2025 ರ ಸಾರ್ವತ್ರಿಕ ಸಭೆಯಲ್ಲಿ ಸಿನೋಡಲ್ ಹಾದಿಗಳನ್ನು ಚರ್ಚಿಸಲಿರುವ ಭಾರತದ ಧರ್ಮಾಧ್ಯಕ್ಷರುಗಳು
ವರದಿ: ಲಿಕಾಸ್ ನ್ಯೂಸ್
ಭಾರತದ ಕಥೋಲಿಕ ಧರ್ಮಾಧ್ಯಕ್ಷರುಗಳ ಮಂಡಳಿಯು 2025 ರ ಸಾರ್ವತ್ರಿಕ ಸಭೆಯಲ್ಲಿ ಸಿನೋಡಲ್ ಹಾದಿಗಳನ್ನು ಚರ್ಚಿಸಲಾಗುವುದು ಎಂದು ಹೇಳಿದೆ. ಧರ್ಮಸಭೆಯಲ್ಲಿ ಒಳಗೊಳ್ಳುವಿಕೆಯ ಕುರಿತು ಹೆಚ್ಚಿನ ಸಂವಾದವನ್ನು ನಡೆಸಲಿದೆ ಎಂದು ಹೇಳಿದೆ.
ಸಿಸಿಬಿಐ ಕಾರ್ಯದರ್ಶಿ ಕಚೇರಿಯ ಪ್ರಕಾರ ಈಗಾಗಲೇ ಪೂರ್ವಸಿದ್ಧತೆಯಾಗಿ ಧರ್ಮಕ್ಷೇತ್ರಗಳಿಗೆ ಈ ಕುರಿತು ಪ್ರಶ್ನಾವಳಿ ಹಾಗೂ ಮಾಹಿತಿ ಪುಸ್ತಕವನ್ನು ರವಾನಿಸಲಾಗಿದೆ ಎಂದು ತಿಳಿದು ಬಂದಿದೆ. ಪ್ರಶ್ನಾವಳಿಯ ಉದ್ದೇಶವೇನೆಂದರೆ ಧರ್ಮಸಭೆಯ ಒಳಗೊಳ್ಳುವಿಕೆಯ ಕುರಿತು ವಿವಿಧ ಸ್ಥರಗಳ ವ್ಯಕ್ತಿಗಳ ಅಭಿಪ್ರಾಯವನ್ನು ಸಂಗ್ರಹಿಸುವುದಾಗಿದೆ ಹಾಗೂ ಆ ಮೂಲಕ ಒಂದಾಗಿ ಪಯಣಿಸುವ ಧರ್ಮಸಭೆಗೆ ಬೇಕಾದ ಅಂಶಗಳನ್ನು ಕ್ರೋಢೀಕರಿಸುವುದಾಗಿದೆ.
ಶ್ರೀಸಾಮಾನ್ಯ ಜನರೂ ಸಹ ಇದರಲ್ಲಿ ಪಾಲ್ಗೊಂಡು ಅವರ ಅಭಿಪ್ರಾಯಗಳನ್ನು ಕಳುಹಿಸುವ ಸಲುವಾಗಿ ಆನ್ಲೈನ್ ಸಮೀಕ್ಷೆಗಳನ್ನೂ ಸಹ ಸಿಸಿಬಿಐ ಹಮ್ಮಿಕೊಂಡಿದೆ ಎಂದು ಸಿಸಿಬಿಐ ಕಾರ್ಯದರ್ಶಿ ಕಚೇರಿಯು ಹೇಳಿದೆ. ಇದೇ ಮೊದಲ ಬಾರಿಗೆ ಸಿಸಿಬಿಐ ಸಾರ್ವತ್ರಿಕ ಸಭೆಗಾಗಿ ಇಷ್ಟು ದೊಡ್ಡ ಮಟ್ಟದ ಪೂರ್ವ ಸಿದ್ಧತೆಯನ್ನು ಮಾಡುತ್ತಿದೆ ಎಂದು ಕಚೇರಿಯು ತಿಳಿಸಿದೆ.
ಈ ಸಾರ್ವತ್ರಿಕ ಸಭೆಯು ಇದರಲ್ಲಿ ಭಾಗವಹಿಸುವವರು ಹೆಚ್ಚಿನ ರೀತಿಯ ಆಧ್ಯಾತ್ಮಿಕ ಅನುಭೂತಿ ಹಾಗೂ ಸಹಭಾಗಿತ್ವವನ್ನು ಹೊಂದಲು "ಸ್ಪಿರಿಚುವಲ್ ಕಾನ್ವರ್ಸೆಷನ್ ಮೆಥಡಾಲಜಿ" ಅಂದರೆ ಆಧ್ಯಾತ್ಮಿಕ ಸಂವಹನ ರೀತಿಯನ್ನು ಪರಿಚಯಿಸಲಿದೆ ಎಂದು ತಿಳಿದು ಬಂದಿದೆ.