ಶಾಂತಿಗಾಗಿ ದಕ್ಷಿಣ ಸುಡಾನ್‌ನಲ್ಲಿ ಯುವ ಕಥೋಲಿಕರ ಪಾದಯಾತ್ರೆ
ಕೀಲ್ಸ್ ಗುಸ್ಸಿ
2023ರಲ್ಲಿ, ದಕ್ಷಿಣ ಸುಡಾನ್‌ನ ರುಂಬೆಕ್ ಧರ್ಮಕ್ಷೇತ್ರದ ಯುವ ಕಥೋಲಿಕರು, ವಿಶ್ವಗುರು ಫ್ರಾನ್ಸಿಸ್ ರವರ ದೇಶ ಭೇಟಿಗಾಗಿ ಆಗಮಿಸಿದಾಗ, ಅವರನ್ನು ಭೇಟಿ ಮಾಡುವ ಉದ್ದೇಶದಿಂದ ರಾಜಧಾನಿ ಜುಬಾವನ್ನು ತಲುಪಲು 240 ಮೈಲಿ ನಡಿಗೆಯ ತೀರ್ಥಯಾತ್ರೆಯನ್ನು ಆಯೋಜಿಸಿದರು. ಒಂದು ಬಾರಿ ಮಾತ್ರ ನಡೆದಿದ್ದ ಈ ನಡಿಗೆಯ ತೀರ್ಥಯಾತ್ರೆಯ ಕಾರ್ಯಕ್ರಮವು ಈಗ ವಾರ್ಷಿಕ ಪ್ರಯಾಣವಾಗಿದೆ.
ನಾವು ಇನ್ನೇನು ಮಾಡಬಹುದು?
ಲೊರೆಟೊ ಸಭೆಯ ಸಹೋದರಿಯರು ಐರಿಶ್ ಧಾರ್ಮಿಕ ಸಿಸ್ಟರ್. ಓರ್ಲಾ ಟ್ರೇಸಿರವರು, ವಿಶ್ವಗುರುಗಳ ಭೇಟಿಯ ಸಮಯದಲ್ಲಿ ಸುಡಾನ್‌ನ ಯುವ ಗುಂಪು ಅವರನ್ನು ನೋಡಲು ಎಷ್ಟು ಉತ್ಸುಕರಾಗಿದ್ದರು ಎಂಬುದನ್ನು ವಿವರಿಸಿದರು. ಆದರೆ, ಅವರು ಮನೆಗೆ ಹಿಂದಿರುಗಿದಾಗ, ಈ ಯುವ ಗುಂಪು "ಮುಂದೆ ಏನು? ನಾವು ಇನ್ನೇನು ಮಾಡಬಹುದು?" ಎಂದು ಅವರನ್ನು ಕೇಳುತ್ತಲೇ ಇದ್ದರು ಎಂದು ಅವರು ವಿವರಿಸಿದರು.
ಇದರ ಪ್ರತಿಕ್ರಿಯೆಯಾಗಿ, ಸಿಸ್ಟರ್ ಓರ್ಲಾರವರು ತೀರ್ಥಯಾತ್ರೆಯನ್ನು ವಾರ್ಷಿಕ ಕಾರ್ಯಕ್ರಮವಾಗಿ ಪರಿವರ್ತಿಸಲು ಸಹಾಯ ಮಾಡಿದರು, ಇದರಿಂದಾಗಿ ಸುಡಾನ್‌ನ ಯುವಜನರು "ಯುವಕರೊಂದಿಗೆ ಶಾಂತಿಯ ಬಗ್ಗೆ ಹೆಚ್ಚು ಮಾತನಾಡಲು ಮತ್ತು ಧರ್ಮಕ್ಷೇತ್ರದ ಸುತ್ತಮುತ್ತಲಿನ ಹೆಚ್ಚಿನ ಧರ್ಮಕೇಂದ್ರಗಳಿಗೆ ಭೇಟಿ ನೀಡಲು" ಸಾಧ್ಯವಾಯಿತು ಎಂದು ಹೇಳಿದರು.
