ಪ್ರೀತಿ ಮರೆಯಾಗಿ ನಡೆದಾಗ
1. ಪ್ರೀತಿ ಮೌನವಾಗಿ ನಡೆದಾಗ
ಇದಾದ ಬಳಿಕ ಯೇಸುಸ್ವಾಮಿ ಗಲಿಲೇಯದಲ್ಲಿ ಸಂಚರಿಸತೊಡಗಿದರು. ಯೆಹೂದ್ಯರು ತಮ್ಮನ್ನು ಕೊಲ್ಲಲು ಹವಣಿಸುತ್ತಿದ್ದುದರಿಂದ ಜುದೇಯದಲ್ಲಿ ಸಂಚರಿಸಲು ಅವರು ಇಷ್ಟಪಡಲಿಲ್ಲ. (v.7)
ಪ್ರಭು ಯೇಸು ಭಯದಿಂದ ನಡೆದು ಹೋಗಲಿಲ್ಲ ಬದಲಾಗಿ ದೇವರ ಸಮಯ ಮತ್ತು ಉದ್ದೇಶದ ಆಳವಾದ ಅರಿವಿನೊಂದಿಗೆ ಹೆಜ್ಜೆ ಹಾಕುತ್ತಾರೆ. ಅವರು ಮೌನವನ್ನು ಆಯ್ಕೆ ಮಾಡಿಕೊಂಡದ್ದು ಭಯದಿಂದಲ್ಲ ಬದಲಾಗಿ ಪ್ರೀತಿಯನ್ನು ಕೆಲವೊಂದು ಬಾರಿ ಮರೆ ಮಾಡುವುದು ಉತ್ತಮ ಎಂಬುದನ್ನು ಅರಿತುಕೊಂಡು ಮುನ್ನಡೆಯುತ್ತಾರೆ.
ನಾವು ಸಹ ನಮ್ಮ ಜೀವನದಲ್ಲಿ ಅನೇಕ ಬಾರಿ ದೇವರು ನಮ್ಮೊಂದಿಗೆ ಹೆಜ್ಜೆ ಹಾಕುತ್ತಿಲ್ಲ ಎಂಬಂತಹ ಅನುಮಾನವನ್ನ ವ್ಯಕ್ತಪಡಿಸುತ್ತೇವೆ. ಆದರೆ ವಿಶ್ವಾಸದ ಕಣ್ಣುಗಳಿಂದ ಪ್ರಭುವನ್ನು ಹುಡುಕಿದಾಗ ಪ್ರಭು ಯೇಸು ನಮ್ಮೊಂದಿಗೆ ಮೌನವಾಗಿ ಹೆಜ್ಜೆ ಹಾಕುತ್ತಾರೆ ಎಂಬುದು ನಿಶ್ಚಯ.
2. ಜಗದ ರಕ್ಷಕರನ್ನು ತಪ್ಪಾಗಿ ಅರ್ಥೈಸಿಕೊಂಡಾಗ
ಜೆರುಸಲೇಮಿನ ಕೆಲವು ಮಂದಿ ಇದನ್ನು ಕೇಳಿ, “ಅವರು ಕೊಲ್ಲಬೇಕೆಂದು ಹವಣಿಸುತ್ತಾ ಇರುವುದು ಈತನನ್ನೇ ಅಲ್ಲವೆ? (V.25)
ಈವರೆಗೂ ಪ್ರಭುವನ್ನು ಹಿಂಬಾಲಿಸಿ ಅವರಿಂದ ಅನೇಕ ಅದ್ಭುತಗಳನ್ನು ಪಡೆದು, ತಮ್ಮ ಜೀವನಗಳಲ್ಲಿ ಚೇತನವನ್ನು ಅನುಭವಿಸುತ್ತಿದ್ದಂತಹ ಜನ, ಪ್ರಭು ಯೇಸುವನ್ನು ಜಗದ್ ರಕ್ಷಕ ಅಥವಾ ಮೆಸ್ಸಿಯ ಎಂಬುದಾಗಿ ಅರ್ಥೈಸಿಕೊಳ್ಳಲು ಎಡವುತ್ತಾರೆ. ಅವರ ಮನಸ್ಸು ಭಯ, ಕ್ರೋಧ ಮತ್ತು ಮೂಢಸಂಪ್ರದಾಯಗಳಿಂದ ಕವಿದು ಹೋಗಿದೆ.
ನಾವು ಸಹ ಅನೇಕ ಬಾರಿ ಸತ್ಯವನ್ನ ತೆಗೆದುಕೊಳ್ಳಲು ನಿರಾಕರಿಸುತ್ತೇವೆ. ಏಕೆಂದರೆ ನಮಗೆ ಬೇಕಾದ ಹಾಗೆ ಆ ಸತ್ಯವು ಇಲ್ಲ ಎಂಬಂತಹ ಕಾರಣಕ್ಕಾಗಿ. ಆ ಪ್ರಭು ಯೇಸುವೆ ಸತ್ಯ ಸ್ವರೂಪಿಯಾಗಿ ನಮ್ಮ ಸಹೋದರ ಸಹೋದರಿಯರ ಮೂಲಕ ನಮಗೆ ಬೇಕಾದಂತಹ ಮಾರ್ಗದರ್ಶನವನ್ನು ನವ ಜೀವನವನ್ನು ನೀಡುತ್ತಿದ್ದಾರೆ. ಆ ಜನರಂತೆ ಪ್ರಭುವಿನಿಂದ ಆಶೀರ್ವಾದವನ್ನು ಪಡೆದು ಅವರನ್ನು ಅರ್ಥೈಸಿಕೊಳ್ಳಲು ಎಡವುತ್ತೇವೆಯೋ ಅಥವಾ ಅರ್ಥೈಸಿಕೊಂಡು ಅವರ ಹೆಜ್ಜೆಗಳಲ್ಲಿ ಹೆಜ್ಜೆ ಹಾಕುತ್ತೇವೆಯೋ ?
