ಹಮಾಸ್ ಒತ್ತೆಯಾಳುಗಳ ಸಂಬಂಧಿಕರನ್ನು ಭೇಟಿ ಮಾಡಿದ ಪೋಪ್ ಫ್ರಾನ್ಸಿಸ್

ಹಮಾಸ್-ಇಸ್ರೇಲಿ ಯುದ್ಧ ಆರಂಭವಾದಾಗಿನಿಂದ ಹಮಾಸ್ ವಶದಲ್ಲಿರುವ ಒತ್ತೆಯಾಳುಗಳ ಸಂಬಂಧಿಕರನ್ನು ಪೋಪ್ ಫ್ರಾನ್ಸಿಸ್ ವ್ಯಾಟಿಕನ್ ನಗರದಲ್ಲಿ ಭೇಟಿ ಮಾಡಿದರು. ಸೋಮವಾರ ಬೆಳಿಗ್ಗೆ ಪೋಪ್ ಅವರ ಖಾಸಗಿ ಭೇಟಿಯನ್ನು ಪವಿತ್ರಪೀಠದ ಮಾಧ್ಯಮ ಕಚೇರಿಯು ಸಾರ್ವಜನಿಕಗೊಳಿಸಿದೆ.

ವರದಿ: ಡೆಬೋರ ಕ್ಯಾಸ್ಟಲೀನೋ ಲುಬೋವ್, ಅಜಯ್ ಕುಮಾರ್

ಗಾಜಾದಲ್ಲಿ ಕಳೆದ ವರ್ಷ ಅಕ್ಟೋಬರ್ ತಿಂಗಳಿಂದ ಹಮಾಸ್ ವಶದಲ್ಲಿರುವ ಇಸ್ರೇಲಿ ಒತ್ತೆಯಾಳುಗಳ ಸಂಬಂಧಿಕರನ್ನು ಪೋಪ್ ಫ್ರಾನ್ಸಿಸ್ ಸೋಮವಾರ ಬೆಳಿಗ್ಗೆ ಭೇಟಿ ಮಾಡಿದ್ದಾರೆ. ಪವಿತ್ರಪೀಠದ ಮಾಧ್ಯಮ ಪ್ರಕಟಣೆಯ ಪ್ರಕಾರ ಈ ಖಾಸಗಿ ಭೇಟಿಯು ವ್ಯಾಟಿಕನ್ನಿನ ಪ್ರೇಷಿತ ಅರಮನೆಯಲ್ಲಿ ನಡೆದಿದೆ.

ಒತ್ತೆಯಾಳುಗಳ ಕುಟುಂಬಗಳು ಇಟಲಿಯಲ್ಲಿ ಇರುವ ಸಮಯದಲ್ಲಿ ಅವರು ವಿವಿಧ ರಾಜಕೀಯ ನಾಯಕರುಗಳನ್ನು ಭೇಟಿ ಮಾಡಿ, ಮನವಿಗಳನ್ನು ನೀಡಲಿದ್ದಾರೆ ಹಾಗೂ ಯೆಹೂದಿ ಸಮುದಾಯದೊಂದಿಗೆ ಮಾತುಕತೆಯನ್ನು ನಡೆಸಲಿದ್ದಾರೆ. ಇದು ಪೋಪ್ ಫ್ರಾನ್ಸಿಸ್ ಅವರು ಈ ಕುಟುಂಬಗಳೊಂದಿಗೆ ನಡೆಸಿದ ಎರಡನೇ ಭೇಟಿಯಾಗಿದೆ.

ನವೆಂಬರ್ 2023 ರಲ್ಲಿ ಪೋಪ್ ಫ್ರಾನ್ಸಿಸ್ ಒತ್ತಾಯಳುಗಳ ಸಂಬಂಧಿಕರನ್ನು ಮೊದಲ ಬಾರಿಗೆ ಭೇಟಿಮಾಡಿದ ನಂತರ, ಯುದ್ಧದಿಂದ ನೊಂದವರ ಕುಟುಂಬಗಳನ್ನೂ ಸಹ ಭೇಟಿ ಮಾಡಿದ್ದರು.

ಈ ಕುಟುಂಬಸ್ಥರ ಪೈಕಿ ನಾಲ್ಕು ವರ್ಷದ ಹಾಗೂ ಒಂಬತ್ತು ತಿಂಗಳ ಮಗುವಿನ ಜೊತೆಗೆ ಅಪಹರಿಸಲಾದ ಶಿರಿ ಬಿಬಾಸ್ ಎಂಬ ಮಹಿಳೆಯ ಸಂಬಂಧಿಕಳಾದ ಬೆಜಾಲೆಲ್ ಶ್ನೈದರ್, ಸುಪರ್ನೋವ ಹಬ್ಬದ ಸಂತ್ರಸ್ಥ ಗಾಲ್ ದಲಾಲ್ ಎಂಬುವವರು ಇದ್ದರು.

ಪೋಪ್ ಫ್ರಾನ್ಸಿಸ್ ಅವರು ಗಾಜಾದಲ್ಲಿ ಮಾನವೀಯ ನೆರವನ್ನು ನೀಡಲು ಕದನ ವಿರಾಮವನ್ನು ಘೋಷಿಸಬೇಕು ಎಂದು ಪದೇ ಪದೇ ಮನವಿ ಮಾಡಿದ್ದಾರೆ. ಯುದ್ಧವನ್ನು ಕೊನೆಗಾಣಿಸಿ, ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು ಅವಿರತ ಮನವಿಯನ್ನು ಮಾಡಿಕೊಂಡಿದ್ದಾರೆ.

08 April 2024, 16:57