ಪ್ಯಾಲೆಸ್ತೀನ್ ಕಥೋಲಿಕರು ಪವಿತ್ರ ನಾಡಿನಲ್ಲಿ ನೆಲೆಸಲು ನೆರವಾಗುತ್ತಿರುವ ಅಮೇರಿಕಾ ಕಥೋಲಿಕರು
ವರದಿ: ಸಿಸ್ಟರ್ ಬೆರ್ನಡೆಟ್
ಸಾಧಾರಣ ಕಾಲದ ಭಾನುವಾರವೊಂದರಲ್ಲಿ ಅಮೇರಿಕಾದ ಸ್ಯಾನ್ ಅಂತೋನಿಯೋ ನಗರದ ಪರಮ ಪ್ರಸಾದ ಧರ್ಮಕೇಂದ್ರದ ಭಕ್ತಾಧಿಗಳಿಗೆ ಪ್ಯಾಲೆಸ್ತೀನಿನ ಕಥೋಲಿಕ ಕುಟುಂಬದ ಸದಸ್ಯರು ಕೆಲವು ಪವಿತ್ರ ವಸ್ತುಗಳನ್ನು ಮಾರಾಟ ಮಾಡಲು ಇಚ್ಛಿಸಿದ್ದಾರೆ. ಈ ಹಣವು ಪವಿತ್ರ ನಾಡಿನಲ್ಲಿ ಕಥೋಲಿಕರು ಇರಲು ನೆರವಾಗುತ್ತದೆ ಎಂದು ಹೇಳಿದ್ದಾರೆ.
ಡೇವಿಡ್ ಡೇವಿಡ್, ಜಾಕ್ ಓಡೆ ಹಾಗೂ ಸಮೀ ಮುಬಾರಕ್ ಎಂಬ ಗೆಳೆಯರು ಪ್ಯಾಲೆಸ್ತೀನ್ ದೇಶದಿಂದ ಅಮೇರಿಕಾದ ಸ್ಯಾನ್ ಅಂತೋನಿಯೋ ನಗರದ ಪರಮ ಪ್ರಸಾದ ಧರ್ಮಕೇಂದ್ರಕ್ಕೆ ಆಗಮಿಸಿದ್ದು, ಪ್ಯಾಲೆಸ್ತೀನ್ ದೇಶದಲ್ಲಿ ಕ್ರೈಸ್ತರು ನೆಲೆಸಲು ಅವರ ಸಹಾಯಕ್ಕಾಗಿ ಇಲ್ಲಿ ಪವಿತ್ರ ವಸ್ತುಗಳನ್ನು ಮಾರಾಟ ಮಾಡುತ್ತಿದ್ದಾರೆ. ಈ ಕುರಿತು ಮಾತನಾಡುವ ಜಾಕ್ ಒಡೆ "ಅಲ್ಲಿನ ಪರಿಸ್ಥಿತಿ ಬಹಳ ವಿಷಮವಾಗಿದೆ. ಆದರೆ ಪವಿತ್ರ ನಾಡು ಯೇಸು ಕ್ರಿಸ್ತರು ಹುಟ್ಟಿದ ನಾಡು. ಅಲ್ಲಿ ಕ್ರೈಸ್ತರು ಇರಲೇ ಬೇಕೆಂಬುದು ನಮ್ಮ ಆಶಯ. ಆದುದರಿಂದ ನಾವು ಈ ಕಾರ್ಯವನ್ನು ಮಾಡುತ್ತಿದ್ದೇವೆ" ಎಂದು ಹೇಳಿದರು.
"ಯುದ್ಧ ಆರಂಭವಾಗುವುದಕ್ಕೂ ಮುಂಚಿತವಾಗಿ ನಮ್ಮ ಜೀವನಾಧಾರಕ್ಕೆಂದು ನಾವು ಪ್ರವಾಸಿಗರನ್ನು ನೆಚ್ಚಿಕೊಂಡಿದ್ದೆವು. ಆದರೆ ಯುದ್ಧ ಆರಂಭವಾದಾಗಿನಿಂದ ಪ್ರವಾಸಿಗರು ಬೆತ್ಲೆಹೇಂನಲ್ಲಿರುವ ನಮ್ಮ ಅಂಗಡಿಗೆ ಬರಲು ಹೆದರುತ್ತಿದ್ದಾರೆ. ಹಾಗಾಗಿ, ನಾವು ಬದುಕಲು ಹಾಗೂ ಅಲ್ಲಿನ ಕ್ರೈಸ್ತರಿಗೆ ನೆರವಾಗಲು ಅಮೇರಿಕಾ ದೇಶಕ್ಕೆ ಬರಬೇಕಾಯಿತು" ಎಂದು ಹೇಳುತ್ತಾರೆ.