ಯುದ್ಧಪೀಡಿತ ಪ್ರದೇಶಗಳಲ್ಲಿ ಪಾಸ್ಕ ಶಾಂತಿ ನೆಲೆಸುವಂತೆ ಪೋಪ್ ಫ್ರಾನ್ಸಿಸ್ ಪ್ರಾರ್ಥನೆ
ವರದಿ: ಡೆವಿನ್ ವಾಟ್ಕಿನ್ಸ್
ಧರ್ಮಸಭೆಯು ಪಾಸ್ಕ ಸೋಮವಾರವನ್ನು ಆಚರಿಸುವ ಹಿನ್ನೆಲೆಯಲ್ಲಿ ಫ್ರಾನ್ಸಿಸರು ಶಾಂತಿಯ ಕುರಿತ ತಮ್ಮ ಮನವಿಯನ್ನು ಪುನರುಚ್ಚರಿಸಿದರು.
ಯುದ್ಧಪೀಡಿತ ಪ್ರದೇಶಗಳಲ್ಲಿ ಪ್ರಭುವಿನ ಶಾಂತಿಯು ಇಳಿದು ಬರಲಿ ಹಾಗೂ ಯುದ್ಧದಿಂದ ದಣಿದಿರುವ ಜನರಿಗೆ ಈ ಶಾಂತಿಯು ಕೊಡುಗೆಯಾಗಿ ಪರಿಣಮಿಸಲಿ. ಈ ಜನತೆಯ ಹಸಿವನ್ನು ಹಾಗೂ ಎಲ್ಲಾ ರೀತಿಯ ಶೋಷಣೆಯನ್ನು ಪ್ರಭುವಿನ ಶಾಂತಿಯು ಕೊನೆಗಾಣಿಸಲಿ ಎಂದು ಪೋಪ್ ಫ್ರಾನ್ಸಿಸರು ಪ್ರಾರ್ಥಿಸಿದ್ದಾರೆ.
ಸಾಂಪ್ರದಾಯಿಕ “ರೆಜಿನಾ ಚೇಲಿ” ಪ್ರಾರ್ಥನೆಯ ಸಂದರ್ಭದಲ್ಲಿ ಪೇತ್ರರ ಚೌಕದಲ್ಲಿ ಫ್ರಾನ್ಸಿಸ್ ಈ ಮಾತುಗಳನ್ನು ಆಡಿದ್ದಾರೆ.
ತಮಗೆ ಈಸ್ಟರ್ ಹಬ್ಬದ ಶುಭಾಶಯಗಳು ಕೋರಿದ ಎಲ್ಲರಿಗೂ ಧನ್ಯವಾದಗಳನ್ನು ಪೋಪ್ ಫ್ರಾನ್ಸಿಸ್ ತಿಳಿಸಿದ್ದಾರೆ.
"ಈಸ್ಟರ್ ಹಬ್ಬದ ಶುಭಾಶಯಗಳನ್ನು ನವೀಕರಿಸುತ್ತಾ, ಹೃದಯಂತರಾಳದಿಂದ ನನಗೆ ಈ ಹಬ್ಬದ ಶುಭಾಶಯಗಳನ್ನು ತಿಳಿಸಿದ ಹಾಗೂ ನನಗಾಗಿ ಪ್ರಾರ್ಥಿಸಿದ ಎಲ್ಲಾ ಜನತೆಗಾಗಿ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ. ಪುನರುತ್ಥಾನರಾದ ಪ್ರಭುವಿನ ಶಾಂತಿ ಈ ಜನತೆಯಲ್ಲಿ ಸದಾ ನೆಲೆಸಲಿ; ಅವರ ಕುಟುಂಬಗಳನ್ನು ಹಾಗೂ ಅವರ ಸಮುದಾಯಗಳನ್ನು ಹರಸಿ ಆಶೀರ್ವದಿಸಲಿ" ಎಂದರು.
ಈಸ್ತರ್ ಹಬ್ಬವು ಶಾಂತಿಗಾಗಿ ಕರೆ ನೀಡುತ್ತದೆ.
ಇದಕ್ಕೂ ಮುಂಚೆ, “ಊರ್ಬಿ ಎತ್ ಆರ್ಬಿ" ಪ್ರಭೋದನೆಯಲ್ಲಿ ಪೋಪ್ ಫ್ರಾನ್ಸಿಸ್, ವಿಶ್ವವನ್ನು ಕಾಡುತ್ತಿರುವ ಪಿಡುಗುಗಳ ಕುರಿತು ಮಾತನಾಡಿದರು.
ಮೊದಲಿಗೆ ಇಸ್ರೇಲ್ ಮತ್ತು ಹಮಾಸ್ ನಡುವೆ ನಡೆಯುತ್ತಿರುವ ಯುದ್ಧದ ಕುರಿತು ಪ್ರಸ್ತಾಪಿಸಿದ ಇವರು ಈ ಯುದ್ಧ ಹೇಗೆ ಪವಿತ್ರ ನಾಡನ್ನು ನಾಶ ಮಾಡುತ್ತಿದೆ ಎಂಬುದರ ಕುರಿತು ಮಾತನಾಡಿದರು. ಗಾಜಾಪ್ರದೇಶಕ್ಕೆ ಮಾನವೀಯ ನೆರವು ದಕ್ಕುವಂತೆ ವಿಶ್ವದ ಜನರು ಹಾಗೂ ವಿಶ್ವ ನಾಯಕರು ನೋಡಿಕೊಳ್ಳಬೇಕು ಎಂದು ಕರೆ ನೀಡಿದರು.
ಇದೆ ವೇಳೆ ರಷ್ಯಾ ಮತ್ತು ಯುಕ್ರೇನ್ ನಡುವಿನ ಯುದ್ಧದ ಕುರಿತು ಪ್ರಸ್ತಾಪಿಸಿದ ಪೋಪ್ ಫ್ರಾನ್ಸಿಸ್ ಯುದ್ಧ ಕೈದಿಗಳ ಪರಸ್ಪರ ಬಿಡುಗಡೆಗೆ ಒತ್ತಾಯಿಸಿದರು. ಈ ಯುದ್ಧದ ಬಲಿಪಶುಗಳಾಗಿ ತಮ್ಮ ನಗುವನ್ನು ಕಳೆದುಕೊಂಡ ನೂರಾರು ಮುಗ್ಧ ಮಕ್ಕಳ ಕುರಿತು ಅವರು ಚಿಂತಿಸಿದರು.
"ಮುಗ್ಧ ನೋಟವನ್ನು ಬೀರುತ್ತಾ ಅವರು ಕೇಳುತ್ತಾರೆ "ಏಕೆ? ಏಕಿಷ್ಟು ಸಾವಿದೆ? ಏಕಿಷ್ಟು ವಿನಾಶವಿದೆ?" ಎಂದ ಪೋಪ್ "ಯುದ್ಧ ಎಂದಿಗೂ ಸೋಲುತ್ತದೆ ಹಾಗೂ ಎಲ್ಲರನ್ನು ಸೋಲಿಸುತ್ತದೆ" ಎಂದರು.