2024.04.12 Membri della Papal Foundation

ನಿಮ್ಮ ಕಾರ್ಯದಲ್ಲಿ ಪ್ರಾರ್ಥನೆಯನ್ನು ಕಡೆಗಣಿಸಬೇಡಿ ಎಂದು ದಿ ಪೇಪಲ್ ಫೌಂಡೇಶನ್'ಗೆ ಹೇಳಿದ ಪೋಪ್ ಫ್ರಾನ್ಸಿಸ್

ಅಮೇರಿಕಾದ ದಿ ಪೇಪಲ್ ಫೌಂಡೇಶನ್ ಸದಸ್ಯರು ತಮ್ಮ ವಾರ್ಷಿಕ ಪುಣ್ಯಯಾತ್ರೆಯನ್ನು ರೋಮ್ ನಗರಕ್ಕೆ ಕೈಗೊಂಡ ವೇಳೆ ಅವರನ್ನು ಸಂಧಿಸಿ ಮಾತನಾಡಿದ ಪೋಪ್ ಫ್ರಾನ್ಸಿಸ್, ಹೇಗೆ ಉದಾರ ದಾನಧರ್ಮವನ್ನು ಮಾಡುವುದರ ಜೊತೆಗೆ ಪ್ರಾರ್ಥನೆಯು ಪ್ರಮುಖವಾಗಿದೆ ಎಂಬ ಕುರಿತು ಮಾತನಾಡಿದರು.

ವರದಿ: ಲೀಸಾ ಝೆಂಗಾರಿನಿ, ಅಜಯ್ ಕುಮಾರ್

ಪೋಪ್ ಸಂತ ದ್ವಿತೀಯ ಜಾನ್ ಪೌಲರ ಆಶಯದ ಮೇರೆಗೆ 1988 ರಲ್ಲಿ ಅಮೇರಿಕಾದಲ್ಲಿ ಆರಂಭವಾದ "ದೆ ಪೇಪಲ್ ಫೌಂಡೇಶ‌ನ್" ಎಂಬ ಪ್ರತಿಷ್ಟಾನವು, ಸುಮಾರು 36 ವರ್ಷಗಳಿಂದ ವಿಶ್ವದಾದ್ಯಂತ ಕಥೋಲಿಕ ದಾನಧರ್ಮದ ಯೋಜನೆಗಳಿಗೆ ಆರ್ಥಿಕ ನೆರವನ್ನು ನೀಡುತ್ತಾ ಬರುತ್ತಿದೆ. ಇದು ಪೋಪರು ಗುರುತಿಸಿ, ವಿನಂತಿಸಿಕೊಳ್ಳುವ ಯೋಜನೆ ಅಥವಾ ಕಾರ್ಯಗಳಿಗೆ ಉದಾರ ನೆರವನ್ನು ನೀಡುತ್ತದೆ.

ಬಡವರಿಗೆ ಯೇಸುವಿನ ಪ್ರೀತಿಯನ್ನು ತರುವುದು

ವಾರ್ಷಿಕ ಪುಣ್ಯಯಾತ್ರೆಯನ್ನು ಮಾಡುತ್ತಿರುವ ಸಂದರ್ಭದಲ್ಲಿ, ದಿ ಪೇಪಲ್ ಫೌಂಡೇಶನ್ನಿನ ಸುಮಾರು 140 ಸದಸ್ಯರನ್ನು ವ್ಯಾಟಿಕನ್ನಿಗೆ ಸ್ವಾಗತಿಸಿ, ಅವರನ್ನು ಭೇಟಿ ಮಾಡಿ ಮಾತನಾಡಿದ ಪೋಪ್ ಫ್ರಾನ್ಸಿಸ್, ಮತ್ತೊಮ್ಮೆ ಅವರಿಗೆ ತಮ್ಮ ಹೃದಯಾಂತರಾಳದ ಧನ್ಯವಾದಗಳನ್ನು ತಿಳಿಸಿದರು. ಬಡವರಿಗೆ ಹಾಗೂ ನಿರ್ಗತಿಕರಿಗೆ ತಮ್ಮ ಉದಾರ ನೆರವಿನ ಮೂಲಕ ಯೇಸುವಿನ ಪ್ರೀತಿಯನ್ನು ತೋರಿಸುತ್ತಿರುವ ಅವರ ಕಾರ್ಯಕ್ಕೆ ಮೆಚ್ಚುಗೆಯನ್ನು ಸೂಚಿಸಿದರು.

