ಪೋಪ್: ರೆಡ್ ಕ್ರಾಸ್’ನ ಮಾನವೀಯ ಕಾರ್ಯಗಳು ಸೋದರತೆ ಸಾಧ್ಯ ಎಂಬುದನ್ನು ತೋರ್ಪಡಿಸುತ್ತದೆ
ವರದಿ: ಲೀಸಾ ಝೆಂಗಾರಿನಿ, ಅಜಯ್ ಕುಮಾರ್
ಶನಿವಾರ, ಪೋಪ್ ಫ್ರಾನ್ಸಿಸ್ ವ್ಯಾಟಿಕನ್ ನಗರದಲ್ಲಿ ಇಟಲಿಯಲ್ಲಿ ರೆಡ್ ಕ್ರಾಸ್ ಸಂಸ್ಥೆ ಸ್ಥಾಪನೆಯ 160ನೇ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಇಟಾಲಿಯನ್ ರೆಡ್ ಕ್ರಾಸ್ ಸಂಸ್ಥೆಯ ಸದಸ್ಯರನ್ನು ಭೇಟಿ ಮಾಡಿದರು. ಮೊದಲ ಬಾರಿಗೆ 1864 ರಲ್ಲಿ ಇಟಲಿಯಲ್ಲಿ ರೆಡ್ ಕ್ರಾಸ್ ಸಂಸ್ಥೆಯನ್ನು ಆರಂಭಿಸಲಾಗಿತ್ತು.
ಆ ವರ್ಷ ಇಟಲಿಯ ಮಿಲಾನ್ ನಗರದಲ್ಲಿ ಯುದ್ಧದಲ್ಲಿ ಗಾಯಗೊಂಡಿರುವ ಹಾಗೂ ರೋಗಗ್ರಸ್ಥರಾಗಿರುವವರಿಗೆ ನೆರವಿನ ಸಂಸ್ಥೆಯನ್ನು ಆರಂಭಿಸಲಾಗಿತ್ತು. ಇದಕ್ಕೂ ಮೊದಲು 1863 ರಲ್ಲಿ ಸ್ವಿಟ್ಝರ್’ಲ್ಯಾಂಡ್ ದೇಶದ ಜೆನಿವಾ ನಗರದಲ್ಲಿ ಅಂತರಾಷ್ಟ್ರೀಯ ರೆಡ್ ಕ್ರಾಸ್ ಸಂಸ್ಥೆಯನ್ನು ಸ್ಥಾಪಿಸಲಾಗಿತ್ತು. ಪೋಪ್ ಆರನೇ ಪೌಲರ ಸಭಾಂಗಣದಲ್ಲಿ ನೆರೆದಿದ್ದ ಸುಮಾರು 6000 ಐಸಿಆರ್ ಕಾರ್ಯಕರ್ತರು ಹಾಗೂ ಸ್ವಯಂಸೇವಕರನ್ನು ಉದ್ದೇಶಿಸಿ ಮಾತನಾಡಿದ ಪೋಪ್, ಮಾನವೀಯತೆಯೆಡೆಗಿನ ಅವರ ಕಾರ್ಯವನ್ನು ಬಹುವಾಗಿ ಶ್ಲಾಘಿಸಿದರು.
“ನಿಮ್ಮ ಬಧ್ಧತೆ ಮಾನವೀಯತೆ, ಸಮಾನತೆ, ತಟಸ್ಥತೆ, ಸ್ವಾತಂತ್ರ್ಯ, ಸ್ವಯಂಸೇವಕತ್ವ, ಒಗ್ಗಟ್ಟು, ಹಾಗೂ ಬಹುತ್ವವನ್ನು ಪ್ರೇರೇಪಿಸಿದೆ” ಎಂದು ಹೇಳಿದ ಪೋಪ್, ಈ ಜಗತ್ತಿನಲ್ಲಿ ಸೋದರತೆ ಇನ್ನೂ ಸಾಧ್ಯ ಎಂದು ಹೇಳಲು ನಿಮ್ಮ ಸೇವೆಯೇ ಕಾರಣ ಎಂದು ಹೇಳಿದರು.
“ಮಾನವ ಅಥವಾ ಮಾನವೀಯತೆಯನ್ನು ನಾವು ಕೇಂದ್ರಬಿಂದುವನ್ನಾಗಿಸಿದರೆ ಅಥವಾ ಅದಕ್ಕೆ ಪ್ರಾಮುಖ್ಯತೆಯನ್ನು ನೀಡಿದರೆ, ನಾವು ಸಂವಾದಿಸಬಹುದು, ಸಾಮಾನ್ಯ ಒಳಿತಿಗಾಗಿ ಕಾರ್ಯನಿರ್ವಹಿಸಬಹುದು. ವಿಭಜನೆಯ ಹೊರತಾಗಿಯೂ, ವೈರತ್ವದ ಗೋಡೆಗಳನ್ನು ಕೆಡವಬಹುದು ಹಾಗೂ ಮತ್ತೊಬ್ಬರನ್ನು ಶತೃವಾಗಿಸುವ ಅಧಿಕಾರ ಹಾಗೂ ಮೋಹವನ್ನು ಜಯಿಸೋಣ.”
