ಹೈಟಿಯಲ್ಲಿ ಕನ್ಯಾಸ್ತ್ರೀಯರ ಸೇವೆ ಹೈಟಿಯಲ್ಲಿ ಕನ್ಯಾಸ್ತ್ರೀಯರ ಸೇವೆ  (ANSA)

ಹೈಟಿ ದೇಶದಲ್ಲಿ ಕಡು ಬಡ ಮಕ್ಕಳ ಆರೈಕೆಯನ್ನು ಮಾಡಿಕೊಂಡಿರುವ ಭಗಿನಿ ಸಿಸ್ಟರ್ ಪಯೆಸಿ ಅವರಿಗೆ ಕರೆ ಮಾಡಿದ ಪೋಪ್ ಫ್ರಾನ್ಸಿಸ್

1999 ರಿಂದ ಹೈಟಿ ದೇಶದಲ್ಲಿದ್ದುಕೊಂಡು ಅಲ್ಲಿನ ಅತ್ಯಂತ ಕಡು ಬಡ 2500 ಕ್ಕೂ ಹೆಚ್ಚು ಮಕ್ಕಳ ಆರೈಕೆಯಲ್ಲಿ ತೊಡಗಿಸಿಕೊಂಡಿರುವ ಫ್ರಾನ್ಸ್ ದೇಶದ ಭಗಿನಿ ಸಿಸ್ಟರ್ ಪಯೇಸಿ ಅವರಿಗೆ ಪೋಪ್ ಫ್ರಾನ್ಸಿಸರು ಕರೆ ಮಾಡಿ, ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ.

ವರದಿ: ಜಿಯಾನ್ ಚಾರ್ಲ್ಸ್ ಪುಟ್ಝೋಲು, ಅಜಯ್ ಕುಮಾರ್

ಶನಿವಾರ ಮಧ್ಯಾಹ್ನ ಪೋಪ್ ಫ್ರಾನ್ಸಿಸರು ಹೈಟಿ ದೇಶದ ಪೋರ್ಟ್-ಔ-ಪ್ರಿನ್ಸ್ ಎಂಬ ಪ್ರದೇಶದಲ್ಲಿ 1999 ರಿಂದ ಬಡ ಮಕ್ಕಳ ಆರೈಕೆಯಲ್ಲಿ ತೊಡಗಿಕೊಂಡಿರುವ ಫ್ರೆಂಚ್ ಭಗಿನಿ ಸಿಸ್ಟರ್ ಪಯೇಸಿ ಅವರಿಗೆ ಕರೆ ಮಾಡಿ, ಅವರ ಯೋಗಕ್ಷೇಮವನ್ನು ವಿಚಾರಿಸಿಕೊಂಡರು ಮಾತ್ರವಲ್ಲದೆ, ಅವರು ಮಾಡುತ್ತಿರುವ ಕಾರ್ಯಕ್ಕೆ ತಮ್ಮ ಬೆಂಬಲವನ್ನು ಸೂಚಿಸಿದರು. ಜನನಿಭಿಡ ಪ್ರದೇಶದಲ್ಲಿ ಕಡು ಬಡತನದಲ್ಲಿ ಜೀವಿಸುತ್ತಿರುವ ಮಕ್ಕಳಿಗೆ ಅನ್ನ, ನೀರು, ಆಶ್ರಯವನ್ನು ನೀಡುತ್ತಿರುವ ಸಿಸ್ಟರ್ ಪಯೇಸಿ, ಈ ಮಕ್ಕಳ ಸೇವೆಯನ್ನು ಜತನದಿಂದ ಮಾಡುತ್ತಿದ್ದಾರೆ.