ಮೋನಿಕಾ ಥಿಯೆನ್ ಬಲಿಲಾರವರು ಸಿಸ್ಟರ್ ಓರ್ಲಾರವರೊಂದಿಗೆ, ಯುವ ನಾಯಕಿಯರಲ್ಲಿ ಮತ್ತು ತೀರ್ಥಯಾತ್ರೆ ಸಂಘಟಕರಲ್ಲಿ ಒಬ್ಬರಾಗಿ ಕೆಲಸ ಮಾಡಿದರು. ಅವಳಿಗೆ, ಈ ಪ್ರಯಾಣವು ಸುಡಾನ್‌ನ ಯುವ ಗುಂಪಿಗೆ ದಕ್ಷಿಣ ಸುಡಾನ್‌ನ ವಿವಿಧ ಸ್ಥಳಗಳು, ಸಂಸ್ಕೃತಿಗಳು ಮತ್ತು ಜೀವನ ವಿಧಾನಗಳ ಬಗ್ಗೆ ಚಿಂತಿಸಲು ಸಹಾಯ ಮಾಡಿತು. ಈ ತೀರ್ಥಯಾತ್ರೆಯ ವಾರ್ಷಿಕ ಕಾರ್ಯಕ್ರಮವು, ಅವರ ಮೇಲೆ ನೇರವಾಗಿ ಪರಿಣಾಮ ಬೀರಿತು.ತಮ್ಮ ಅನುಭವಗಳನ್ನು ಹಂಚಿಕೊಳ್ಳುವಾಗ, ಇತರರು ಹೊರಗೆ ಹೋಗಿ ತಮ್ಮ ಪರಿಧಿಯನ್ನು ವಿಸ್ತರಿಸಲು ಪ್ರೋತ್ಸಾಹಿಸಲ್ಪಟ್ಟರು ಎಂದು ಅವರು ಎತ್ತಿ ತೋರಿಸಿದರು.
ಹೆಚ್ಚುತ್ತಿರುವ ಉದ್ವಿಗ್ನತೆಯ ಸಮಯದಲ್ಲಿ ಶಾಂತಿ
ಫೆಬ್ರವರಿ ಮಧ್ಯದಿಂದ, ದಕ್ಷಿಣ ಸುಡಾನ್‌ನಲ್ಲಿ ಉದ್ವಿಗ್ನತೆ ಹೆಚ್ಚಿದೆ ಮತ್ತು ದೇಶದ ಸೈನ್ಯ ಮತ್ತು ಸಶಸ್ತ್ರ ಗುಂಪಿನ ನಡುವಿನ ಹಿಂಸಾತ್ಮಕ ಘರ್ಷಣೆಗಳು ಯುವ ರಾಷ್ಟ್ರದ ಶಾಂತಿಗೆ ಧಕ್ಕೆ ತರುತ್ತವೆ. ಇದರ ಬೆಳಕಿನಲ್ಲಿ, ಈ ಕಥೋಲಿಕರ ಯುವ ಗುಂಪು ಹೆಚ್ಚಿನ ತೀರ್ಥಯಾತ್ರೆಗಳನ್ನು ಆಯೋಜಿಸಲು ಯೋಜಿಸುತ್ತಿದೆ ಏಕೆಂದರೆ, ಮೋನಿಕಾರವರು ವಿವರಿಸಿದಂತೆ, "ತೀರ್ಥಯಾತ್ರೆಯ ಮೂಲಕ, ನಾವು ವಿಭಿನ್ನ ಜನರನ್ನು, ಅವರ ಕಷ್ಟ-ನೋವುಗಳನ್ನು, ಪರಿಸ್ಥಿತಿಗಳನ್ನು ಕಾಣುತ್ತೇವೆ ಮತ್ತು ಅಲ್ಲಿಂದ ನಾವು, ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಅವರೊಂದಿಗೆ ಒಟ್ಟಿಗೆ ಇರಲು ಕಲಿಯುತ್ತೇವೆ.
