ಪೂರ್ವ ಧರ್ಮಸಭೆಗಳಿಂದ ಸುದ್ದಿ - ಮಾರ್ಚ್ 14, 2025
ಈ ವಾರದ ಪೂರ್ವ ಧರ್ಮಸಭೆಗಳ ಸುದ್ದಿಸಮಾಚಾರ:
ಸಿರಿಯಾದಲ್ಲಿ ಶಾಂತತೆಗಾಗಿ ಪವಿತ್ರಸಭೆಗಳು ಕರೆ ನೀಡುತ್ತವೆ
ದೇಶವು ಹಿಂಸಾಚಾರದ ಅಲೆಯಿಂದ ಬಳಲುತ್ತಿರುವಾಗ, ಸಿರಿಯಾದ ಪ್ರಮುಖ ಧರ್ಮಸಭೆಗಳಾದ ಗ್ರೀಕ್ ಆರ್ಥೊಡಾಕ್ಸ್, ಮೆಲ್ಕೈಟ್ ಮತ್ತು ಸಿರಿಯಾಕ್ ಆರ್ಥೊಡಾಕ್ಸ್‌ಗಳ ಪಿತೃಪ್ರಧಾನರು ಸಂಧಾನದ ಪರವಾಗಿ ತುರ್ತು ಮನವಿಯನ್ನು ಪ್ರಾರಂಭಿಸಿದ್ದಾರೆ. ಮಾರ್ಚ್ ತಿಂಗಳ ಆರಂಭದಲ್ಲಿ, ಕರಾವಳಿ ಪಟ್ಟಣಗಳಲ್ಲಿ ಅಲಾವೈಟ್ ಮಿಲಿಟಿಯಾಗಳು ಮತ್ತು ಮಧ್ಯಂತರ ಸರ್ಕಾರಿ ಪಡೆಗಳ ನಡುವೆ ಘರ್ಷಣೆಗಳು ನಡೆದವು. ಅಲಾವೈಟ್ ನ ನಾಗರಿಕರ ಮೇಲೆ ಪ್ರತೀಕಾರದ ದಾಳಿಗಳನ್ನು ನಡೆಸಲಾಯಿತು. ಸಿರಿಯಾದ ಮಾನವ ಹಕ್ಕುಗಳ ವೀಕ್ಷಣಾಲಯದ ಪ್ರಕಾರ, ಈ ಹತ್ಯಾಕಾಂಡಗಳಲ್ಲಿ 1,300ಕ್ಕೂ ಹೆಚ್ಚು ಅಲಾವೈಟ್ ನಾಗರಿಕರು, 270 ಹೋರಾಟಗಾರರು ಮತ್ತು ಸುಮಾರು ಹತ್ತು ಕ್ರೈಸ್ತರು ಕೊಲ್ಲಲ್ಪಟ್ಟರು ಎಂದು ಹೇಳಲಾಗಿದೆ.