ಸಿಸ್ಟರ್ ಪಯೇಸಿ ಆ ಪ್ರದೇಶದಲ್ಲಿ ಕಿಝಿಟು ಫ್ಯಾಮಿಲಿ ಎಂಬ ಸ್ಥಳಿಯ ಕನ್ಯಾಸ್ತ್ರೀಯರ ಸಮುದಾಯವೊಂದನ್ನು ಸ್ಥಾಪಿಸಿದ್ದು, ಈ ಸಮುದಾಯವು ಅಲ್ಲಿನ ಸುಮಾರು 2500 ಮಕ್ಕಳಿಗೆ ನೆರವಾಗಿ, ಸೇವೆ ಸಲ್ಲಿಸುತ್ತಿದೆ.

ಈ ಕುರಿತು ವ್ಯಾಟಿಕನ್ ನ್ಯೂಸ್ ತಂಡವು ಸಿಸ್ಟರ್ ಪಯೇಸಿ ಅವರನ್ನು ಫೋನ್ ಮೂಲಕ ಸಂದರ್ಶಿಸಿದ್ದು, ಅಲ್ಲಿನ ಸ್ಥಿತಿಗತಿಗಳ ಬಗ್ಗೆ ಹಾಗೂ ಪೋಪ್ ಫ್ರಾನ್ಸಿಸ್ ಅವರ ಕರೆಯ ಕುರಿತು ಪ್ರಶ್ನೆಗಳನ್ನು ಕೇಳಿದೆ:

ಸಿಸ್ಟರ್ ಪಯೇಸಿ, ಪೋಪ್ ಫ್ತಾನ್ಸಿಸ್ ಅವರ ಕರೆಯನ್ನು ನೀವು ಯಾವ ರೀತಿಯಲ್ಲಿ ನೋಡುತ್ತೀರಿ?

ನನಗೆ ಅದೊಂದು ಆಶ್ಚರ್ಯವಾಗಿದೆ. ನಾನು ಪವಿತ್ರ ತಂದೆ ಪೋಪ್ ಫ್ರಾನ್ಸಿಸ್ ಅವರು ಕರೆ ಮಾಡುತ್ತಾರೆ ಎಂದು ನೀರೀಕ್ಷಿಸಿರಲಿಲ್ಲ. ಅವರು ನನಗೆ ಪ್ರೋತ್ಸಾಹದಾಯಕ ಸಂದೇಶವನ್ನು ಕಳುಹಿಸಿ, ಮಕ್ಕಳಿಗಾಗಿ ನಾನು ಮಾಡುತ್ತಿರುವ ಸೇವೆಗೆ ಧನ್ಯವಾದಗಳನ್ನು ತಿಳಿಸಿದರು. ಅವರು ನನಗಾಗಿ ಪ್ರಾರ್ಥನೆ ಮಾಡುವ ಭರವಸೆಯನ್ನು ನೀಡಿದರು. ಅದು ನಿಜಕ್ಕೂ ನನಗೆ ಹೃದಯಸ್ಪರ್ಶಿ ಎನಿಸಿದೆ. ನಿಜವಾಗಿಯೂ ನಾನು ಆ ಫೋನ್ ಕರೆಯಲ್ಲಿ ಬಹಳ ಇಷ್ಟ ಪಟ್ಟಿದ್ದು ಪೋಪ್ ಫ್ರಾನ್ಸಿಸ್ ಅವರ ಧ್ವನಿ. ಅವರ ಧ್ವನಿ ಬಹಳ ಮೃದು ಹಾಗೂ ಪ್ರೀತಿಯಿಂದ ಕೂಡಿತ್ತು.

ಪ್ರತಿ ದಿನ ನೀವು ಹಿಂಸಾಚಾರಗಳಿಂದ ನಲುಗುತ್ತಿರುವ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತೀರಿ. ಹೀಗೆ ಅತ್ಯಂತ ಕಡು ಬಡವ ಮಕ್ಕಳ ಸೇವೆಯನ್ನು ಮಾಡುವಾಗ, ನಿಮ್ಮ ದೈನಂದಿನ ಚಟುವಟಿಕೆಗಳು ಯಾವ ರೀತಿಯಲ್ಲಿರುತ್ತದೆ?

