ದು, ಮಾನವರೆಲ್ಲರೂ ಒಂದಲ್ಲ ಒಂದು ನಿಟ್ಟಿನಲ್ಲಿ ಕೊನೆಯವರೆಗು ಯಾತನೆಯನ್ನು ಅನುಭವಿಸಬೇಕಾಗುತ್ತದೆ. ಇದೇ ನಮ್ಮ ಬದುಕಿನ ಅಂತಿಮಾವಸ್ಥೆಯಾಗಿದ್ದು, ಇದನ್ನೇ ಕಾರಣವನ್ನಾಗಿಸಿ, ಒಬ್ಬ ಮನುಷ್ಯನ ಜೀವವನ್ನು ತೆಗೆಯುವುದಕ್ಕೆ ನಾವು ಆಸ್ಪದ ಕೊಡಬಾರದು" ಎಂದು ಹೇಳಿದ್ದಾರೆ.