ಹುಡುಕಿ

 ಸಾಂಧರ್ಭಿಕ ಚಿತ್ರ ಸಾಂಧರ್ಭಿಕ ಚಿತ್ರ 

ಪೋಪ್ ಫ್ರಾನ್ಸಿಸ್: ತಪಸ್ಸು ಕಾಲವು ಪರಿವರ್ತನೆಯ ಹಾಗೂ ಸ್ವಾತಂತ್ರ್ಯದ ಕಾಲವಾಗಿದೆ

ಈ ವರ್ಷದ ತಪಸ್ಸುಕಾಲಕ್ಕೆ ನೀಡಿದ ತಮ್ಮ ಸಂದೇಶದಲ್ಲಿ ಪೋಪ್ ಫ್ರಾನ್ಸಿಸ್ ಅವರು ನಮ್ಮ ಜೀವನವನ್ನು ಹಾಗೂ ನಮ್ಮ ಸಮುದಾಯಗಳನ್ನು ಪರಿವರ್ತಿಸಲು, ನಾವೆಲ್ಲರೂ ಒಂದು ಕ್ಷಣ ಆಲೋಚಿಸಿ, ಅವಶ್ಯಕತೆಯಲ್ಲಿರುವ ನಮ್ಮ ಸಹೋದರ ಸಹೋದರಿಯರಿಗಾಗಿ ಪ್ರಾರ್ಥಿಸಿ, ನೆರವಾಗಬೇಕು ಎಂದು ಹೇಳುತ್ತಾರೆ.

ವರದಿ: ಕ್ರಿಸ್ಟೋಫರ್ ವೆಲ್ಸ್, ಅಜಯ್ ಕುಮಾರ್

“ದೇವರು ತಮ್ಮನ್ನು ಪ್ರಕಟಿಸಿ ತೋರ್ಪಡಿಸುವಾಗ ಅವರು ನೀಡುವ ಸಂದೇಶ ಎಂದಿಗೂ ಪ್ರೀತಿ ಹಾಗೂ ಸ್ವಾತಂತ್ರ್ಯದ ಸಂದೇಶವಾಗಿರುತ್ತದೆ.” ಈ ವರ್ಷದ ತಮ್ಮ ತಪಸ್ಸುಕಾಲದ ಸಂದೇಶದಲ್ಲಿ ಪೋಪ್ ಫ್ರಾನ್ಸಿಸ್ ಈ ರೀತಿಯಾಗಿ ಹೇಳುತ್ತಾರೆ.

ಹೀಬ್ರೂ ಜನಾಂಗದವರು ಈಜಿಪ್ಟಿನಿಂದ ವಿಮೋಚನೆ ಹೊಂದಿ ತಮ್ಮ ತಾಯ್ನಾಡಿಗೆ ಮರಳುವ ಘಟನೆಯನ್ನು ಉಲ್ಲೇಖಿಸುತ್ತಾ ಪೋಪ್ ಫ್ರಾನ್ಸಿಸ್ ನಮ್ಮ ಮರುಭೂಮಿಯ ಪಯಣವೂ ಸಹ ಕೃಪಾಶೀರ್ವಾದದ ಸಮಯವಾಗಬಹುದು ಎಂದು ಅಭಿಪ್ರಾಯ ಪಡುತ್ತಾರೆ – ಇದು ಕೇವಲ ಯಾವುದೋ ಒಂದು ಪಯಣವಾಗದೆ ಜಗತ್ತನ್ನು ಅದು ಇರುವ ರೀತಿಯಲ್ಲಿ ನೋಡುವ ಹಾಗೂ ಜಗತ್ತಿನಲ್ಲಿನ ನಮ್ಮ ಶೋಷಿತ ಸಹೋದರ ಸಹೋದರಿಯರ ನೋವನ್ನು ಆಲಿಸುವ ಪಯಣವಾಗಿದೆ ಎನ್ನುತ್ತಾರೆ ಪೋಪ್ ಫ್ರಾನ್ಸಿಸ್.