ಹಲವು ವರ್ಷಗಳಿಂದ ದುಡಿಯುವ ವರ್ಗದ ಪ್ರದೇಶದಲ್ಲಿ ಶಸ್ತ್ರ ಸಜ್ಜಿತ ಗುಂಪುಗಳಿಂದ ಹಿಂಸಾಚಾರ ನಡೆಯುತ್ತಲೇ ಇದೆ. ಇಲ್ಲಿನ ಗ್ಯಾಂಗ್ಗಳು ಅತ್ಯಂತ ಶಕ್ತಿಶಾಲಿಯಾಗಿದ್ದು, ಕೇವಲ ದುಡಿಯುವ ವರ್ಗಗಳಿರುವ ಪ್ರದೇಶಗಳಿಗೆ ಮಾತ್ರ ಸೀಮಿತವಾಗಿಲ್ಲ. ಎಲ್ಲಿ ಯಾರನ್ನೂ ಬೇಕಾದರೂ ಅವರು ಗುರಿ ಮಾಡಿ ಹಿಂಸಾಚಾರ ನಡೆಸುತ್ತಾರೆ.

ಕಳೆದ ತಿಂಗಳು ಆರು ಭಗಿನಿಯರನ್ನು ಅಪಹರಿಸಿದ ಘಟನೆ ನಡೆದಿದೆ. ಆ ಘಟನೆಯ ನಂತರ ನಿಮಗೆ ಭಯವಾಗುತ್ತಿಲ್ಲವೇ? ಧರ್ಮಸಭೆ ಅತ್ಯಂತ ಶೋಷಿತ ಹಾಗೂ ಬಡವರ ಪರವಾಗಿ ನಿಂತಿರಬೇಕಾದರೆ ಏಕೆ ಈ ಗ್ಯಾಂಗ್ಗಳು ಧಾರ್ಮಿಕ ಭಗಿನಿಯರನ್ನು ಹಾಗೂ ಗುರುಗಳನ್ನು ಅಪಹರಣ ಮಾಡುತ್ತಿದೆ?

ಪೋರ್ಟ್-ಔ-ಪ್ರಿನ್ಸ್ ನಗರದಲ್ಲಿ ನಡೆಯುವ ಅಪಹರಣಗಳು ಸಮಾಜದ ಎಲ್ಲಾ ವರ್ಗದವರ ಮೇಲೆ ಪ್ರಬಾವ ಬೀರುತ್ತದೆ. ಸಾಮಾನ್ಯವಾಗಿ ಶ್ರೀಮಂತರನ್ನು ಅಪಹರಣ ಮಾಡಿ, ಹಣಕ್ಕೆ ಬೇಡಿಕೆ ಇಡುತ್ತಾರೆ. ಒಮ್ಮೊಮ್ಮೆ ದುಡ್ಡಿಲ್ಲದ ಸಾಮಾನ್ಯ ಜನರನ್ನೂ ಸಹ ಅಪಹರಣ ಮಾಡುತ್ತಾರೆ. ಇನ್ನೂ ಭಗಿನಿಯರನ್ನು ಅಪಹರಣ ಮಾಡಿ ಘಟನೆಯ ಉದ್ದೇಶ ನನಗೆ ಗೊತ್ತಿಲ್ಲ. ಆ ಘಟನೆಯಿಂದ ಧರ್ಮಸಭೆಯನ್ನು ಗುರಿಯಾಗಿಸಲಾಗುತ್ತಿದೆ ಎನ್ನುವುದು ಕಷ್ಟವಾಗುತ್ತದೆ.

ವಿಶ್ವ ಸಂಸ್ಥೆಯ ಅಂಕಿ-ಅಂಶಗಳ ಪ್ರಕಾರ ಈ ಹಿಂಸಾಚಾರವು ಸುಮಾರು 300,00,00 ಜನರನ್ನು ಒಕ್ಕಲೆಬ್ಬಿಸಿದೆ. ನಮಗೆ ಗೊತ್ತು; ಬಹುತೇಕ ಈ ಜನರೆಲ್ಲಾ ಅತ್ಯಂತ ಶೋಚನೀಯ ಪರಿಸ್ಥಿತಿಯಲ್ಲಿ ಸ್ಲಮ್ಮುಗಳಲ್ಲಿ ಬದುಕುತ್ತಿದ್ದಾರೆ. ಒಕ್ಕಲೆದ್ದ ಕುಟುಂಬಗಳು ಎಲ್ಲಿ ಆಶ್ರಯವನ್ನು ಕಂಡುಕೊಳ್ಳುತ್ತವೆ?