3. ದೇವರ ಪವಿತ್ರ ಗಳಿಗೆಯಲ್ಲಿ ಭರವಸೆ ಇಟ್ಟಾಗ
ಯೆಹೂದ್ಯರು ಯೇಸುವನ್ನು ಹಿಡಿದು ಬಂಧಿಸಲು ಪ್ರಯತ್ನಿಸಿದರು. ಆದರೆ ಅವರ ಗಳಿಗೆ ಇನ್ನೂ ಬಾರದೆ ಇದ್ದ ಕಾರಣ ಯಾರೂ ಅವರ ಮೇಲೆ ಕೈಹಾಕಲಿಲ್ಲ. (v.30)
ದೇವರ ಗಳಿಗೆ ಪ್ರಭು ಯೇಸುವಿನ ಜೊತೆಗೆ ಚಲಿಸುತ್ತಿತ್ತೋ ಅದೇ ರೀತಿ ನಮ್ಮ ಜೊತೆಗೂ ಚಲಿಸುತ್ತಿದೆ. ಅದಕ್ಕೆ ಮುಂಚೆ ಅಥವಾ ನಂತರ ಏನು ನಡೆಯಲು ಸಾಧ್ಯವಿಲ್ಲ. ಪ್ರಭು ಯೇಸುವಿಗೆ ಆ ಶಿಲುಬೆಯು ಕಾಯುತ್ತಿತ್ತು ಆದರೆ ದೇವರ ಉದ್ದೇಶ ನೆರವೇರಿದಾಗ ಮಾತ್ರ ಪ್ರಭು ಆ ಶಿಲುಬೆಯನ್ನು ಹೊರುತ್ತಾರೆ. ಈ ತಪಸ್ಸು ಕಾಲವು ನಮ್ಮ ಆಸೆ ಮತ್ತು ಆಕಾಂಕ್ಷೆ ಎಲ್ಲವುಗಳನ್ನ ಆ ದೇವರ ಸಮಯಕ್ಕೆ ಸಮರ್ಪಿಸಿ, ಆ ದೇವರ ಸಮಯಕ್ಕಾಗಿ ಹಾತೊರೆಯಲು ಕರೆ ನೀಡುತ್ತಿದೆ.
ಈ ಪ್ರಾರ್ಥನೆ ಇಂದು ನಮ್ಮದಾಗಲಿ: ಪ್ರಭುವೇ ನೀವು ಮರೆಯಾಗಿ ನಡೆಯುವಾಗ ನಮ್ಮ ವಿಶ್ವಾಸದ ಕಣ್ಣುಗಳು ನಿಮ್ಮನ್ನು ಗ್ರಹಿಸಿಕೊಳ್ಳುವಂತೆ ಶಕ್ತಿ ನೀಡಿರಿ. ಅತಿ ಮುಖ್ಯವಾಗಿ ಈ ಸಮಾಜದಲ್ಲಿ ನಿಮ್ಮಂತೆ ತಪ್ಪಾಗಿ ಗ್ರಹಿಸಿಕೊಂಡವರ, ತಿರಸ್ಕೃತರಾದವರ ಹಾಗೂ ಮೌನದಿಂದಿರುವವರ ಅಳಲನ್ನು ಅರ್ಥೈಸಿಕೊಂಡು ಅವರೊಂದಿಗೆ ನಿಲ್ಲುವಂತಹ ಶಕ್ತಿಯನ್ನು ನೀಡಿರಿ. ನಿಮ್ಮ ಗಳಿಗೆಯನ್ನು ಅರಿತುಕೊಳ್ಳಲಾಗದಿರುವಾಗ ನಿಮ್ಮ ಕೃಪೆಯನ್ನು ನೀಡಿರಿ. ಈ ಕೃಪೆಯ ಮೂಲಕ ನೀವು ನಮ್ಮೊಂದಿಗೆ ಸದಾ ಇರುವಿರೆಂದು, ಪ್ರೀತಿಸುವಿರೆಂದು ಹಾಗೂ ಸರಿಯಾದ ಸಮಯಕ್ಕೆ ಎಲ್ಲವನ್ನು ನೀಡುವಿರೆಂದು ವಿಶ್ವಾಸಿಸುವಂತಹ ಕೃಪೆಯನ್ನು ನಮ್ಮದಾಗಿಸಿರಿ. ಆಮೆನ್
ಫಾ|| ಮರಿಯ ಅಂತೋಣಿ