"ಸಿನೋಡಲ್ ಫಾದರ್" ಆಗಿ ಭಾಗವಹಿಸಿರುವ ಶ್ರೀಸಾಮಾನ್ಯರೊಬ್ಬರ ಮಗಳ ಹುಟ್ಟುಹಬ್ಬ
ವರದಿ: ಸಾಲ್ವತೋರೆ ಚೆರ್ನೂಝಿಯೊ, ಅಜಯ್ ಕುಮಾರ್
ಪ್ರಸ್ತುತ ನಡೆಯುತ್ತಿರುವ ಸಿನೋಡ್ ಸಭೆಯಲ್ಲಿ "ಸಿನೋಡಲ್ ಫಾದರ್" ಆಗಿ ಭಾಗವಹಿಸಿರುವ "ಡಿಜಿಟಲ್ ಮಿಷನರಿ"ಯಾಗಿರುವ ಶ್ರೀಸಾಮಾನ್ಯ ವ್ಯಕ್ತಿಯಾದ ಹೊಸೆ ಮ್ಯಾನುಯೇಲ್ ಉರ್ಕೀಡಿ ಅವರ ಮಗಳು ರೋಮ್ ನಗರಕ್ಕೆ ಪ್ರಯಾಣಿಸಿ, ತನ್ನ ತಂದೆಯೊಂದಿಗೆ ತನ್ನ ಹತ್ತನೇ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದಾಳೆ. ಈ ವೇಳೆ ಪೋಪ್ ಫ್ರಾನ್ಸಿಸ್ ಅವರೂ ಸಹ ಅಲ್ಲಿದ್ದು, ಆಕೆಗೆ ಶುಭಾಶಯವನ್ನು ಕೋರಿದ್ದಾರೆ.
ಇಂದು ಸಿನೋಡ್ ಸಭೆಯಲ್ಲಿ ವಿಶ್ವಗುರು ಪೋಪ್ ಫ್ರಾನ್ಸಿಸ್ ಅವರು "ಹ್ಯಾಪಿ ಬರ್ತ್'ಡೇ ಟು ಯೂ" ಎಂದು ಹುಟ್ಟು ಹಬ್ಬದ ಶುಭಾಶಯ ಗೀತೆಯನ್ನು ಆರಂಭಿಸುತ್ತಿದ್ದಂತೆ, ಎಲ್ಲಾ ಸದಸ್ಯರು ಕರತಾಡನ ಮಾಡುವ ಮೂಲಕ ಅದಕ್ಕೆ ದನಿಗೂಡಿಸಿದರು. ಇನೇಸ್ ಎಂಬ ಹತ್ತು ವರ್ಷದ ಬಾಲಕಿಯ ಹುಟ್ಟು ಹಬ್ಬವನ್ನು ಸರಳವಾಗಿ ಹಾಗೂ ವಿಶೇಷವಾಗಿ ಈ ಸಭೆಯಲ್ಲಿ ಆಚರಿಸಲಾಗಿತ್ತು.
ವಿಶ್ವಗುರು ಫ್ರಾನ್ಸಿಸರು ಈ ಬಾಲಕಿಗೆ ಅರ್ಜೆಂಟೀನಾದ ವಿಶೇಷ ಸಿಹಿ ತಿನಿಸಿನ ಬಾಕ್ಸ್ ಅನ್ನು ನೀಡಿ, ಹರಸಿ ಆಶೀರ್ವದಿಸಿದರು. ಇದಕ್ಕೆ ಪ್ರತಿಯಾಗಿ ಬಾಲಕಿ ವಿಶ್ವಗುರು ಫ್ರಾನ್ಸಿಸ್ ಅವರಿಗೆ ತಾನು ಹಾಗೂ ತನ್ನ ಸ್ನೇಹಿತರು ಆಲ್ ಸೇಂಟ್ಸ್ ಕ್ಯಾಥೊಲಿಕ್ ಸ್ಕೂಲ್ ಡಲ್ಲಾಸ್ ನಗರದಲ್ಲಿ ಬರೆದ ಚಿತ್ರಗಳನ್ನು ಉಡುಗೊರೆಯಾಗಿ ನೀಡಿದಳು.