'ರಾಷ್ಟ್ರವು ಅಪಾಯದ ಅಂಚಿನಲ್ಲಿದೆ' ಎಂದು ಉಗಾಂಡಾದ ಧರ್ಮಾಧ್ಯಕ್ಷರುಗಳು ಎಚ್ಚರಿಸಿದ್ದಾರೆ
ಲಿಂಡಾ ಬೋರ್ಡೋನಿ
ಉಗಾಂಡಾದ ಕಥೊಲಿಕ ಧರ್ಮಾಧ್ಯಕ್ಷರುಗಳು ಬೆಳೆಯುತ್ತಿರುವ ರಾಜಕೀಯ ಮತ್ತು ಸಾಮಾಜಿಕ ಅಸ್ಥಿರತೆಯನ್ನು ಎದುರಿಸಲು ರಾಷ್ಟ್ರಕ್ಕೆ ಮನವಿ ಮಾಡಿದ್ದಾರೆ. ದೇಶವು "ಅಪಾಯದ ಅಂಚಿನಲ್ಲಿದೆ" ಎಂದು ಎಚ್ಚರಿಸಿದ್ದಾರೆ ಮತ್ತು ನ್ಯಾಯ, ಸಂವಾದ ಮತ್ತು ನೈತಿಕ ಸಮಗ್ರತೆಯ ಮೌಲ್ಯಗಳಿಗೆ ಮರಳುವಂತೆ ಒತ್ತಾಯಿಸಿದ್ದಾರೆ.
ಜೂನ್ 3 ರಂದು ಉಗಾಂಡಾದ ರಕ್ತಸಾಕ್ಷಿಗಳ ದಿನಕ್ಕೆ ಮುಂಚಿತವಾಗಿ ಬಿಡುಗಡೆಯಾದ "ಸತ್ಯವು ನಿಮ್ಮನ್ನು ಮುಕ್ತಗೊಳಿಸುತ್ತದೆ" ಎಂಬ ಶೀರ್ಷಿಕೆಯ 15 ಪುಟಗಳ ಪಾಲನಾ ಪತ್ರದಲ್ಲಿ, ಧರ್ಮಾಧ್ಯಕ್ಷರುಗಳು "ನಮ್ಮ ಕಾಲದ ನೋವಿನ ವಾಸ್ತವಗಳು" ಎಂದು ವಿವರಿಸುವ ಹೆಚ್ಚುತ್ತಿರುವ ಚಿತ್ರಹಿಂಸೆ, ಭ್ರಷ್ಟಾಚಾರ, ಅಧಿಕಾರದ ದುರುಪಯೋಗ ಮತ್ತು ಹೆಚ್ಚುತ್ತಿರುವ ಅಸಮಾನತೆಯ ಬಗ್ಗೆ ಆಳವಾದ ಕಳವಳವನ್ನು ವ್ಯಕ್ತಪಡಿಸಿದ್ದಾರೆ.
ಬುಡಕಟ್ಟು ಜನಾಂಗ, ಹೆಚ್ಚುತ್ತಿರುವ ಬಡತನ, ಯುವಜನರ ನಿರುದ್ಯೋಗ ಮತ್ತು ಸಾರ್ವಜನಿಕ ಸಂಸ್ಥೆಗಳಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆಯ ಕೊರತೆ ಸೇರಿದಂತೆ ರಾಷ್ಟ್ರೀಯ ಸ್ಥಿರತೆಗೆ ವಿವಿಧ ಬೆದರಿಕೆಗಳನ್ನು ಪತ್ರವು ಗುರುತಿಸುತ್ತದೆ.
ರಾಜಕೀಯ ನಾಯಕರು ಯಾವುದೇ ಬೆಲೆ ತೆತ್ತಾದರೂ ಅಥವಾ ದಂಧೆಗಳ ಮೂಲಕ ಅಧಿಕಾರವನ್ನು ಪಡೆಯುವ ಪ್ರಲೋಭನೆಯನ್ನು ವಿರೋಧಿಸಿ, ಬದಲಿಗೆ ಸಾಮಾನ್ಯ ಒಳಿತಿಗಾಗಿ ಸೇವೆ ಸಲ್ಲಿಸುವತ್ತ ಗಮನಹರಿಸಬೇಕೆಂದು ಇದು ಒತ್ತಾಯಿಸುತ್ತದೆ.
