ಹುಡುಕಿ

ಕಝಕಿಸ್ಥಾನದಲ್ಲಿ ಪ್ರವಾಹದಿಂದ ನೊಂದವರಿಗೆ ಪ್ರಾರ್ಥಿಸುವಂತೆ ಪೋಪ್ ಫ್ರಾನ್ಸಿಸ್ ಮನವಿ

ಪೋಪ್ ಫ್ರಾನ್ಸಿಸ್ ಅವರು ಕಝಕಿಸ್ತಾನದಲ್ಲಿ ಪ್ರವಾಹದ ಹಿನ್ನೆಲೆ ನೊಂದವರಿಗೆ ಪ್ರಾರ್ಥಿಸುವಂತೆ ಕರೆ ನೀಡಿದ್ದಾರೆ. ಮಧ್ಯ ಏಷ್ಯಾದಲ್ಲಿನ ಈ ದೇಶದಲ್ಲಿ ಪ್ರವಾಹ ಉಂಟಾದ ಪರಿಣಾಮ ಸಾವಿರಾರು ಜನರು ಇದರಿಂದ ತೊಂದರೆಗೊಳಗಾಗಿದ್ದಾರೆ ಮಾತ್ರವಲ್ಲದೆ ಮನೆ-ಮಠಗಳನ್ನು ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಪವಿತ್ರ ಭೂಮಿ, ಉಕ್ರೇನ್ ಹಾಗೂ ಮ್ಯಾನ್ಮಾರ್ ದೇಶದಲ್ಲಿ ನಡೆಯುತ್ತಿರುವ ಯುದ್ಧದಗಳಿಂದ ನೋವು ಹಾಗೂ ಸಮಸ್ಯೆಗಳಿಗೆ ತುತ್ತಾಗಿರುವ ಎಲ್ಲಾ ಜನತೆಗಾಗಿಯೂ ಪ್ರಾರ್ಥಿಸುವಂತೆ ಕರೆ ನೀಡಿದರು.

ವರದಿ: ಡೆಬೋರಾ ಕ್ಯಾಸ್ಟಲೀನೋ ಲುಬೋವ್, ಅಜಯ್ ಕುಮಾರ್

ಬುಧವಾರ ತಮ್ಮ ಸಾಮಾನ್ಯ ಭೇಟಿಯಲ್ಲಿ ಮಾತನಾಡಿದ ಪೋಪ್ ಫ್ರಾನ್ಸಿಸ್ ಕಝಕಿಸ್ತಾನದಲ್ಲಿ ಉಂಟಾಗಿರುವ ಭೀಕರ ಪ್ರವಾಹದ ಕುರಿತು ಮಾತನಾಡಿ, “ಈ ಸಂದರ್ಭದಲ್ಲಿ ನಾನು ಕಝಕಿಸ್ತಾನದ ಜನೆತೆಯೊಂದಿಗೆ ಐಕ್ಯತೆಯನ್ನು ವ್ಯಕ್ತಪಡಿಸುತ್ತೇನೆ” ಎಂದು ಹೇಳಿದರು. 2022 ರಲ್ಲಿ ಪೋಪ್ ಫ್ರಾನ್ಸಿಸ್ ಕಝಕಿಸ್ತಾನಕ್ಕೆ ಭೇಟಿ ನೀಡಿದ್ದರು.

“ಈ ಪ್ರಾಕೃತಿಕ ವಿಕೋಪದ ಕಾರಣ ಯಾತನೆಯನ್ನು ಅನುಭವಿಸುತ್ತಿರುವ ಎಲ್ಲರಿಗಾಗಿ ಪ್ರಾರ್ಥಿಸಬೇಕಿದೆ” ಎಂದು ಹೇಳಿದರು.

ವೇಗವಾಗಿ ಕರಗುತ್ತಿರುವ ಹಿಮವು ನದಿಗಳನ್ನು ಪ್ರವೇಶಿಸಿದ ಪರಿಣಾಮ ಪ್ರವಾಹ ಉಂಟಾಗಿದ್ದು, ರಷ್ಯಾ ಮತ್ತು ಕಝಕಿಸ್ತಾನವು ಸುಮಾರು ಒಂದು ಲಕ್ಷ ಜನತೆಯನ್ನು ರಕ್ಷಿಸಿ, ಅವರನ್ನು ಸ್ಥಳಾಂತರಿಸಿದ್ದಾರೆ. ಕಳೆದ ಎಪ್ಪತ್ತು ವರ್ಷಗಳಲ್ಲೇ ಇದು ಅತ್ಯಂತ ದೊಡ್ಡ ಪ್ರವಾಹವಾಗಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ.

ಇಸ್ರೇಲ್-ಪ್ಯಾಲೆಸ್ತೀನ್, ಉಕ್ರೇನ್, ಮ್ಯಾನ್ಮಾರ್ ದೇಶಗಳಲ್ಲಿ ಶಾಂತಿಗಾಗಿ ಮನವಿ

ಇಟಾಲಿಯನ್ ಭಾಷೆಯಲ್ಲಿ ಶುಭಾಶಯಗಳನ್ನು ಕೋರುತ್ತಾ ಮಾತನಾಡಿದ ಪೋಪ್ ಫ್ರಾನ್ಸಿಸ್, ಯುದ್ಧದ ಕಾರಣದಿಂದ ಯಾತನೆಯನ್ನು ಅನುಭವಿಸುತ್ತಿರುವ ಎಲ್ಲರಿಗಾಗಿ ಪ್ರಾರ್ಥಿಸುವಂತೆ ಮನವಿಯನ್ನು ಮಾಡಿದರು.

“ಯುದ್ಧಗ್ರಸ್ಥ ಉಕ್ರೇನ್, ಪ್ಯಾಲೆಸ್ತೀನ್, ಇಸ್ರೇಲ್ ಹಾಗೂ ಮ್ಯಾನ್ಮಾರ್ ದೇಶದ ಜನತೆಗಾಗಿ ನನ್ನ ಪ್ರಾರ್ಥನೆಗಳಿವೆ” ಎಂದು ಪೋಪ್ ಫ್ರಾನ್ಸಿಸ್ ಈ ಸಂದರ್ಭದಲ್ಲಿ ಹೇಳಿದರು. “ನಾವೆಲ್ಲರೂ ಸಹ ಒಟ್ಟಾಗಿ ಯುದ್ಧದಿಂದ ನೊಂದಿರುವವರಿಗಾಗಿ ಪ್ರಾರ್ಥಿಸಬೇಕೆಂದು” ಮತ್ತೆ ಮನವಿಯನ್ನು ಮಾಡಿದರು.

10 April 2024, 17:02