ದಕ್ಷಿಣ ಸುಡಾನ್‌ನ ಇತರ ಭಾಗಗಳಿಗೆ ಪ್ರಯಾಣಿಸುವುದು ಮತ್ತು ಇತರ ಜನರನ್ನು ಭೇಟಿಯಾಗುವುದು ಎಷ್ಟು ಮುಖ್ಯ ಎಂದು ಮೋನಿಕಾರವರು ಮತ್ತು ಅವರ ಸಹ ಸಂಘಟಕರಾದ ಮಾರ್ಟಿನ್ ಮಂಡೇಲಾ ಮಂಗರ್ ರವರು ಗಮನಸೆಳೆದರು, ಏಕೆಂದರೆ ತಮ್ಮ ನೆರೆಹೊರೆಯವರನ್ನು ವಿಭಿನ್ನವಾಗಿ ಅಥವಾ "ಇತರರು" ಎಂದು ನೋಡುವುದು ಸಂಘರ್ಷಕ್ಕೆ ಕಾರಣವಾಗಬಹುದು. ಆದರೆ ಈ ತೀರ್ಥಯಾತ್ರೆಗಳು ಇದಕ್ಕೆ ಹೇಗೆ ಪರಿಹಾರವಾಗಿವೆ ಎಂಬುದನ್ನು ಇಬ್ಬರೂ ವಿವರಿಸಿದರು. ನಾವು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸ್ಥಳಾಂತರಗೊಂಡು ಪರಸ್ಪರರ ಬಗ್ಗೆ ತಿಳಿದುಕೊಂಡರೆ, ನಮಗೆ ಶಾಂತಿ ಇರುತ್ತದೆ. ನಮ್ಮ ನಡುವೆ ವ್ಯತ್ಯಾಸಗಳಿರುವುದು ಕೇವಲ ಒಂದು ವಿಷಯ, ಎಂದು ಮೋನಿಕಾರವರು ವಿವರಿಸಿದರು.
ಇತರರನ್ನು ಭೇಟಿಯಾಗುವುದು, ಅವರ ಸಂಸ್ಕೃತಿ ಸ್ವಲ್ಪ ವಿಭಿನ್ನವಾಗಿರಬಹುದು, ಆದರೆ ಕೆಲವು ಹಂತಗಳಲ್ಲಿ, ನೀವು ಒಂದೇ ಸಂಸ್ಕೃತಿಯನ್ನು ಹಂಚಿಕೊಳ್ಳುತ್ತೀರಿ ಎಂದು ನೀವು ನಿಜವಾಗಿಯೂ ಅರಿತುಕೊಳ್ಳುತ್ತೀರಿ ಎಂಬ ಅಂಶವನ್ನು ಬಹಿರಂಗಪಡಿಸಲು ಸಹಾಯ ಮಾಡುತ್ತದೆ ಎಂದು ಮಾರ್ಟಿನ್ ರವರು ಎತ್ತಿ ತೋರಿಸಿದರು.
ತೀರ್ಥಯಾತ್ರೆ ಮಾಡಲು ನಾಲ್ಕು ಸ್ತಂಭಗಳು
ಸಿಸ್ಟರ್ ಓರ್ಲಾರವರು ವಿವರಿಸಿದಂತೆ ತೀರ್ಥಯಾತ್ರೆಯು ನಾಲ್ಕು ಸ್ತಂಭಗಳನ್ನು ಹೊಂದಿದೆ. ಅವು, ಮೊದಲನೆಯದು ಯಾತ್ರಿಕರು, ಹೊಸ ಸಮುದಾಯಗಳು ಮತ್ತು ಹಳ್ಳಿಗಳಿಗೆ ನಡೆದುಕೊಂಡು ಹೋಗುವಾಗ ನಡೆಯುವುದು. ಎರಡನೆಯದು ಪ್ರಾರ್ಥನೆ ಮತ್ತು ದೇವರೊಂದಿಗಿನ ಸಂಬಂಧವನ್ನು ಆಳಗೊಳಿಸುವುದು.