"ಅನ್ಯಾಯವು ಎಲ್ಲೆಡೆ ನ್ಯಾಯಕ್ಕೆ ಬೆದರಿಕೆಯಾಗಿದೆ" ಎಂದು ಧರ್ಮಾಧ್ಯಕ್ಷರುಗಳು ಕಿರಿಯ ಮಾರ್ಟಿನ್ ಲೂಥರ್ ಕಿಂಗ್ ರವರ ಮಾತುಗಳನ್ನು ಉಲ್ಲೇಖಿಸುತ್ತಾ ಬರೆಯುತ್ತಾರೆ. ಅಧಿಕಾರದ ದುರುಪಯೋಗ, ಧರ್ಮಸಭೆಯ ಮೌನ ಮತ್ತು ನಾಗರಿಕರ ಆತ್ಮತೃಪ್ತಿ ಇವೆಲ್ಲವೂ ನಮ್ಮ ನೈತಿಕ ಮತ್ತು ಸಾಮಾಜಿಕ ರಚನೆಯ ಕ್ಷೀಣತೆಗೆ ಕಾರಣವಾಗಿವೆ.
ಹಿಂಸೆ ಮತ್ತು ಚಿತ್ರಹಿಂಸೆಯ ಖಂಡನೆ
2026ರ ಸಾರ್ವತ್ರಿಕ ಚುನಾವಣೆಗೆ ಮುನ್ನ ನಡೆಯಲಿರುವ ರಾಜಕೀಯ ಸ್ಪರ್ಧೆಯ ಸಂದರ್ಭದಲ್ಲಿ, ಹೆಚ್ಚುತ್ತಿರುವ ಹಿಂಸಾಚಾರ ಮತ್ತು ಚಿತ್ರಹಿಂಸೆಯ ಕೃತ್ಯಗಳ ಬಗ್ಗೆಯೂ ಪತ್ರವು ಎಚ್ಚರಿಕೆ ನೀಡಿದೆ. ಕಂಪಾಲದ ಮಹಾಧರ್ಮಾಧ್ಯಕ್ಷರಾದ ಪಾಲ್ ಸ್ಸೆಮೊಗೆರೆರೆರವರು ರಾಜಕೀಯ ಕ್ಷೇತ್ರದಲ್ಲಿ ಈಗಾಗಲೇ ಹೊರಹೊಮ್ಮುತ್ತಿರುವ "ಕ್ರೂರತೆ ಮತ್ತು ಕೆಸರೆರಚಾಟ" ಎಂದು ವಿವರಿಸಿದ್ದನ್ನು ಖಂಡಿಸಿದರು.
ಕಸನ-ಲುವೀರೋ ಧರ್ಮಕ್ಷೇತ್ರದ 28ನೇ ವಾರ್ಷಿಕೋತ್ಸವದಲ್ಲಿ ಮಾತನಾಡಿದ ಅವರು, “ಇತ್ತೀಚೆಗೆ ಕವೆಂಪೆ ಉತ್ತರದಲ್ಲಿ ನಾಮನಿರ್ದೇಶನಗಳ ಸಮಯದಲ್ಲಿ ಏನಾಯಿತು ಎಂಬುದು ಕೇವಲ ರಾಜಕೀಯ ದುರ್ಘಟನೆಯಲ್ಲ, ಇದು ಎಚ್ಚರಿಕೆಯ ಸಂಕೇತವಾಗಿದೆ. ನಿರಂತರವಾಗಿ ನಡೆಯುತ್ತಿರುವ ಚಿತ್ರಹಿಂಸೆ, ಬೆದರಿಕೆ ಮತ್ತು ನಿಂದನೆಯನ್ನು ನಾವು ಕಣ್ಮುಚ್ಚಿ ನೋಡಲು, ಅಂದರೆ ಘೋರ ಕೃತ್ಯಗಳನ್ನು ನೋಡಿಕೊಂಡೆ ಸುಮ್ಮನಿರಲು ಸಾಧ್ಯವಿಲ್ಲ. "ಈ ಭೂಮಿಯಲ್ಲಿ ಚೆಲ್ಲಲ್ಪಟ್ಟ ರಕ್ತವನ್ನು ನಾವು ಮರೆಯಬಾರದು. ಹಿಂಸಾಚಾರ ಮತ್ತೆ ಬೇರೂರಲು ಬಿಡಬಾರದು."
