ಹುಡುಕಿ

ಪೋಪ್ ಫ್ರಾನ್ಸಿಸ್ ತಮ್ಮ ಸಾರ್ವಜನಿಕ ದರ್ಶನದಲ್ಲಿ ಮಾತನಾಡುತ್ತಿರುವುದು ಪೋಪ್ ಫ್ರಾನ್ಸಿಸ್ ತಮ್ಮ ಸಾರ್ವಜನಿಕ ದರ್ಶನದಲ್ಲಿ ಮಾತನಾಡುತ್ತಿರುವುದು  

ಯುದ್ಧದಲ್ಲಿ ಮಡಿದ ಜನತೆಗಾಗಿ ಪ್ರಾರ್ಥನೆ; ಉಕ್ರೇನ್ ಸೈನಿಕನನ್ನು ನೆನೆದ ಪೋಪ್

ಯುದ್ಧದಲ್ಲಿ ಮಡಿದ 23 ವರ್ಷದ ಉಕ್ರೇನ್ ದೇಶದ ಸೈನಿಕ ಒಲೆಕ್ಸಾಂಡರ್’ನನ್ನು ನೆನೆದ ಪೋಪ್ ಫ್ರಾನ್ಸಿಸ್, ಆತನ ಜಪಸರ ಮತ್ತು ಬೈಬಲ್ ಅನ್ನು ಹಿಡಿದು ಪ್ರಾರ್ಥಿಸಿದ್ದಾರೆ.

ವರದಿ: ಡೆಬೋರ ಕ್ಯಾಸ್ಟಲಿನೋ ಲುಬೋವ್, ಅಜಯ್ ಕುಮಾರ್

“ನನ್ನ ಕೈಗಳಲ್ಲಿ ಒಲೆಕ್ಸಾಂಡರ್ ಎಂಬ ಯುದ್ಧದಲ್ಲಿ ಮಡಿದ ಯುವ ಸೈನಿಕನ ಜಪಸರ ಮತ್ತು ಹೊಸ ಒಡಂಬಡಿಕೆಯನ್ನು ಹಿಡಿದಿದ್ದೇನೆ. ಆತನಿಗೆ ಕೇವಲ 23 ವರ್ಷವಾಗಿತ್ತು.”

ಪೋಪ್ ಫ್ರಾನ್ಸಿಸರು ಈ ಮಾಹಿತಿಯನ್ನು ಬುಧವಾರ ತಮ್ಮ ಸಾರ್ವಜನಿಕ ದರ್ಶನವನ್ನು ಮುಗಿಸುವುದಕ್ಕೆ ಮುಂಚಿತವಾಗಿ ವ್ಯಾಟಿಕನ್ನಿನಲ್ಲಿ ಹಂಚಿಕೊಳ್ಳುತ್ತಾರೆ. ಇದೇ ವೇಳೆ ಅವರು ಯುದ್ಧಗಳಲ್ಲಿ ಮಡಿದಿರುವ ಎಲ್ಲಾ ಜನತೆಗಾಗಿ ಪ್ರಾರ್ಥಿಸಿದ್ದಾರೆ.

ಮುಂದುವರೆದು ಮಾತನಾಡಿದ ಪೋಪ್ “ಒಲೆಕ್ಸಾಂಡರ್ ಹೊಸ ಒಡಂಬಡಿಕೆ ಹಾಗೂ ಕೀರ್ತನೆಗಳನ್ನು ಓದುತ್ತಿದ್ದ; ಆತ ಕೀರ್ತನೆ ಗ್ರಂಥದಲ್ಲಿ ‘ಅಂತರಾಳದಿಂದ ಪ್ರಭು, ಮೊರೆಯಿಡುತ್ತಿರುವೆ ನಿನಗೆ, ಆಲಿಸು ಕಿವಿಗೊಡು ಪ್ರಭೂ, ನನ್ನಾರ್ತ ವಿಜ್ಞಾಪನೆಗೆ” ಎಂಬ 130ನೇ ಕೀರ್ತನೆಯ ಸಾಲುಗಳನ್ನು ಗುರುತಿಸಿದ್ದನು” ಎಂದು ಹೇಳಿದರು.

“23 ವರ್ಷದ ಈ ಯುವಕ ಯುದ್ಧ ಸಂದರ್ಭದಲ್ಲಿ ಅವ್ದೀವ್ಕ ಎಂಬ ಪ್ರದೇಶದಲ್ಲಿ ಮಡಿದಿದ್ದಾನೆ” ಎಂದು ಪೋಪ್ ಹೇಳಿದರು.

“ಆತ ಜೀವನವನ್ನು ಹಿಂದೆ ಬಿಟ್ಟು ಹೋದ” ಎಂದು ಹೇಳಿದ ಪೋಪ್ ಫ್ರಾನ್ಸಿಸ್, “ಇದು ಆತ ಉಪಯೋಗಿಸುತ್ತಿದ ಹೊಸ ಒಡಂಬಡಿಕೆ ಹಾಗೂ ಜಪಸರ” ಎಂದು ಹೇಳಿದರು.

ವ್ಯಾಟಿಕನ್ನಿನ ಸಂತ ಪೇತ್ರರ ಚೌಕದಲ್ಲಿ ನೆರೆದಿದ್ದ ಜನಸ್ತೋಮಕ್ಕೆ ಒಂದು ನಿಮಿಷದ ಮೌನಾಚರಣೆಯನ್ನು ಮಾಡಲು ಆಹ್ವಾನಿಸಿದ ಪೋಪ್, ಈ ಯುವಕನಿಗಾಗಿ ಹಾಗೂ ಯುದ್ಧದಲ್ಲಿ ಮಡಿದ ಎಲ್ಲಾ ಜನತೆಗಾಗಿ ಪ್ರಾರ್ಥಿಸುವಂತೆ ಕರೆ ನೀಡಿದರು. “ಯುದ್ಧ ಎಲ್ಲವನ್ನೂ ಸರ್ವನಾಶ ಮಾಡುತ್ತದೆ” ಎಂದ ಪೋಪ್, ಇವರೆಲ್ಲರನ್ನು ನೆನಪಿಸಿಕೊಂಡು ಪ್ರಾರ್ಥಿಸೋಣ ಎಂದರು.

 

03 April 2024, 14:47