ಸಿಂಗಪೋರ್ ದೇಶದಲ್ಲಿ ಬಲಿಪೂಜೆ ಅರ್ಪಿಸುತ್ತಿದ್ದ ಗುರುಗಳಿಗೆ ಚಾಕು ಇರಿತ
ವರದಿ: ಡೆಬೋರಾ ಕ್ಯಾಸ್ಟಲೀನೋ ಲುಬೋವ್, ಅಜಯ್ ಕುಮಾರ್
ಸಿಂಗಪೋರ್ ದೇಶದ ಅಪ್ಪರ್ ಬುಕೀಟ್ ಟಿಮಾ ಎಂಬ ಪ್ರದೇಶದಲ್ಲಿರುವ ಸಂತ ಜೋಸೆಫರ ದೇವಾಲಯದಲ್ಲಿ ಬಲಿಪೂಜೆಯನ್ನು ಅರ್ಪಿಸುತ್ತಿದ್ದ ವೇಳೆ ಫಾದರ್ ಕ್ರಿಸ್ಟೋಫರ್ ಲೀ ಅವರಿಗೆ ದುಷ್ಕರ್ಮಿಯೊಬ್ಬ ಚಾಕುವಿನಿಂದ ಇರಿದಿದ್ದಾನೆ ಎಂದು ನ್ಯೂಸ್ ಚಾನೆಲ್ ಏಷಿಯಾ ವರದಿ ಮಾಡಿದೆ.
ಫಾದರ್ ಕ್ರಿಸ್ಟೋಫರ್ ಲೀ (57) ಅವರು ಬಲಿಪೂಜೆಯನ್ನು ಅರ್ಪಿಸುತ್ತಿದ್ದ ವೇಳೆ ಹಠಾರ್ ಅವರ ಮೇಲೆ ದಾಳಿ ಮಾಡಿರುವ ದುಷ್ಕರ್ಮಿಯೊಬ್ಬ ಅವರಿಗೆ ಚಾಕು ಇರಿದಿದ್ದಾನೆ. ತಕ್ಷಣವೇ ಫಾದರ್ ಲೀ ಅವರನ್ನು ಯೂನಿವರ್ಸಿಟಿ ಆಸ್ಪತ್ರೆಗೆ ದಾಖಲು ಮಾಡಲಾಗಿ, ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವರದಿಯಾಗಿದೆ.
ಫಾದರ್ ಲೀ ಅವರ ಮೇಲೆ ಚಾಕುವಿನಿಂದ ದಾಳಿ ಮಾಡಿದ ವ್ಯಕ್ತಿಯನ್ನು ಸಿಂಗಪೋರ್ ಪ್ರಜೆ ಎಂದು ಗುರುತಿಸಲಾಗಿದ್ದು, ಅವನನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಬಂಧನಕ್ಕೂ ಮುಂಚಿತವಾಗಿ ಆತ ದಾಳಿ ಮಾಡಿದ ಸಂದರ್ಭದಲ್ಲಿ ದೇವಾಲಯದಲ್ಲಿದ್ದ ಭಕ್ತಾಧಿಗಳು ಅವನನ್ನು ಹಿಡಿದುಕೊಂಡರು ಹಾಗೂ ಇದರಿಂದ ದೊಡ್ಡ ಅನಾಹುತವನ್ನು ತಪ್ಪಿಸಿದರು ಎಂದು ಹೇಳಲಾಗಿದೆ.
ಈ ಘಟನೆಯನ್ನು ಅಲ್ಲಿನ ಸರ್ಕಾರ ಹಾಗೂ ಧರ್ಮಸಭೆ ತೀವ್ರವಾಗಿ ಖಂಡಿಸಿದೆ. ಈ ಘಟನೆಯ ಬೆನ್ನಲ್ಲೇ ಪ್ರಾರ್ಥನಾ ಮಂದಿರಗಳ ಸುರಕ್ಷತೆಯ ಕುರಿತ ಚರ್ಚೆ ಆರಂಭವಾಗಿದೆ ಎಂದು ಸುದ್ದಿ ವಾಹಿನಿಗಳು ವರದಿ ಮಾಡಿವೆ.