ಜೆರುಸಲೇಮ್‌ನಲ್ಲಿ ತಪಸ್ಸುಕಾಲದ ಮೊದಲ ಶನಿವಾರ
ತಪಸ್ಸುಕಾಲದ ಮೊದಲ ಶನಿವಾರದಂದು, ಪವಿತ್ರ ಸಮಾಧಿಯ ಮಹಾದೇವಾಲಯವು ಧರ್ಮಸಭೆಯ ಮುಖ್ಯಸ್ಥರ ಸಾಂಭ್ರಮಿಕ ಮೆರವಣಿಗೆಯ ಸ್ಥಳವಾಗಿತ್ತು. ಜೆರುಸಲೇಮ್‌ನ ಲತೀನ್ ಪಿತಾಮಹ ಕಾರ್ಡಿನಲ್ ಪಿಯರ್‌ಬಟಿಸ್ಟಾ ಪಿಜ್ಜಾಬಲ್ಲಾರವರು ಈ ಮೆರವಣಿಗೆಯನ್ನು ಉದ್ಘಾಟಿಸಿದರು, ನಂತರ ಗ್ರೀಕ್ ಆರ್ಥೊಡಾಕ್ಸ್ ನ ಪಿತಾಮಹರಾದ ಪರಮಪೂಜ್ಯ ಮೂರನೇ ಥಿಯೋಫಿಲಸ್ ರವರು ಮತ್ತು ಪೂರ್ವ ಧರ್ಮಸಭೆಗಳ ಇತರ ಧರ್ಮಾಧ್ಯಕ್ಷರುಗಳು ಮೆರವಣಿಗೆಯನ್ನು ಉದ್ಘಾಟಿಸಿದರು. ಆ ಸಂಜೆ, ಪ್ರಾಚೀನ ದೇವಾಲಯವು, ಪವಿತ್ರ ನಾಡಿನ ಫ್ರಾನ್ಸಿಸ್ಕನ್ ಕಸ್ಟಡಿಯವರಿಂದ ದೈವಾರಾಧನಾ ಪ್ರಾರ್ಥನೆಗಳನ್ನು ಪಠಿಸಿದ ಧ್ವನಿಯಿಂದ ತುಂಬಿತ್ತು.
ಬೈರುತ್‌ನಲ್ಲಿ ಧರ್ಮಗುರು ಜೀನ್ ಡುಕ್ರೂಟ್ ರವರಿಗೆ ಗೌರವ
ಬೈರುತ್‌ನಲ್ಲಿರುವ ಸಂತ ಜೋಸೆಫ್ ರವರವ ವಿಶ್ವವಿದ್ಯಾಲಯವು ತನ್ನ 150ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿರುವುದರಿಂದ, ಲೆಬನಾನಿನ ಅಂತರ್ಯುದ್ಧದ ಸಮಯದಲ್ಲಿ ಸಂಸ್ಥೆಯ ಮೇಲ್ವಿಚಾರಕರಾಗಿದ್ದ ಧರ್ಮಗುರು ಜೀನ್ ಡುಕ್ರೂಟ್ ರವರ ಗೌರವಾರ್ಥವಾಗಿ ಮಾರ್ಚ್ 10ರ ಸೋಮವಾರ ಸಂಜೆ ಶ್ರದ್ಧಾಂಜಲಿಯ ಕಾರ್ಯಕ್ರಮವನ್ನು ನಡೆಸಲಾಯಿತು. ಅವರ ಸೇವಾಕಾರ್ಯ ಹಾಗೂ 70 ಮತ್ತು 80ರ ದಶಕಗಳಲ್ಲಿ, ಅವರ ಅಧಿಕಾರದ ಅವಧಿಯಲ್ಲಿ ವಿಶ್ವವಿದ್ಯಾನಿಲಯವು ಎದುರಿಸಿದ ಸವಾಲುಗಳನ್ನು ಮರುಪರಿಶೀಲಿಸುವ ಒಂದು ಸಂಗೀತ ಕಚೇರಿ ಮತ್ತು ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲಾಯಿತು. ಮುಂಚೂಣಿಯಲ್ಲಿರುವ ಈ ಸಂಸ್ಥೆಯು ದೇಶಾದ್ಯಂತ ಹಲವಾರು ತಾಣಗಳನ್ನು ತೆರೆಯುವ ಮೂಲಕ ನಾವೀನ್ಯತೆಯನ್ನು ಸಾಧಿಸಲು ಸಾಧ್ಯವಾಯಿತು. ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡವರಿಗೆ ಇದೊಂದು ಭರವಸೆಯ ಸಂದೇಶವಾಗಿತ್ತು ಮತ್ತು ಪ್ರಸ್ತುತವಾಗಿ ಲೆಬನಾನ್‌ನಲ್ಲಿನ ನಾಗರಿಕರು ಎದುರುಸುತ್ತಿರುವ ತೊಂದರೆಗಳೊಂದಿಗೆ ಸ್ಪಷ್ಟವಾದ ಹೋಲಿಕೆಯನ್ನು ಕಂಡುಹಿಡಿಯಲಾಯಿತು.