ಪ್ರತ್ಯೇಕತೆಯ ಜಾಗತೀಕರಣವನ್ನು ಹಿಮ್ಮೆಟ್ಟಿಸುವುದು

ಇದೇ ವೇಳೆ ಪೋಪ್ ಫ್ರಾನ್ಸಿಸ್ “ಪ್ರತ್ಯೇಕತೆಯ ಜಾಗತೀಕರಣವನ್ನು ಹಿಮ್ಮೆಟ್ಟಿಸುವುದರ” ಕುರಿತು ಬೆಳಕು ಚೆಲ್ಲಿದರು.

ಇಂದಿಗೂ ಸಹ ನಾವು ಫರೋಹನ ಆಡಳಿತದಲ್ಲಿದ್ದೇವೆ ಎಂಬುದನ್ನು ನಾವು ಅರಿತುಕೊಂಡರೆ ನಮ್ಮ ತಪಸ್ಸುಕಾಲದ ಪ್ರಯಾಣವು ಅರ್ಥಪೂರ್ಣವಾಗಿರುತ್ತದೆ. ಫರೋಹನ ಈ ಆಡಳಿತವು ನಮ್ಮನ್ನು ಪ್ರತ್ಯೇಕವಾಗಿಸುತ್ತದೆ ಮಾತ್ರವಲ್ಲದೆ ನಮ್ಮನ್ನು ಜರ್ಜರಿತಗೊಳಿಸುತ್ತದೆ. ಇದೊಂದು ರೀತಿಯ ಬೆಳವಣಿಗೆಯ ಮಾದರಿಯಾಗಿದ್ದು, ನಮ್ಮನ್ನು ಪ್ರತ್ಯೇಕಿಸಿ, ನಮ್ಮ ಭವಿಷ್ಯವನ್ನೇ ಕಸಿದುಕೊಳ್ಳುತ್ತದೆ.

ಇದೇ ವೇಳೆ ಪೋಪ್ ಫ್ತಾನ್ಸಿಸರು “ನಮ್ಮ ಜೀವನದ ಮಜಲುಗಳನ್ನು, ಪ್ರತಿ ಕ್ಷಣಗಳನ್ನು ನಿರ್ಧರಿಸುವವರು ದೇವರಾಗಿದ್ದಾರೆ. ತಪಸ್ಸುಕಾಲವು ಕೃಪಾವರಗಳ ಕಾಲವಾಗಿದ್ದು, ಮರೂಭೂಮಿಯು ಇಲ್ಲಿ ನಮ್ಮ ಭವಿಷ್ಯವನ್ನು ನಿರ್ಧರಿಸುವ ಸ್ಥಳವಾಗಿ ಮಾರ್ಪಡುತ್ತದೆ… ಇಲ್ಲಿ ನಾವು ನ್ಯಾಯವನ್ನೂ ಹಾಗೂ ನಮ್ಮನ್ನು ಮುಂದೆ ಕೊಂಡೊಯ್ಯುವ ಸಮುದಾಯವನ್ನು ಕಾಣಬಹುದು” ಎನ್ನುತ್ತಾರೆ.

ಮುಂದುವರೆದು ಮಾತನಾಡಿದ ಪೋಪ್ ಫ್ರಾನ್ಸಿಸ್, ಈ ತಪಸ್ಸುಕಾಲದಲ್ಲಿ ನಾವೆಲ್ಲರೂ ಒಂದು ಕ್ಷಣ ನಮ್ಮ ಎಲ್ಲಾ ಕಾರ್ಯಗಳನ್ನು ಬದಿಗೊತ್ತಿ, ಅವಶ್ಯಕತೆಯಲ್ಲಿರುವ ನಮ್ಮ ಸಹೋದರ ಸಹೋದರಿಯರಿಗಾಗಿ ಪ್ರಾರ್ಥಿಸಬೇಕು. ಅವರ ಮನ ಪರಿವರ್ತನೆಯ ಮೂಲಕ ನಮ್ಮನ್ನೂ ಹಾಗೂ ನಮ್ಮ ಸಮುದಾಯಗಳನ್ನೂ ಸಹ ಪರಿವರ್ತಿಸಬೇಕು ಎಂದು ಕರೆ ನೀಡುತ್ತಾರೆ.
 

03 February 2024, 10:14