ಪೋಪ್: ಯುಧ್ಧ ಸಂತ್ರಸ್ಥರ ದುಃಖವು ಜಗತ್ತಿನ ನಾಯಕರುಗಳ ಹೃದಯಗಳನ್ನು ಸ್ಪರ್ಶಿಸಲಿ
ವರದಿ: ಜೋಸೆಫ್ ಟಲ್ಲೋಚ್, ಅಜಯ್ ಕುಮಾರ್
“ ಎರಡು ವಿಶ್ವ ಯುದ್ಧಗಳಲ್ಲಿ ಮಡಿದವರನ್ನು ಪ್ರಾರ್ಥನಾಪೂರಿತವಾಗಿ ನೆನಪಿಸಿಕೊಳ್ಳುತ್ತಿರುವ ಹೊತ್ತಿನಲ್ಲಿ, ನಮ್ಮ ಗ್ರಹವನ್ನು ಈಗಲೂ ರಕ್ತಸಿಕ್ತವಾಗಿಸುತ್ತಿರುವ ಯುದ್ಧಗಳಲ್ಲಿ ಅಸುನೀಗಿದ ಸಾವಿರಾರು ನಾಗರೀಕರು ಹಾಗೂ ರಕ್ಷಣಾರಹಿತ ಸಂತ್ರಸ್ಥರನ್ನು ಸಹ ನಾವು ನೆನಪಿಸಿಕೊಳ್ಳೋಣ.”
ಫೆಬ್ರವರಿ 1 ರಂದು ನಡೆಯಲಿರುವ ಇಟಲಿಯ ರಾಷ್ಟ್ರೀಯ ನಾಗರೀಕ ಯುದ್ಧಗಳ ಸಂತ್ರಸ್ಥರ ದಿನದ ಹಿನ್ನೆಲೆಯಲ್ಲಿ ಬುಧವಾರ ತಮ್ಮ ಸಾರ್ವಜನಿಕ ದರ್ಶನದ ಕೊನೆಯಲ್ಲಿ ವಿಶ್ವಗುರು ಫ‌್ರಾನ್ಸಿಸರು ಮೇಲಿನ ಮಾತುಗಳನ್ನು ಹೇಳುತ್ತಾರೆ.
“ಸಂತ್ರಸ್ಥರ ನೋವಿನ ದನಿಯು ದೇಶಗಳ ನಾಯಕರ ಹೃದಯಗಳನ್ನು ಸ್ಪರ್ಶಿಸಲಿ ಹಾಗೂ ಶಾಂತಿಯುತ ಕಾರ್ಯಗಳಿಗೆ ಅವರನ್ನು ಪ್ರೇರೇಪಿಸಲಿ” ಎನ್ನುತ್ತಾರೆ.
“ಇಂದಿನ ದಿನಗಳಲ್ಲಿ ಯುದ್ಧಗಳಲ್ಲಿ ಏನಾಗುತ್ತಿದೆ ಎಂಬ ಕಥೆಗಳನ್ನು ನೀವು ಕೇಳಿದರೆ” ಎಂದು ಹೇಳಿದ ಪೋಪ್, ಅಲ್ಲಿ ಸಾಕಷ್ಟು ಕ್ರೌರ್ಯವಿದೆ. ನಾವು ಪ್ರಭುವಿನ ಶಾಂತಿಯನ್ನು ಬಯಸೋಣ ಏಕೆಂದರೆ ಪ್ರಭು ಶಾಂತಚಿತ್ತರಾಗಿದ್ದಾರೆ. ಅವರೆಂದಿಗೂ ಕ್ರೌರ್ಯವನ್ನಿಟ್ಟುಕೊಳ್ಳುವುದಿಲ್ಲ.”
ಶಾಂತಿ ನಿರ್ಮಾಣ
ಸಾರ್ವಜನಿಕ ದರ್ಶನಕ್ಕೆ ಮುಂಚಿತವಾಗಿ ಅವರು ಪೊಲೀಶ್ ಭಾಷೆ ಮಾತನಾಡುವ ಯಾತ್ರಿಕರ ಜೊತೆ ಮಾತನಾಡುತ್ತಾ, “ನಿಮ್ಮ ತಾಯ್ನಾಡಲ್ಲಿ, ನಿಮ್ಮ ಕುಟುಂಬಗಳಲ್ಲಿ ಹಾಗೂ ನಿಮ್ಮ ಹೃದಯಗಳಲ್ಲಿ ಶಾಂತಿಯನ್ನು ನಿರ್ಮಿಸುವ ಆಹ್ವಾನದಿಂದ ನಾವು ಹೊಸ ವರ್ಷವನ್ನು ಸ್ವಾಗತಿಸಿದ್ದೇವೆ” ಎಂದು ಹೇಳಿದರು.
“ನೆನಪಿಡಿ, ಶಾಂತಿಯನ್ನು ಸತ್ಯದ ಬುನಾದಿಯ ಮೇಲೆ ಮಾತ್ರ ನಿರ್ಮಿಸಬಹುದು” ಎಂದು ವಿಶ್ವಗುರು ಪೋಪ್ ಫ್ರಾನ್ಸಿಸ್ ಪುನರುಚ್ಛರಿಸಿದರು. “ನಿಮ್ಮ ಪ್ರಸ್ತುತ ಸನ್ನಿವೇಷದಲ್ಲಿ ಸಾರ್ವತ್ರಿಕ ಒಳಿತಿನ ಕಾಳಜಿ, ಕೋಪವನ್ನು ನಿಗ್ರಹಿಸುವುದು, ಪರಸ್ಪರ ಕ್ಷಮಾಗುಣಗಳು ಪ್ರೀತಿಯ ನಾಗರೀಕತೆಯನ್ನು ಕಟ್ಟುವಲ್ಲಿ ನಿಮಗೆ ನೆರವಾಗಲಿ.”
ಅಕ್ಟೋಬರ್ 29 ರಿಂದ ವಿಶ್ವಗುರು ಫ್ರಾನ್ಸಿಸರು ಗಾಜಾದಲ್ಲಿ ಮಾನವೀಯ ಕದನ ವಿರಾಮಕ್ಕೆ ಕರೆ ನೀಡುತ್ತಿದ್ದಾರೆ. ಯುದ್ಧ ಆರಂಭವಾದಗಿನಿಂದಲೂ ತಮ್ಮ ಪ್ರತಿ ಸಾರ್ವಜನಿಕ ದರ್ಶನದಲ್ಲೂ ವಿಶ್ವಗುರು ಫ್ರಾನ್ಸಿಸರು ಯೂಕ್ರೇನ್ ದೇಶದಲ್ಲಿ ಶಾಂತಿ ನೆಲೆಸುವಿಕೆಗೆ ಕರೆ ನೀಡಿದ್ದಾರೆ.