ಪೋಪ್: ಅಂತರ್ಧರ್ಮೀಯ ಸಂವಾದ ಶಾಂತಿಗೆ ನಾಂದಿ ಹಾಡಿ, ಬಹುತ್ವಕ್ಕೆ ಗೌರವವನ್ನು ತರುತ್ತದೆ

ವ್ಯಾಟಿಕನ್ನಿನ ಅಂತರ್ಧರ್ಮೀಯ ಸಂವಾದ ಪೀಠ ಮತ್ತು ವಿಶ್ವ ಸಾಂಪ್ರದಾಯಿಕ ಧರ್ಮಗಳ ಒಕ್ಕೂಟದ ನಾಯಕರು ರೋಮ್ ನಗರದಲ್ಲಿ ಆಯೋಜಿಸಿದ್ದ ಮೊದಲ ಅಧಿವೇಶನದಲ್ಲಿ ಪಾಲ್ಗೊಂಡು ಮಾತನಾಡಿದ ಪೋಪ್ ಫ್ರಾನ್ಸಿಸ್ ಎಲ್ಲಾ ಧರ್ಮಗಳ ಜನರು ಬಹುತ್ವ, ಶಾಂತಿ ಹಾಗೂ ಸೃಷ್ಟಿಯೆಡೆಗಿನ ತಮ್ಮ ಕಾಳಜಿಯನ್ನು ವ್ಯಕ್ತಪಡಿಸಬೇಕು ಎಂದು ಹೇಳಿದರು.

ವರದಿ: ಡೆವಿನ್ ವಾಟ್ಕಿನ್ಸ್, ಅಜಯ್ ಕುಮಾರ್

ವ್ಯಾಟಿಕನ್ನಿನ ಅಂತರ್ಧರ್ಮೀಯ ಸಂವಾದ ಪೀಠ ಮತ್ತು ವಿಶ್ವ ಸಾಂಪ್ರದಾಯಿಕ ಧರ್ಮಗಳ ಒಕ್ಕೂಟದ ನಾಯಕರು ತಮ್ಮ ಮೊದಲ ಅಧಿವೇಶನವನ್ನು ರೋಮ್ ನಗರದಲ್ಲಿ ಈ ವಾರ ಹಮ್ಮಿಕೊಂಡಿದ್ದರು. ಈ ಕಾರ್ಯಕ್ರಮಕ್ಕೆ ಪೋಪ್ ಫ್ರಾನ್ಸಿಸ್ ಭೇಟಿ ನೀಡಿದರು.

ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ ಪೋಪ್ ಫ್ರಾನ್ಸಿಸ್, ಅಂತರ್ಧರ್ಮಿಯ ಸಂವಾದ ಕಾರ್ಯಕ್ರಮವನ್ನು ಆಯೋಜಿಸಿ, ಅದನ್ನು ಉತ್ತೇಜಿಸುತ್ತಿರುವ ಕಜಕಿಸ್ತಾನ್ ಗಣರಾಜ್ಯಕ್ಕೆ ಧನ್ಯವಾದಗಳನ್ನು ಅರ್ಪಿಸಿದರು. ಇದನ್ನು ಅಂತರ್ಧರ್ಮೀಯ ಸಂವಾದದ ನಿಟ್ಟಿನಲ್ಲಿ ಮೊದಲ ಪ್ರತಿಫಲ ಎಂದು ಕರೆದಿರುವ ಪೋಪ್ ಫ್ರಾನ್ಸಿಸ್ ನಜರ್ಬಾಹೇಬ್ ಕೇಂದ್ರ ಹಾಗೂ ವ್ಯಾಟಿಕನ್ ಪೀಠದ ನಡುವೆ ಆಗಿರುವ ಒಪ್ಪಂದದ ಕುರಿತು ಬೆಳಕನ್ನು ಚೆಲ್ಲಿದರು. ಸೆಪ್ಟೆಂಬರ್ 13, 2022 ರಂದು ಕಜಕಿಸ್ತಾನ್ ದೇಶಕ್ಕೆ ಕೈಗೊಂಡ ತಮ್ಮ ಪ್ರೇಷಿತ ಭೇಟಿಯನ್ನು ನೆನಪಿಸಿಕೊಂಡರು.

ಶಾಂತಿ ಮತ್ತು ಸಾಮಾಜಿಕ ಸಾಮರಸ್ಯವನ್ನು ಉತ್ತೇಜಿಸುವುದು

ಈ ಅಂತರ್ಧರ್ಮೀಯ ಸಂವಾದ ವೇದಿಕೆಯು ಕೈಗೊಳ್ಳುತ್ತಿರುವ ಉಪಕ್ರಮಗಳ ಕುರಿತು ಮಾತನಾಡಿದ ಅವರು, ಈ ವೇದಿಕೆಯು, ಬಹುತ್ವದೆಡೆಗೆ ಗೌರವವನ್ನು ಹೊಂದಿದೆ. ನಮ್ಮ ಸಹಜ ಮನೆಯಾದ ಪ್ರಕೃತಿಯೊಂದಿಗೆ ಕಾಳಜಿಯುಕ್ತ ಭಾವನೆಯನ್ನು ಹೊಂದಿದೆ ಹಾಗೂ ಶಾಂತಿಯನ್ನು ಉತ್ತೇಜಿಸುತ್ತಿದೆ ಎಂದು ಹೇಳಿದ್ದಾರೆ.

