ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವನ್ನು ನೀಡಿದ ