ಪೋಪ್ ಫ್ರಾನ್ಸಿಸ್ ಶಾಂತಿ ಪ್ರಯತ್ನಗಳಿಗೆ ಧನ್ಯವಾದ ವ್ಯಕ್ತಪಡಿಸಿದ ಕಾರ್ಕೀವ್ ಧರ್ಮಾಧ್ಯಕ್ಷ

ಉಕ್ರೇನ್ ದೇಶದ ಕಾರ್ಕೀವ್ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರು ಈ ದೇಶದಲ್ಲಿ ಶಾಂತಿಯನ್ನು ಮರುಸ್ಥಾಪಿಸುವ ನಿಟ್ಟಿನಲ್ಲಿ ಮಾಡುತ್ತಿರುವ ಪ್ರಯತ್ನಗಳಿಗೆ ಧನ್ಯವಾದಗಳನ್ನು ವ್ಯಕ್ತಪಡಿಸಿದ್ದಾರೆ.

ವರದಿ: ಸ್ವಿಟ್ಲಾನಾ, ಟರಾಸ್

ಉಕ್ರೇನ್ ದೇಶದ ಕಾರ್ಕೀವ್ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರು ಈ ದೇಶದಲ್ಲಿ ಶಾಂತಿಯನ್ನು ಮರುಸ್ಥಾಪಿಸುವ ನಿಟ್ಟಿನಲ್ಲಿ ಮಾಡುತ್ತಿರುವ ಪ್ರಯತ್ನಗಳಿಗೆ ಧನ್ಯವಾದಗಳನ್ನು ವ್ಯಕ್ತಪಡಿಸಿದ್ದಾರೆ. ಬಿಷಪ್ ಪಾವ್ಲೋ ಹೊಂಚಾರುಕ್ ಅವರು ಪೋಪ್ ಫ್ರಾನ್ಸಿಸ್ ಅವರ ಶಾಂತಿ ಸ್ಥಾಪನಾ ಪ್ರಯತ್ನಗಳನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ ಎಂದು ವರದಿಯಾಗಿದೆ.

ಇತ್ತೀಚೆಗಿನ ತಮ್ಮ ಭಾನುವಾರದ ತ್ರಿಕಾಲ ಪ್ರಾರ್ಥನೆಯಲ್ಲಿ ಪೋಪ್ ಫ್ರಾನ್ಸಿಸ್ ಅವರು ರಷ್ಯಾ-ಉಕ್ರೇನ್ ಯುದ್ಧದ ಕುರಿತು ಪ್ರತಿಕ್ರಿಯಿಸಿ ಇನ್ನೇನು ಚಳಿಗಾಲ ಹತ್ತಿರವಾಗುತ್ತಿದೆ. ಜನರನ್ನು ಕೊಲ್ಲುವ ಉದ್ದೇಶದಿಂದ ರಷ್ಯಾ ದೇಶವು "ಮೂಲ ಸೌಕರ್ಯವನ್ನು" ನಾಶಮಾಡುತ್ತಿದೆ. ಜನರು ಚಳಿಗಾಲದಲ್ಲಿ ಬೆಚ್ಚಗಿನ ಪ್ರದೇಶಗಳಲ್ಲಿ ಇರಲು ಸಾಧ್ಯವಾಗದಂತೆ ಮಾಡಲು ಈ ರೀತಿಯ ಕ್ರಮವನ್ನು ರಷ್ಯಾ ಅನುಸರಿಸುತ್ತಿದೆ ಎಂದು ಹೇಳಿದ್ದರು.

ರಷ್ಯಾ ಸೇನೆಯು ಉಕ್ರೇನ್ ದೇಶದ ವಿವಿಧ ಭಾಗಗಳ ಮೇಲೆ ಇನ್ನೂ ಸಹ ಬಾಂಬ್ ದಾಳಿಯನ್ನು ನಡೆಸುತ್ತಿದೆ. ಈ ನಿಟ್ಟಿನಲ್ಲಿ ಮಾತನಾಡಿದ ಬಿಷಪ್ ಹೊಂಚಾರುಕ್ ಅವರು ಉಕ್ರೇನ್ ಜನರು ಅತ್ಯಂತ ವಿಷಮ ಪರಿಸ್ಥಿತಿಯಲ್ಲಿ ಜೀವನವನ್ನು ನಡೆಸುತ್ತಿದ್ದಾರೆ. ಯಾವ ಸಂದರ್ಭದಲ್ಲಿ ಏನಾಗುತ್ತದೋ ಎಂಬ ಭಯದಲ್ಲಿ ಅವರು ಕಾಲವನ್ನು ಸಾಗಿಸುತ್ತಿದ್ದಾರೆ ಎಂದು ಹೇಳಿದರು. ಮುಂದುವರೆದು ಮಾತನಾಡಿರುವ ಅವರು "ನಮಗೂ ಸಹ ಹಿಂದಿನಂತೆಯೇ ನಮ್ಮದೇ ದೇಶದಲ್ಲಿ ಸಕಲ ಸ್ವಾತಂತ್ರ್ಯ, ಘನತೆ, ಹಾಗೂ ಗೌರವದಿಂದ ಜೀವನವನ್ನು ನಡೆಸುವ ಹಕ್ಕಿದೆ" ಎಂದು ಹೇಳಿದ್ದಾರೆ.

ರಷ್ಯಾ ದೇಶವು ಈಗಾಗಲೇ ಮೂಲಸೌಕರ್ಯವನ್ನು ನಾಶ ಮಾಡುತ್ತಿದ್ದು, ಚಳಿಗಾಲದಲ್ಲಿ ಜನರು ಅತಿ ಘೋರ ಯಾತನೆಯನ್ನು ಅನುಭವಿಸಬೇಕಾಗುತ್ತದೆ. ಈಗಾಗಲೇ ಈ ಕಾರ್ಯವನ್ನು ರಷ್ಯಾ ಮಾಡುತ್ತಿದ್ದು, ಇನ್ನು ಮುಂದೆಯೂ ಸಹ ಅದು ದಾಳಿ ಮಾಡಲಿದೆ ಎಂದು ಧರ್ಮಾಧ್ಯಕ್ಷರು ಹೇಳಿದ್ದಾರೆ. 

15 October 2024, 18:06