ಪೋಪ್: ಮಾನವೀಯತೆಯಲ್ಲಿ ಕ್ರಿಸ್ತರ ಗಾಯಗಳಿಗೆ ಕ್ರೈಸ್ತರು ಆರೈಕೆ ಮಾಡಬೇಕು
ವರದಿ: ಡೆವಿನ್ ವಾಟ್ಕಿನ್ಸ್, ಅಜಯ್ ಕುಮಾರ್
“ಕ್ಷಮೆಯ ಕ್ಷಮಾದಾತರಾಗಿರಿ, ಸೌಖ್ಯದ ಸೌಖ್ಯದಾತರಾಗಿರಿ, ಸೋದರತೆಯಲ್ಲಿ ಸರಳ ಹಾಗೂ ಸಂತೋಷದಿಂದಿರಿ, ಕ್ರಿಸ್ತರ ಪಾರ್ಶ್ವದಿಂದ ಹರಿಯುವ ಪ್ರೀತಿಯ ಶಕ್ತಿಯನ್ನು ಅನುಭವಿಸಿದಂತೆ ಇತರರಿಗೂ ನೀಡಿರಿ.”
ಈ ಮಾತುಗಳನ್ನು ಹೇಳುವ ಮೂಲಕ ಪೋಪ್ ಫ್ರಾನ್ಸಿಸ್, ಅಸ್ಸಿಸಿಯ ಸಂತ ಫ್ರಾನ್ಸಿಸರು ಸೆಪ್ಟೆಂಬರ್ 17, 1224 ರಲ್ಲಿ ಇಟಲಿ ದೇಶದ ಲಾ ವೆರ್ನಾ ಎಂಬ ನಗರದಲ್ಲಿ ಪಡೆದ ಕ್ರಿಸ್ತರ ಪಂಚಗಾಯಗಳ 800ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದ್ದ ಫ್ರಯರ್ಸ್ ಮೈನರ್ ಸಭೆಯ ಸದಸ್ಯರಿಗೆ ಪ್ರೋತ್ಸಾಹವನ್ನು ನೀಡಿದರು.
ತಮ್ಮ ಪ್ರಭೋದನೆಯಲ್ಲಿ ಪೋಪ್ ಫ್ರಾನ್ಸಿಸ್ “ಕ್ರಿಸ್ತರ ಅನುರೂಪವನ್ನು ಬಡವರಲ್ಲಿ ನಾವೆಲ್ಲರೂ ಕಾಣಬೇಕಿದೆ” ಎಂದು ಹೇಳಿದರು. “ಅಸಿಸ್ಸಿಯ ಸಂತ ಫ್ರಾನ್ಸಿಸರ ಪಂಚ ಗಾಯಗಳು ನಮ್ಮ ಉದ್ಧಾರಕ್ಕಾಗಿ ಯಾತನೆಯನ್ನು ಅನುಭವಿಸಿ, ಮರಣವನ್ನು ಹೊಂದಿದ ಕ್ರಿಸ್ತರ ಪಂಚ ಗಾಯಗಳಾಗಿವೆ” ಎಂದು ಪೋಪ್ ಫ್ರಾನ್ಸಿಸರು ಹೇಳಿದರು.
“ಬದುಕಿನಲ್ಲಿ ಗಾಯಗಳನ್ನು ಹೊಂದಿರುವ ಜನತೆಗಾಗಿ ಕಾಳಜಿಯನ್ನು ವ್ಯಕ್ತಪಡಿಸಿ, ಅವರೊಂದಿಗೆ ಐಕ್ಯತೆಯಲ್ಲಿರುವುದು ಪ್ರತಿಯೊಬ್ಬ ಕ್ರೈಸ್ತನ ಕರ್ತವ್ಯ” ಎಂದು ಹೇಳಿದ ಪೋಪ್ ಫ್ರಾನ್ಸಿಸ್, ಧರ್ಮಸಭೆಯ ಪ್ರೀತಿಯ ಸಹಭಾಗಿತ್ವದಲ್ಲಿ ನಾವು ನಮ್ಮನ್ನೇ ಕಂಡುಕೊಳ್ಳುತ್ತೇವೆ ಎಂದು ಹೇಳಿದರು. ಈ ನಿಟ್ಟಿನಲ್ಲಿ ಸಾಗುವ ನಮ್ಮೆಲ್ಲಾ ಭಯ ಹಾಗೂ ಅನಿಶ್ಚಿತತೆಯನ್ನು ದೂರಮಾಡಲು ಅಸಿಸ್ಸಿಯ ಸಂತ ಫ್ರಾನ್ಸಿಸರು ನಮ್ಮ ಸಹಪಯಣಿಗರಾಗಿ ನಮ್ಮ ಜೊತೆ ನಡೆಯುತ್ತಾರೆ ಎಂದು ಅಭಿಪ್ರಾಯಪಟ್ಟರು.
ದೇವರ ಕ್ಷಮೆಯನ್ನು ನೀಡುವುದು
ಫ್ರಾನ್ಸಿಸ್ಕನ್ ಸಭೆಯ ಸದಸ್ಯರನ್ನು ಕುರಿತು ಮಾತನಾಡುತ್ತಾ ಪೋಪ್ ಫ್ರಾನ್ಸಿಸ್, “ಫ್ರಾನ್ಸಿಸ್ಕನ್ ಸಭೆಯ ಎಲ್ಲಾ ಸದಸ್ಯರು ಒಂದಾಗಿದ್ದು, ತಮ್ಮ ಪಾಲನಾ ಸೇವೆಯ ಭಾಗವಾಗಿ ಕ್ಷಮೆಯನ್ನು ಎಲ್ಲರಿಗೂ ನೀಡಬೇಕು. ಹೀಗೆ ಮಾಡುವ ಮೂಲಕ ಚರ್ಚನ್ನು ದುರಸ್ಥಿಗೊಳಿಸಬೇಕು” ಎಂದು ಹೇಳಿದರು.
“ನೀವೆಲ್ಲರೂ ಒಳ್ಳೆಯ ಪಾಪನಿವೇದನಾಕಾರರಾಗಿದ್ದೀರಿ. ಫ್ರಾನ್ಸಿಸ್ಕನ್ ಸಭೆಯ ಗುರುಗಳು ಇದಕ್ಕೆ ಪ್ರಸಿದ್ಧಿಯನ್ನು ಪಡೆದಿದ್ದಾರೆ. ಎಲ್ಲವನ್ನೂ ಕ್ಷಮಿಸಿ; ಸದಾ ಕ್ಷಮಿಸಿ. ಕ್ಷಮೆ ನೀಡುವುದರಿಂದ ದೇವರಿಗೆ ಎಂದೂ ಸುಸ್ತಾಗುವುದಿಲ್ಲ. ನಾವೇ ಕ್ಷಮೆ ನೀಡುವುದಕ್ಕೆ ಸುಸ್ತಾಗುವುದು” ಎಂದು ಪೋಪ್ ಫ್ರಾನ್ಸಿಸ್ ಕ್ಷಮೆಯ ಮಹತ್ವದ ಕುರಿತು ಹೇಳಿದರು.
ತಮ್ಮ ಭಾಷಣದ ಕೊನೆಯಲ್ಲಿ ಅಸಿಸ್ಸಿಯ ಸಂತ ಫ್ರಾನ್ಸಿಸರ ಕುರಿತ ಹೊಸ ಪ್ರಾರ್ಥನೆಯನ್ನು ಪೋಪ್ ಫ್ರಾನ್ಸಿಸ್ ಪಠಿಸಿದರು.