ಧರ್ಮಸಭೆಯ ಪಾತ್ರ ಮತ್ತು ನೈತಿಕ ಜವಾಬ್ದಾರಿ
ಧರ್ಮಸಭೆಯು ಪಕ್ಷಾತೀತವಾಗಿದ್ದರೂ, ಅನ್ಯಾಯದ ಎದುರು ಮೌನವಾಗಿರಲು ಸಾಧ್ಯವಿಲ್ಲ ಎಂದು ಧರ್ಮಾಧ್ಯಕ್ಷರಾದ ಝಿವಾರವರು ಒತ್ತಿ ಹೇಳಿದರು. ಮಾನವ ಜೀವನದ ಎಲ್ಲಾ ಕ್ಷೇತ್ರಗಳಲ್ಲಿ ನೈತಿಕ ತೀರ್ಪು ನೀಡುವುದು ಧರ್ಮಸಭೆಯ ಧ್ಯೇಯವಾಗಿದೆ" ಎಂದು ಅವರು ಹೇಳಿದರು, "ಸಾಮಾನ್ಯ ಒಳಿತನ್ನು ಬಯಸುವ ರಾಜಕೀಯ" ಕ್ಕಾಗಿ ವಿಶ್ವಗುರು ಫ್ರಾನ್ಸಿಸ್ ರವರ ಕರೆಯನ್ನು ಉಲ್ಲೇಖಿಸಿದರು.
ಯೋವಾನ್ನನ ಶುಭಸಂದೇಶದಿಂದ ಸ್ಫೂರ್ತಿ ಪಡೆದು, ಪತ್ರವು "ಸತ್ಯವು ನಿಮ್ಮನ್ನು ಮುಕ್ತಗೊಳಿಸುತ್ತದೆ" ಎಂದು ಒತ್ತಾಯಿಸುತ್ತದೆ. ರಾಜಕೀಯ ಸಂಬಂಧವನ್ನು ಲೆಕ್ಕಿಸದೆ ಉಗಾಂಡಾದ ಎಲ್ಲಾ ನಾಗರಿಕರಿಗೆ ಸತ್ಯ, ಸಮಗ್ರತೆ ಮತ್ತು ರಾಷ್ಟ್ರೀಯ ಸಂವಾದವನ್ನು ಅಳವಡಿಸಿಕೊಳ್ಳಲು ಧರ್ಮಾಧ್ಯಕ್ಷರುಗಳು ಕರೆ ನೀಡುತ್ತಾರೆ.
"ನಾವು ಭಯ ಮತ್ತು ಕುಶಲತೆಯ ರಾಜಕೀಯವನ್ನು ತಪ್ಪಿಸಬೇಕು" ಎಂದು ಪಾಲನಾ ಪತ್ರವು ಮುಕ್ತಾಯಗೊಳಿಸುತ್ತದೆ. "ಉಗಾಂಡ ನಮ್ಮೆಲ್ಲರಿಗೂ ಸೇರಿದ್ದು” ಈ ರಾಷ್ಟ್ರದ ಭವಿಷ್ಯವು ಇಂದು ನಾವು ಮಾಡುವ ಆಯ್ಕೆಗಳ ಮೇಲೆ ಅವಲಂಬಿತವಾಗಿದೆ.