ಸೆಪ್ಟೆಂಬರ್ ತಿಂಗಳಲ್ಲಿ ಏಷ್ಯಾದ 4 ದೇಶಗಳಿಗೆ ಭೇಟಿ ನೀಡಲಿರುವ ಪೋಪ್ ಫ್ರಾನ್ಸಿಸ್
ವರದಿ: ಡೆವಿನ್ ವಾಟ್ಕಿನ್ಸ್, ಅಜಯ್ ಕುಮಾರ್
ಪವಿತ್ರ ಪೀಠದ ಮಾಧ‌್ಯಮ ಕಚೇರಿಯು ಶುಕ್ರವಾರ ಬೆಳಿಗ್ಗೆ ಪೋಪ್ ಫ್ರಾನ್ಸಿಸ್ ಅವರು ಈ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ಏಷ್ಯಾ ಖಂಡದ ನಾಲ್ಕು ದೇಶಗಳಿಗೆ ಪ್ರೇಷಿತ ಪ್ರಯಾಣವನ್ನು ಕೈಗೊಳ್ಳುತ್ತಾರೆ ಎಂಬ ಮಾಹಿತಿಯನ್ನು ಪ್ರಕಟಿಸಿದೆ.
ಈ ದೇಶಗಳ ಮುಖ್ಯಸ್ಥರು ಹಾಗೂ ಸ್ಥಳೀಯ ಧರ್ಮಸಭೆಯ ಮುಖಂಡರ ಆಹ್ವಾನವನ್ನು ಒಪ್ಪಿಕೊಂಡಿರುವ ಪೋಪ್ ಫ್ರಾನ್ಸಿಸ್, ಆ ಮೂಲಕ ವಿದೇಶಕ್ಕೆ ತಮ್ಮ 43ನೇ ಪ್ರೇಷಿತ ಪ್ರಯಾಣವನ್ನು ಕೈಗೊಳ್ಳಲಿದ್ದಾರೆ.
ಸೆಪ್ಟೆಂಬರ್ 2 ರಂದು ರೋಮ್ ನಗರದಿಂದ ಪ್ರಯಾಣವನ್ನು ಆರಂಭಿಸುವ ಪೋಪ್ ಫ್ರಾನ್ಸಿಸ್ ಸೆಪ್ಟೆಂಬರ್ 13 ರಂದು ವಾಪಾಸ್ಸಾಗಲಿದ್ದಾರೆ.
ಇಂಡೋನೇಷ್ಯಾದ ರಾಜಧಾನಿ ಜಕಾರ್ತಾಕ್ಕೆ ತೆರಳಲಿರುವ ಪೋಪ್ ಫ್ರಾನ್ಸಿಸ್ ಅಲ್ಲಿ ಸೆಪ್ಟೆಂಬರ್ 3 ರಿಂದ 6ನೇ ತಾರೀಖಿನವರೆಗೂ ಉಳಿಯಲಿದ್ದಾರೆ. ಸೆಪ್ಟೆಂಬರ್ 6-9ರವರೆಗೆ ಪಪುವಾ ನ್ಯೂಗಿನಿ ದೇಶದ ರಾಜಧಾನಿ ಪೋರ್ಟ್ ಮೋರ್ಸ್ಬೆಗೆ ಭೇಟಿ ನೀಡಲಿದ್ದು, ಸೆಪ್ಟೆಂಬರ್ 9-11ರವರೆಗೆ ಟಿಮೊರ್-ಲೆಸ್ಟೆ ದೇಶದ ರಾಜಧಾನಿ ಡಿಲಿಗೆ ಭೇಟಿ ನೀಡಲಿದ್ದಾರೆ. ತದನಂತರ, ಸೆಪ್ಟೆಂಬರ್ 11-13 ರವರೆಗೆ ಸಿಂಗಪೋರ್ ದೇಶಕ್ಕೆ ಭೇಟಿ ನೀಡಲಿದ್ದಾರೆ.
ಪವಿತ್ರ ಪೀಠದ ಮಾಧ್ಯಮ ಕಚೇರಿಯ ಪ್ರಕಾರ ಪೋಪ್ ಫ್ರಾನ್ಸಿಸ್ ಅವರ ಪ್ರೇಷಿತ ಪ್ರಯಾಣದ ಪೂರ್ಣ ವೇಳಾಪಟ್ಟಿಯನ್ನು ನಂತರ ಪ್ರಕಟಿಸಲಾಗುವುದು.
ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ಪೋಪ್ ಫ್ರಾನ್ಸಿಸ್ ಈ ದೇಶಗಳಿಗೆ ಪ್ರಯಾಣವನ್ನು ಕೈಗೊಳ್ಳಲಿರುವ ಮಾಹಿತಿಯನ್ನು ನೀಡಿದ್ದರು.
ಇಂಡೋನೇಷ್ಯಾ ಜಗತ್ತಿನ ಅತಿ ದೊಡ್ಡ ಮುಸ್ಲಿಂ ಜನಸಂಖ್ಯಾ ದೇಶವಾಗಿದ್ದು, ಇಲ್ಲಿ ಎಂಟು ಮಿಲಿಯನ್ ಕಥೋಲಿಕರಿದ್ದಾರೆ. ಪಪುವಾ ನ್ಯೂಗಿನಿ ದೇಶದಲ್ಲಿ ಶೇ. 32 ರಷ್ಟು ಕಥೋಲಿಕರಿದ್ದಾರೆ. ಟಿಮೋರ್-ಲೆಸ್ಟೇ ಕಥೋಲಿಕ ಪ್ರಧಾನ ಜನಸಂಖ್ಯೆಯನ್ನು ಹೊಂದಿದ್ದು, ಇಲ್ಲಿ ಶೇ. 95 ರಷ್ಟು ಜನರು ಕಥೋಲಿಕರಾಗಿದ್ದಾರೆ. ಇನ್ನು ಸಿಂಗಪೋರ್ ದೇಶದಲ್ಲಿ 3,95,000 ಕಥೋಲಿಕರಿದ್ದು,, ಅವರು ಅಲ್ಲಿನ ಜನಸಂಖ್ಯೆಯ ಶೇ. 3 ರಷ್ಟಿದ್ದಾರೆ.