ರೆಡ್ ಕ್ರಾಸ್ ಸಂಸ್ಥೆಯ “ಅನುಪಮ ಸೇವೆಯನ್ನು” ಶ್ಲಾಘಿಸಿದ ಪೋಪ್, ಈ ಸಂಸ್ಥೆಯು ಕೇವಲ ಯುದ್ಧ ಮಾತ್ರವಲ್ಲ ಪ್ರಾಕೃತಿಕ ವಿಕೋಪಗಳಿಗೆ ತುತ್ತಾಗಿರುವ ಸಂತ್ರಸ್ಥರಿಗೂ ನೆರವನ್ನು ನೀಡುತ್ತಲಿದೆ. ವಲಸಿಗರು ಹಾಗೂ ಬಲಹೀನರ ಪರವಾಗಿಯೂ ತನ್ನ ಸೇವೆಯನ್ನು ವಿಸ್ತರಿಸುವ ರೆಡ್ ಕ್ರಾಸ್, “ತಮ್ಮ ಈ ಮಹಾನ್ ಸೇವಾಕಾರ್ಯದಲ್ಲಿ ಎಲ್ಲರನ್ನು ವಿಶೇಷವಾಗಿ ಮಕ್ಕಳನ್ನು ಮರೆಯದೆ ಕಾರ್ಯನಿರ್ವಹಿಸುವುದನ್ನು ಮುಂದುವರೆಸಲಿ” ಎಂದು ಹೇಳಿದರು.
ಈ ವರ್ಷದ ವಾರ್ಷಿಕೋತ್ಸವ ಆಚರಣೆಗೆ ಆಯ್ದುಕೊಂಡಿರುವ ಶೀರ್ಷಿಕೆ “ಎಲ್ಲರಿಗಾಗಿ ಎಲ್ಲೆಲ್ಲಿಯೂ” ಎಂಬ ಕುರಿತು ಮಾತನಾಡಿದ ಪೋಪ್ ಫ್ರಾನ್ಸಿಸ್, ಈ ಶೀರ್ಷಿಕೆಯು ರೆಡ್ ಕ್ರಾಸ್ ಸಂಸ್ಥೆಯ ಮೂಲ ಆಶಯವನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು. “ಎಲ್ಲರೂ ಎಂದರೆ ಅದು ಯಾತನೆಯನ್ನು ಅನುಭವಿಸುತ್ತಿರುವ ಎಲ್ಲರನ್ನೂ ಒಳಗೊಳ್ಳುತ್ತದೆ. ಎಲ್ಲವನ್ನೂ ಒಳಗೊಳ್ಳುವ ಮನಸ್ಥಿತಿಯನ್ನು ನಾವೆಲ್ಲರೂ ಬೆಳೆಸಿಕೊಂಡು, ಈ ಸಂಸ್ಥೆಯಂತೆ ಎಲ್ಲರಿಗೂ ಸೇವೆ ಸಲ್ಲಿಸಬೇಕು” ಎಂದು ಹೇಳಿದರು.
“ಎಲ್ಲಾ ಮಾನವರಿಗೂ ತಮ್ಮದೇ ಆದ ಘನತೆಯಿದೆ. ಅವರ ಸ್ಥಿತಿಗತಿಗಳ ಕಾರಣ ನಾವು ಅವರನ್ನು ನಿರ್ಲಕ್ಷಿಸಬಾರದು ಅಥವಾ ಅವರಿಗೆ ನಮ್ಮ ಭಿನ್ನ ವರ್ತನೆಯನ್ನು ತೋರಬಾರದು” ಎಂದು ಹೇಳಿದ ಪೋಪ್, ರೆಡ್ ಕ್ರಾಸ್ ಸಂಸ್ಥೆಯು ತನ್ನ ಅವಿಸ್ಮರಣೀಯ ಸೇವೆಯನ್ನು ಮುಂದುವರೆಸುವುದುನ್ನು ನಿಲ್ಲಿಸಬಾರದು ಎಂದು ಹೇಳಿದರು.
ಕೊನೆಯಲ್ಲಿ, ಎಲ್ಲರೂ ದೇವರ ಸೋದರತೆಯ ಸಾಧನಗಳಾಗುವಂತೆ ಕೃಪಾಶೀರ್ವಾದಗಳನ್ನು ಅನುಗ್ರಹಿಸುವಂತೆ ದೇವರ ಆಶೀರ್ವಾದನ್ನು ಕೋರಿದರು.