ಬಹುತ್ವವನ್ನು ಗೌರವಿಸುವುದರ ಪ್ರಾಮುಖ್ಯತೆಯ ಕುರಿತು ಮೊದಲು ಮಾತನಾಡಿದ ಪೋಪ್ ಫ್ರಾನ್ಸಿಸ್, ಇದು ಪ್ರಜಾಪ್ರಭುತ್ವದ ಅವಿಭಾಜ್ಯ ಅಂಗವಾಗಿದೆ ಎಂದು ಹೇಳಿದರು. ಕಜಕ್ ಸಮಾಜವು ಆರೋಗ್ಯಕರ ಜಾತ್ಯತೀತತೆಯನ್ನು ಅಪ್ಪಿಕೊಳ್ಳುತ್ತದೆ; ಆ ಮೂಲಕ ಅದು ಧರ್ಮ ಮತ್ತು ರಾಜಕೀಯದ ನಡುವೆ ಸ್ಪಷ್ಟತೆಯನ್ನು ಕಾಯ್ದಿರಿಸಿ, ಈ ಎರಡೂ ಅಂಶಗಳು ಪರಸ್ಪರ ಬೆರೆಯದಂತೆ ನೋಡಿಕೊಳ್ಳುತ್ತದೆ ಹಾಗೂ ಸಮಾಜದ ಸಾಮಾನ್ಯ ಒಳಿತಿಗಾಗಿ ಧರ್ಮವು ಹೇಗೆ ತನ್ನ ಪಾತ್ರವನ್ನು ನಿರ್ವಹಿಸುತ್ತದೆ ಎಂಬುದನ್ನು ಗುರುತಿಸುತ್ತದೆ ಎಂದು ಹೇಳಿದ್ದಾರೆ.

ಶಾಂತಿಯ ಕುರಿತು ಮಾತನಾಡಿ; ಯುದ್ಧದ ಕುರಿತಲ್ಲ

ದೇವರ ಸೃಷ್ಟಿಯನ್ನು ಕಾಪಾಡುವುದರ ಕುರಿತು ಮಾತನಾಡಿದ ಫೋಪ್ ಫ್ರಾನ್ಸಿಸ್, ನಾವು ಹೀಗೆ ಮಾಡುವ ಮೂಲಕ ಸೃಷ್ಟಿಕರ್ತ ದೇವರಿಗೆ ಗೌರವ ಸಲ್ಲಿಸಿದಂತಾಗುತ್ತದೆ ಎಂದರು. ಪರಿಸರದ ಸಂಘರ್ಷದ ಕುರಿತು ಈ ವೇದಿಕೆಯು ಕೈಗೊಳ್ಳುತ್ತಿರುವ ಬದ್ಧತೆಯ ಉಪಕ್ರಮಗಳನ್ನು ಪೋಪ್ ಫ್ರಾನ್ಸಿಸ್ ಶ್ಲಾಘಿಸಿದರು. ಅಂತರ್ಧರ್ಮೀಯ ಸಂವಾದ ಎಂಬುದು ವಿಷಮ ಕಾಲಘಟ್ಟದಲ್ಲಿ ಶಾಂತಿಯನ್ನು ಉತ್ತೇಜಿಸುತ್ತದೆ ಎಂದರು.

ಕೊನೆಯದಾಗಿ, ಈ ವೇದಿಕೆಯು ಮಾಡುತ್ತಿರುವ ಕಾರ್ಯಗಳನ್ನು ಶ್ಲಾಘಿಸಿದ ಪೋಪ್ ಫ್ರಾನ್ಸಿಸ್, ಈ ವೇದಿಕೆಯು ಹೇಗೆ ಒಬ್ಬ ವ್ಯಕ್ತಿ ಮತ್ತೊಬ್ಬ ಧರ್ಮದ ವ್ಯಕ್ತಿಯನ್ನು ತನ್ನ ಮೌಲ್ಯಯುತ ಸಂಗಾತಿಯಾಗಿ ನೋಡಬೇಕು ಎಂಬುದನ್ನು ಕಲಿಸುವುದಕ್ಕೆ ಮಾದರಿಯಾಗ ಬಲ್ಲದು ಎಂದು ತಮ್ಮ ಭರವಸೆಯನ್ನು ವ್ಯಕ್ತಪಡಿಸಿದರು.

 

05 April 2024, 16:19