ಮೂರನೆಯದು ಶಾಂತಿ ಮತ್ತು ಈ ವರ್ಷ ಯುವಕರು ಪ್ರತಿದಿನ ಅವರು ಹಾದುಹೋಗುವ ಹಳ್ಳಿಗಳಲ್ಲಿ ಮತ್ತು ಪಟ್ಟಣಗಳಲ್ಲಿ ಶಾಂತಿಗಾಗಿ ಪ್ರಾರ್ಥಿಸುತ್ತಿದ್ದರು ಎಂದು ಲೊರೆಟೊ ಸಭೆಯ ಸಹೋದರಿ ವಿವರಿಸಿದರು. ಅಂತಿಮ ಸ್ತಂಭವೆಂದರೆ ಸಮುದಾಯ, ಇದನ್ನು ಇತರ ಮೂರು ಅಂಶಗಳ ಮೂಲಕ ನಿರ್ಮಿಸಲಾಗುತ್ತದೆ. ಯುವಕರು ಸಂಬಂಧಗಳನ್ನು ಬೆಳೆಸಿಕೊಂಡಂತೆ, ಅವರು ಅಡೆತಡೆಗಳನ್ನು ಮುರಿಯುತ್ತಾರೆ.
ದೇಶದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆಯೂ ತೀರ್ಥಯಾತ್ರೆಯು ಯುವಜನರ ಮೇಲೆ ಬೀರುವ ಪರಿಣಾಮವನ್ನು ಸಿಸ್ಟರ್ ಓರ್ಲಾರವರು ಒತ್ತಿ ಹೇಳಿದರು. ನೆರೆಯ ಗುಂಪುಗಳ ಬಗ್ಗೆ ಸಾಮಾನ್ಯವಾಗಿ ಹೇಳಲಾಗುವ ಪುರಾಣಗಳನ್ನು ತೊಡೆದುಹಾಕಲು ತೀರ್ಥಯಾತ್ರೆ ಹೇಗೆ ಸಹಾಯ ಮಾಡುತ್ತದೆ ಎಂಬುದನ್ನು ಅವರು ವಿವರಿಸಿದರು. ಯುವಕರು ತಮ್ಮ ತಮ್ಮ ಮನೆಗೆ "ಧರ್ಮಕೇಂದ್ರಗಳಿಗೆ ಹಿಂತಿರುಗಿ, 'ನಾನು ಆ ಹಳ್ಳಿಯ ನಾಗರಿಕರನ್ನು ಭೇಟಿಯಾಗಿದ್ದೇನೆ ಮತ್ತು ಅವರು ನೀವು ಹೇಳುವಂತಲ್ಲ, ಅಥವಾ ನಾನು ಆ ಪಟ್ಟಣಕ್ಕೆ ಹೋಗಿದ್ದೇನೆ ಮತ್ತು ಅದು ನೀವು ನನಗೆ ಹೇಳಿದಂತೆ ಅಲ್ಲ' ಎಂದು ಅವರ ಕಿವಿಮಾತಿನ ಸುಳ್ಳುಕಥೆಗಳ ಬಗ್ಗೆ ವಾದಿಸಿ, ನಿಜಾಂಶವನ್ನು ಅರಿತುಕೊಳ್ಳಲು ಈ ತೀರ್ಥಯಾತ್ರೆಯು ಸಹಕಾರಿಯಾಗಿದೆ ಎಂದು ಹೇಳುತ್ತಾರೆ.
ಅನುಮಾನ ಮತ್ತು ಧರ್ಮಾಂಧತೆಯ ಮೇಲೆ ನಿರ್ಮಿಸಲಾದ ಗೋಡೆಗಳನ್ನು ಮುರಿಯುವ ಈ ಸರಳ ಮುಖಾಮುಖಿ ಅಥವಾ ಎದುರುಗೊಳ್ಳುವ ಅನುಭವಗಳ ಮೂಲಕವೇ ಶಾಂತಿಯ ಹಾದಿಗೆ ಕಾರಣವಾಗುವ ಉತ್ತಮ ತಿಳುವಳಿಕೆಯೊಂದಿಗೆ ಸಮುದಾಯವನ್ನು ನಿರ್ಮಿಸಬಹುದಾಗಿದೆ.