ಧರ್ಮಸಭೆಯೆಡೆಗಿನ ಈಸ್ಟೋನಿಯಾ ನಿಷ್ಠೆಗೆ ನೂರು ವರ್ಷಗಳ ಸಂಭ್ರಮ
ವರದಿ: ಕೀಲ್ಚೆ ಗುಸ್ಸಿ, ಅಜಯ್ ಕುಮಾರ್
ಈಸ್ಟೋನಿಯಾ ದೇಶದಲ್ಲಿ ಪ್ರೇಷಿತ ಆಡಳಿತವನ್ನು ಆರಂಭಿಸಿದ ನೂರು ವರ್ಷದ ಸವಿ ನೆನಪಿಗೆ, ವಿಶ್ವಗುರು ಫ್ರಾನ್ಸಿಸ್ ಅವರು ಈಸ್ಟೋನಿಯಾ ಧರ್ಮಸಭೆಗೆ ಪತ್ರವನ್ನು ಬರೆದಿದ್ದಾರೆ. ಇಲ್ಲಿನ ಟಲ್ಲೀನ್ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾದ ಫಿಲಿಪ್ಪೆ ಜಿಯಾನ್ ಚಾರ್ಲ್ಸ್ ಜೌರ್ಡಾನ್ ಅವರಿಗೆ ವಿಶ್ವಗುರು ಫ್ರಾನ್ಸಿಸ್ ಅವರು ಪತ್ರವನ್ನು ಬರೆದಿದ್ದಾರೆ. ಪ್ರೇಷಿತ ಆಡಳಿತ ಎಂದರೆ ಇನ್ನೂ ಧರ್ಮಕ್ಷೇತ್ರವನ್ನಾಗಿ ರೂಪಿಸದ ಕಥೋಲಿಕ ಸಮುದಾಯವಾಗಿದೆ. ಇದರ ಉಸ್ತುವಾರಿಯನ್ನು ಪ್ರೇಷಿತ ಆಡಳಿತಾಧಿಕಾರಿಗಳು ಹೊಂದಿರುತ್ತಾರೆ.
2018 ರಲ್ಲಿ ಈಸ್ಟೋನಿಯಾ ದೇಶಕ್ಕೆ ಭೇಟಿ ನೀಡಿದ ಕುರಿತು ನೆನಪಿಸಿಕೊಂಡ ಪೋಪ್ ಫ್ರಾನ್ಸಿಸ್ ಅವರು "ಬಹಳಷ್ಟು ಬೇಗ ಮೈಲಿಗಲ್ಲುಗಳನ್ನು ದಾಟುತ್ತಿರುವ ಈಸ್ಟೋನೊಯಾ ಧರ್ಮಸಭೆಗೆ ಶುಭಾಶಯಗಳು" ಎಂದು ಹೇಳಿದ್ದಾರೆ. ಚಿಕ್ಕದಾಗಿದ್ದರೂ, ಚೊಕ್ಕವಾಗಿರುವ ಈಸ್ಟೋನೊಯಾ ಧರ್ಮಸಭೆ, ಕ್ರಿಯಾಶೀಲರಾಗಿರುವ ಕಥೋಲಿಕ ಸಮುದಾಯವನ್ನು ಹೊಂದಿದೆ. ಇದು ಲಕ್ಷಾಂತರ ಜನರಿಗೆ ಆಧ್ಯಾತ್ಮಿಕತೆಯ ಸ್ಪೂರ್ತಿಯಾಗಿದೆ ಎಂದು ಪೋಪ್ ಫ್ರಾನ್ಸಿಸ್ ಅವರು ತಮ್ಮ ಪತ್ರದಲ್ಲಿ ಹೇಳಿದ್ದಾರೆ.
1924 ರಲ್ಲಿ ವಿಶ್ವಗುರು ಹನ್ನೊಂದನೇ ಭಕ್ತಿನಾಥರು ಈಸ್ಟೋನಿಯಾ ದೇಶದಲ್ಲಿ ಪ್ರೇಷಿತ ಆಡಳಿತವನ್ನು ಆರಂಭಿಸಿದರು. ಆಗ ಇಡೀ ದೇಶದಲ್ಲಿನ ಕಥೋಲಿಕರ ಸಂಖ್ಯೆ ಕೇವಲ 2000 ಆಗಿತ್ತು. ಆದರೆ, ಇದೀಗ ಕಥೋಲಿಕರು ಇಲ್ಲಿನ ಒಟ್ಟಾರೆ ಜನಸಂಖ್ಯೆಯ ಒಂದರಷ್ಟಿದ್ದು, ಈ ದೇಶದ ಸುಮಾರು ಅರವತ್ತು ಪ್ರತಿಶತ ಜನರು ತಮಗೆ ಧರ್ಮವೇ ಇಲ್ಲ ಎಂದು ಘೋಷಿಸಿಕೊಂಡಿದ್ದಾರೆ.