Aftermath of an earthquake, in Hualien

ತೈವಾನ್ ಭೂಕಂಪದ ಸಂತ್ರಸ್ಥರಿಗೆ ಐಕ್ಯತೆಯನ್ನು ವ್ಯಕ್ತಪಡಿಸಿದ ಪೋಪ್ ಫ್ರಾನ್ಸಿಸ್

ತೈವಾನ್ ದ್ವೀಪದ ಹುವಾಲಿಯನ್ ನಗರದಲ್ಲಿ ಸಂಭವಿಸಿದ ಭೀಕರ ಭೂಕಂಪದಿಂದ ಮೃತ ಹೊಂದಿದವರಿಗೆ ಬುಧವಾರ ಪೋಪ್ ಫ್ರಾನ್ಸಿಸ್ ಅವರು ಸಂತಾಪವನ್ನು ವ್ಯಕ್ತಪಡಿಸಿ, ತೈವಾನ್ ದೇಶದ ಧರ್ಮಾಧ್ಯಕ್ಷ ಮಂಡಳಿಯ ಅಧ್ಯಕ್ಚರಿಗೆ ಟೆಲಿಗ್ರಾಂ ಮೂಲಕ ಸಂದೇಶವನ್ನು ರವಾನಿಸಿದ್ದಾರೆ. ಇದೇ ವೇಳೆ, ಭೂಕಂಪದಿಂದ ಹಾನಿಗೊಳಗಾದ ಸಂತ್ರಸ್ಥರಿಗೆ ಐಕ್ಯತೆಯನ್ನು ಹಾಗೂ ಅನ್ಯೋನ್ಯತೆಯನ್ನು ವ್ಯಕ್ತಪಡಿಸಿದ್ದಾರೆ.

ವರದಿ: ಕ್ರಿಸ್ಟೋಫರ್ ವೆಲ್ಸ್, ಅಜಯ್ ಕುಮಾರ್

ತೈವಾನ್ ದ್ವೀಪದಲ್ಲಿ ಸಂಭವಿಸಿದ ಕಳೆದ ಇಪ್ಪತ್ತೈದು ವರ್ಷಗಳಲ್ಲಿಯೇ ದೊಡ್ಡ ಭೂಕಂಪದ ಕಾರಣ ಮೃತ ಹೊಂದಿದವರಿಗಾಗಿ ಪೋಪ್ ಫ್ರಾನ್ಸಿಸ್ ತಮ್ಮ ಶೋಕವನ್ನು ವ್ಯಕ್ತಪಡಿಸಿದ್ದಾರೆ. ಜೊತೆಗೆ, ಇದರಿಂದ ಗಾಯಗೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರಿಗಾಗಿಯೂ ಸಹ ಪೋಪ್ ಫ್ರಾನ್ಸಿಸ್ ಮರುಗಿದ್ದಾರೆ.

ವ್ಯಾಟಿಕನ್ ರಾಜ್ಯ ಕಾರ್ಯದರ್ಶಿಯಾದ ಕಾರ್ಡಿನಲ್ ಪಿಯೆತ್ರೊ ಪರೋಲಿನ್ ಅವರ ಮೂಲಕ ಟೆಲಿಗ್ರಾಂ ಸಂದೇಶವನ್ನು ಕಳುಹಿಸಿರುವ ಪೋಪ್ ಫ್ರಾನ್ಸಿಸ್, ದೇಶದಲ್ಲಿ ಸಂಭವಿಸಿದ ಭೀಕರ ವಿಪತ್ತಿನ ಕಾರಣ ಸಂಕಷ್ಟಕ್ಕೊಳಗಾಗಿರುವ ಜನೆತೆಗಾಗಿ ನಮ್ಮ ಮನ ಮಿಡಿಯುತ್ತದೆ ಎಂದು ತೈವಾನ್ ದೇಶದ ಧರ್ಮಾಧ್ಯಕ್ಷೀಯ ಮಂಡಳಿಯ ಅಧ್ಯಕ್ಷರಾದ ಧರ್ಮಾಧ್ಯಕ್ಷ ಜಾನ್ ಬ್ಯಾಪ್ಟಿಸ್ಟ್ ಲೀ ಕೆಹ್-ಮೀನ್ ಅವರಿಗೆ ತಮ್ಮ ಐಕ್ಯತೆಯ ಸಂದೇಶವನ್ನು ಕಳುಹಿಸಿದ್ದಾರೆ.

ಈ ನೈಸರ್ಗಿಕ ವಿಪತ್ತಿನ ಕಾರಣ ಸುಮಾರು 9 ಜನರು ಮೃತಹೊಂದಿದ್ದು, 900 ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ. ಬಿಬಿಸಿ ಸುದ್ದಿ ವಾಹಿನಿಯ ಪ್ರಕಾರ ಸುಮಾರು 600 ಜನರು ಭೂಕುಸಿತದ ಪರಿಣಾಮ, ಮಣ್ಣಿನ ಅವಶೇಷಗಳಡಿ ಸಿಲುಕಿಕೊಂಡಿದ್ದು, ಅವರನ್ನು ರಕ್ಷಿಸುವ ಕಾರ್ಯ ಪ್ರಗತಿಯಲ್ಲಿದೆ.

ಮೃತಹೊಂದಿದವರಿಗಾಗಿ ತಮ್ಮ ಹೃದಯಾಂತರಾಳದ ಶೋಕವನ್ನು ವ್ಯಕ್ತಪಡಿಸಿದ ಪೋಪ್ ಫ್ರಾನ್ಸಿಸ್, ಅವರಿಗಾಗಿ, ಗಾಯಗೊಂಡಿರುವವರಿಗಾಗಿ ಹಾಗೂ ರಕ್ಷಣಾ ಕಾರ್ಯದಲ್ಲಿ ನಿರತರಾಗಿರುವ ಎಲ್ಲರಿಗಾಗಿಯೂ ಪ್ರಾರ್ಥಿಸುವುದಾಗಿ ಭರವಸೆಯನ್ನು ನೀಡಿದ್ದಾರೆ. ತಮ್ಮ ಸಂದೇಶದ ಕೊನೆಯಲ್ಲಿ ಈ ವಿಪತ್ತಿನಿಂದ ಭಾದಿತರಾಗಿರುವ ಎಲ್ಲರಿಗೂ ದೇವರು ಧೈರ್ಯವನ್ನು ಹಾಗೂ ಅದನ್ನು ಸಹಿಸಿಕೊಳ್ಳುವ ವರದಾನವನ್ನು ನೀಡಲಿ ಎಂದು ಪ್ರಾರ್ಥಿಸಿದ್ದಾರೆ.
 

04 April 2024, 16:07