ಗಾಜಾದಲ್ಲಿ ಕದನವಿರಾಮಕ್ಕೆ ಮತ್ತೆ ಮನವಿ ಮಾಡಿದ ಪೋಪ್ ಫ್ರಾನ್ಸಿಸ್
ವರದಿ: ಡೆಬೋರಾ ಕ್ಯಾಸ್ಟಲಿನೋ ಲುಬೋವ್, ಅಜಯ್ ಕುಮಾರ್
ವ್ಯಾಟಿಕನ್ನಿನಲ್ಲಿ ತಮ್ಮ ವಾರದ ಸಾರ್ವಜನಿಕ ದರ್ಶನದಲ್ಲಿ ಪೋಪ್ ಫ್ರಾನ್ಸಿಸ್ ಅವರು ಗಾಜಾದಲ್ಲಿ ಕದನವಿರಾಮ ಘೋಷಿಸಬೇಕು ಎಂದು ಮತ್ತೊಮ್ಮೆ ಮನವಿ ಮಾಡಿದ್ದಾರೆ. ಪವಿತ್ರ ನಾಡಿನಲ್ಲಿ ನಡೆಯುತ್ತಿರುವ ಯುದ್ಧದ ಕುರಿತು ಚಿಂತಿಸಿದ ಪೋಪ್, ಮಧ್ಯಪ್ರಾಚ್ಯದಿಂದ ಬರುತ್ತಿರುವ ಕೆಟ್ಟ ಸುದ್ದಿಗಳ ಕುರಿತು ತಮ್ಮ ಶೋಕವನ್ನು ವ್ಯಕ್ತಪಡಿಸಿದರು.
“ಗಾಜಾ ಪಟ್ಟಿಯಲ್ಲಿ ಒಂದು ಶಾಶ್ವತ ಕದನವಿರಾಮ ಘೋಷಿಸಬೇಕೆಂದು ನಾನು ಪುನರುಚ್ಛರಿಸುತ್ತೇನೆ” ಎಂದರು.
ಗಾಜಾದಲ್ಲಿ ಮಾನವೀಯ ನೆರವನ್ನು ನೀಡುವ ವೇಳೆ ಇಸ್ರಯೇಲ್ ಸೇನೆಯು ಮಾಡಿದ ವಾಯು ದಾಳಿಗೆ ಸಿಲುಕಿ, ಮೃತರಾದ ವರ್ಲ್ಡ್ ಸೆಂಟ್ರಲ್ ಕಿಚನ್ ಸಂಸ್ಥೆಯ ಸಿಬ್ಬಂಧಿಗಳನ್ನು ನೆನೆದ ಪೋಪ್ ಫ್ರಾನ್ಸಿಸ್, ಅವರಿಗಾಗಿ ತಮ್ಮ ಅಂತರಾಳದ ಶೋಕವನ್ನು ವ್ಯಕ್ತಪಡಿಸಿದರು. ಅವರ ಆತ್ಮಗಳಿಗಾಗಿ ಹಾಗೂ ಅವರ ಕುಟುಂಬಸ್ಥರಿಗಾಗಿ ಪ್ರಾರ್ಥಿಸುವ ಭರವಸೆಯನ್ನಿತ್ತರು.
ಮಂಗಳವಾರ, ಅಮೇರಿಕಾದಲ್ಲಿರುವ ವರ್ಲ್ಡ್ ಸೆಂಟ್ರಲ್ ಕಿಚನ್ ಸಂಸ್ಥೆಯ ಸಿಬ್ಬಂಧಿ ಪ್ಯಾಲೆಸ್ತೀನ್ ನಿರಾಶ್ರಿತರಿಗೆ ಆಹಾರವನ್ನು ಹಂಚುವ ವೇಳೆ, ಇಸ್ರಯೇಲ್ ಸೇನೆ ವಾಯು ದಾಳಿ ನಡೆಸಿದ ಪರಿಣಾಮ ಸಾವನ್ನಪ್ಪಿದರು. ಹೀಗೆ ಸಾವಿಗೀಡಾದವರ ಪೈಕಿ ಒಬ್ಬ ಆಸ್ಟ್ರೇಲಿಯಾ ಪ್ರಜೆ, ಒಬ್ಬ ಪೋಲಿಷ್ ಪ್ರಜೆ, ಅಮೇರಿಕ-ಕೆನಡಾ ದ್ವಿನಾಗರೀಕತ್ವ ಪ್ರಜೆ ಹಾಗೂ ಒಬ್ಬ ಪ್ಯಾಲಿಸ್ತೇನ್ ಪ್ರಜೆ ಆಗಿದ್ದಾರೆ.
ಯಾತನೆ ಅನುಭವಿಸುತ್ತಿರುವ ನಾಗರೀಕ ಗುಂಪುಗಳಿಗೆ ಮನವಿ
“ಯುದ್ಧಪೀಡಿತ ಪ್ರದೇಶದಲ್ಲಿ ನೋವು ಹಾಗೂ ಯಾತನೆಯನ್ನು ಅನುಭವಿಸುತ್ತಿರುವ ಜನತೆಗೆ ಅವಶ್ಯಕವಾದ ಮಾನವೀಯ ನೆರವನ್ನು ನೀಡಲು ಅವಕಾಶ ಮಾಡಿಕೊಡಬೇಕು ಎಂದು ನಾನು ಮತ್ತೊಮ್ಮೆ ಮನವಿ ಮಾಡುತ್ತಿದ್ದೇನೆ” ಎಂದು ಪೋಪ್ ಫ್ರಾನ್ಸಿಸ್ ಹೇಳಿದರು. “ಈ ಪ್ರದೇಶದಲ್ಲಿ ಯುದ್ಧವನ್ನು ವಿಸ್ತರಿಸುವ ಯಾವುದೇ ಬೇಜವಾಬ್ದಾರಿಯುತ ಕಾರ್ಯಗಳನ್ನು ಮಾಡದಿರೋಣ” ಎಂದು ಹೇಳಿದ ಪೋಪ್, ವಿಶ್ವದ ಅನೇಕ ಭಾಗಗಳಲ್ಲಿ ಜನತೆಗೆ ಸಾವನ್ನು ತರುತ್ತಿರುವ ಈ ಯುದ್ಧ ಸಂಸ್ಕೃತಿಗೆ ಕೊನೆಯನ್ನು ಹಾಡೋಣ” ಎಂದು ಪುನರುಚ್ಛರಿಸಿದರು.