ಭಾರತ: ವಲಸಿಗರಿಗೆ ಕೇರಳದಲ್ಲಿ ಭರವಸೆಯ ಬೆಳಕಾಗಿರುವ ಸಿಸ್ಟರ್ ಗ್ರೇಸಿ
ವರದಿ: ವ್ಯಾಟಿಕನ್ ನ್ಯೂಸ್
ಭಾರತದ ಕೇರಳ ರಾಜ್ಯದಲ್ಲಿ ಸಿಸ್ಟರ್ಸ್ ಆಫ್ ಚಾರಿಟಿ ಆಫ್ ನಜರೇತ್ ಎಂಬ ಧಾರ್ಮಿಕ ಸಭೆಯ ಭಗಿನಿಯಾಗಿರುವ ಸಿಸ್ಟರ್ ಗ್ರೇಸಿ ಥೊಂಬ್ರಕುಡಿಯಿಲ್, ಎಸ್.ಸಿ.ಎನ್ ಅವರು ಇಲ್ಲಿನ ವಲಸಿಗರಿಗಾಗಿ ವಿಶೇಷ ಯೋಜನೆಯನ್ನು ಆರಂಭಿಸಿದ್ದು, ಅವರಿಗಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಘನತೆಯ ಬದುಕನ್ನು ಹರಸಿ, ತಮ್ಮ ಊರುಗಳನ್ನು ಬಿಟ್ಟು ವಲಸೆ ಬರುವ ಕಾರ್ಮಿಕರಿಗೆ ಸಿಸ್ಟರ್ ಗ್ರೇಸಿ ಅವರ ನೆರವು ಮರುಭೂಮಿಯಲ್ಲಿ ಒಯಸಿಸ್ ಸಿಕ್ಕಂತಾಗಿದೆ.
ಸಿಸ್ಟರ್ ಗ್ರೇಸಿ ಅವರು ಕೇರಳದವರಾಗಿದ್ದು, ತಮ್ಮ ಪೋಷಕರಿಗೆ ಮೂರನೇ ಮಗುವಾಗಿದ್ದಾರೆ. ಪ್ರಸ್ತುತ ಸಿಸ್ಟರ್ಸ್ ಆಫ್ ಚಾರಿಟಿ ಆಫ್ ನಜರೇತ್ ಎಂಬ ಧಾರ್ಮಿಕ ಸಭೆಯಲ್ಲಿ ಭಗಿನಿಯಾಗಿರುವ ಅವರು ವಲಸಿಗರ ಸೇವೆಯನ್ನು ಮಾಡುತ್ತಿದ್ದು, ಇದರಿಂದ ಇನ್ನೂ ಹಲವಾರು ಸಿಸ್ಟರ್'ಗಳು ಪ್ರೇರಣೆಯನ್ನು ಪಡೆದಿದ್ದಾರೆ.
ಭಗಿನಿಯಾದ ಆರಂಭದಲ್ಲಿ ಇವರು ಝಾರ್ಖಂಡಿನ ಸಂತಾಲ್ ಬುಡಕಟ್ಟು ಸಮುದಾಯದವರೊಂದಿಗೆ ಕಾರ್ಯನಿರ್ವಹಿಸಿದ್ದು, ಅವರಿಗಾಗಿ ಶೈಕ್ಷಣಿಕ ಹಾಗೂ ಸಾಮಾಜಿಕ ಸೇವೆಯನ್ನು ಸಲ್ಲಿಸಿದ್ದಾರೆ.
ಭಾರತದಲ್ಲಿ ಹೆಚ್ಚುತ್ತಿರುವ ವಲಸೆ ಸಮಸ್ಯೆಯಿಂದಾಗಿ ವಿವಿಧ ರಾಜ್ಯಗಳಲ್ಲಿ ವಲಸಿಗರು ಅನೇಕ ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ಅವರ ಸಂಕಷ್ಟಗಳಿಗೆ ನೆರವಾಗುವ ನಿಟ್ಟಿನಲ್ಲಿ ಯೇಸು ಸಭೆಯ ಗುರುಗಳೊಂದಿಗೆ ಸಿಸ್ಟರ್ಸ್ ಆಫ್ ಚಾರಿಟಿ ಆಫ್ ನಜರೇತ್ ಧಾರ್ಮಿಕ ಸಭೆಯು ಸಹಯೋಗದಲ್ಲಿ ವಲಸಿಗರ ಸೇವಾಕಾರ್ಯವನ್ನು ಅರಂಭಿಸಿದ್ದು, ಇದಕ್ಕೆ ಸಿಸ್ಟರ್ ಗ್ರೇಸಿ ಅವರನ್ನು ಸಂಚಾಲಕರನ್ನಾಗಿ ನೇಮಿಸಿದೆ. ಏಕೆಂದರೆ ಸಿಸ್ಟರ್ ಗ್ರೇಸಿ ಅವರಿಗೆ ವಲಸಿಗರ ಭಾಷೆ ಹಾಗೂ ಸಂಸ್ಕೃತಿಯ ಕುರಿತು ಅರಿವಿದೆ.
ಸಿಸ್ಟರ್ ಗ್ರೇಸಿ ಅವರು ವಲಸಿಗರ ಕಷ್ಟಗಳಿಗೆ ಸ್ಪಂದಿಸುತ್ತಾ, ಅವರಿಗೆ ಜಾಗೃತಿಯನ್ನು ಮೂಡಿಸುತ್ತಾ ತಮ್ಮ ಸೇವೆಯನ್ನು ಮುಂದುವರೆಸಿಕೊಂಡು ಬರುತ್ತಿದ್ದಾರೆ.