ಇದು ಬಹಳ ಮುಖ್ಯವಾದ ಪ್ರಶ್ನೆ! ಏಕೆಂದರೆ ಎಲ್ಲಿಯೂ ಈ ಜನರಿಗೆ ಬದುಕಲು ಬೇಕಾದ ಸ್ಥಳಾವಕಾಶವಾಗಲಿ ಅಥವಾ ಸಂಪನ್ಮೂಲಗಳಾಗಲಿ ಇಲ್ಲ. ಒಮ್ಮೆ ದಾಳಿಯಾದರೆ ಜನ ಅಲ್ಲಿರುವುದಿಲ್ಲ. ಅಲ್ಲಿ ಸುರಕ್ಷಿತವಲ್ಲ ಎಂಬ ಭಾವನೆ ಅವರಿಗೆ ಮೂಡುತ್ತದೆ. ಸಂಬಂಧಿಕರ ಮನೆಗೆ ಹೋಗುತ್ತಾರೆ. ಆದರೆ ಕೆಲವು ದಿನದ ನಂತರ ಅಲ್ಲಿರುವುದೇ ದುಸ್ತರವಾಗುತ್ತದೆ.

ನೀವು ಈ ಮಕ್ಕಳನ್ನು ಆರೈಕೆ ಮಾಡುತ್ತಿದ್ದೀರಿ. ನಿಮ್ಮ ಸಹಾಯವಿಲ್ಲದೆ; ಧರ್ಮಸಭೆಯ ನೆರವು ಇಲ್ಲವೆಂದರೆ ಈ ಮಕ್ಕಳ ಸ್ಥಿತಿ ಏನಾಗಬಹುದು?

ಅಂತಹ ಪರಿಸ್ಥಿತಿಯಲ್ಲಿ ಅವರು ಬಡತನದಲ್ಲೇ ಜೀವಿಸುತ್ತಾ ತಮ್ಮ ಆಹಾರವನ್ನು ತಾವೇ ಹುಡುಕಿಕೊಳ್ಳಬೇಕಾಗುತ್ತದೆ. ದೇವರಿಗೇ ಗೊತ್ತು ಅವರ ಭವಿಷ್ಯ ಏನಾಗುತ್ತದೋ? ಅವರು ಪದೇ ಪದೇ ಹೇಳುತ್ತಾರೆ, ಸಿಸ್ಟರ್ ನೀವಿಲ್ಲದೆ ಇರುತ್ತಿದ್ದರೆ ನಾವು ಸತ್ತು ಹೋಗುತ್ತೇವೆ ಎಂದು. ಕೆಲವೊಮ್ಮೆ ನನಗೆ ಅನಿಸುತ್ತದೆ, ಹೇಗೆ ಇವರು ಊಟವೇ ಇಲ್ಲದೇ ಅನೇಕ ದಿನಗಳನ್ನು ಕಳೆಯುತ್ತಾರೆಂದು. ಇದೆಲ್ಲದಕ್ಕೂ ಉತ್ತರ ದೇವರಿದ್ದಾರೆ. ಅವರು ನನ್ನ ಮೂಲಕವೋ ಇನ್ಯಾರ ಮೂಲಕವೋ ತಮ್ಮ ಕಾರ್ಯವನ್ನು ಸಾ‌‌ಧಿಸಬಹುದು. ಅವರೆಂದಿಗೂ ಅವರ ಮಕ್ಕಳನ್ನು ಕೈ ಬಿಡುವುದಿಲ್ಲ.


 

05 February 2024, 16:14