"ಬಡವರು, ನಿರ್ಗತಿಕರು, ವಲಸಿಗರು, ವಿದ್ಯಾರ್ಥಿಗಳೂ ಸೇರಿದಂತೆ ಸಮಾಜದಲ್ಲಿನ ಶೋಷಿತ ಸಮುದಾಯಗಳಿಗೆ ನಿಮ್ಮ ಉದಾರ ದಾನವು ಸಹಾಯಕವಾಗಿದ್ದು, ಅದು ಅವರ ಸಮಗ್ರ ಅಭಿವೃದ್ಧಿಗೆ ಕಾರಣವಾಗುತ್ತದೆ." ಎಂದು ಪೋಪ್ ಫ್ರಾನ್ಸಿಸ್ ದಿ ಪೇಪಲ್ ಫೌಂಡೇಶನ್ ಪ್ರತಿಷ್ಟಾನದ ಸದಸ್ಯರನ್ನುದ್ದೇಶಿಸಿ ಮಾತನಾಡಿದರು. ವಿಶೇಷವಾಗಿ, ಯುದ್ಧದಿಂದ ಹಾಗೂ ನಾನಾ ರೀತಿಯ ಹಿಂಸಾಚಾರದಿಂದ ನೊಂದಿರುವವರಿಗೆ ಇದು ಬಹಳ ಅನುಕೂಲಕರವಾಗಲಿದೆ ಎಂದು ಪೋಪ್ ಫ್ರಾನ್ಸಿಸ್ ನುಡಿದರು.

ನಿಮ್ಮ ವಿಶ್ವಾಸವನ್ನು ವೃದ್ಧಿಸಿಕೊಳ್ಳಿ

ನಿಮ್ಮೆಲ್ಲಾ ಉತ್ತಮ ಕಾರ್ಯಗಳ ಮೂಲಾಧಾರ ಕಥೋಲಿಕ ವಿಶ್ವಾಸ. ಕಥೋಲಿಕ ವಿಶ್ವಾಸವನ್ನು ಪ್ರತಿ ದಿನ, ಪ್ರತಿ ಕಾರ್ಯದಲ್ಲಿ ಸ್ಮರಿಸಿಕೊಂಡು, ಧರ್ಮಸಭೆಯ ಆಗುಹೋಗುಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ವೃದ್ಧಿಸಿಕೊಳ್ಳಬೇಕೆಂದು ಪೋಪ್ ಫ್ರಾನ್ಸಿಸ್ ದಿ ಪೇಪಲ್ ಫೌಂಡೇಶನ್ನಿನ ಸದಸ್ಯರಿಗೆ ಪ್ರೋತ್ಸಾಹವನ್ನು ನೀಡಿದರು. ಇದರ ಜೊತೆಗೆ ಸಂಸ್ಕಾರಗಳಲ್ಲಿ, ಪ್ರಾರ್ಥನೆ ಹಾಗೂ ವಿಶ್ವಾಸದೊಂದಿಗೆ ಭಾಗವಹಿಸುವುದು ಮುಖ್ಯವಾಗಿದೆ ಎಂದು ಹೇಳಿದರು.

ನಿಮ್ಮೆಲ್ಲಾ ಕಾರ್ಯಗಳಿಗೂ ಆಧ್ಯಾತ್ಮಿಕ ನೆಲೆ ಎಂಬುದು ಬಹಳ ಪ್ರಮುಖವಾಗಿದ್ದು, ಇದು ವಿವಿಧ ಸಂಸ್ಕೃತಿ ಹಾಗೂ ಆಚಾರ-ವಿಚಾರಗಳ ಜನತೆಯ ಜೊತೆಗೆ ನೀವು ಉತ್ತಮ ಭಾಂದವ್ಯವನ್ನು ವೃದ್ಧಿಸಿಕೊಳ್ಳಲು ನೆರವಾಗುತ್ತದೆ ಎಂದು ಹೇಳಿದರು. ಹಿಂದೆಂದಿಗಿಂತಲೂ, ಸೇವಾ ಮನೋಭಾವ ಪ್ರಸ್ತುತ ಕಾಲಘಟ್ಟದಲ್ಲಿ ಅನಿವಾರ್ಯವಾಗಿದೆ ಎಂದು ಅವರು ಕೊನೆಯಲ್ಲಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

36 ವರ್ಷಗಳಲ್ಲಿ  2,400 ಕ್ಕೂ ಹೆಚ್ಚು ಯೋಜನೆಗಳನ್ನು ಪ್ರಾಯೋಜಿಸಲಾಗಿದೆ

ದಿ ಪೇಪಲ್ ಫೌಂಡೇಶನ್ ಜಾಲತಾಣದ ಪ್ರಕಾರ, ಅದು ಆರಂಭವಾದಾಗಿನಿಂದ ಇಲ್ಲಿಯವರೆಗೂ ಸುಮಾರು, 2,400 ಕ್ಕೂ ಹೆಚ್ಚು ಯೋಜನೆಗಳನ್ನು ಪ್ರಾಯೋಜಿಸಿದ್ದು, ಇದಕ್ಕಾಗಿ ಸುಮಾರು 225 ಮಿಲಿಯನ್ ಯುಎಸ್ ಡಾಲರುಗಳಷ್ಟು ಹಣವನ್ನು ವಿನಿಯೋಗಿಸಲಾಗಿದೆ. ಇದು ಪೋಪ್ ಫ್ರಾನ್ಸಿಸ್, ಪೋಪ್ ಹದಿನಾರನೇ ಬೆನೆಡಿಕ್ಟ್ ಹಾಗೂ ಪೋಪ್ ಸಂತ ದ್ವಿತೀಯ ಜಾನ್ ಪೌಲರು ಗುರುತಿಸಿದ ಯೋಜನೆಗಳನ್ನು ಒಳಗೊಂಡಿದೆ. 

12 April 2024, 12:54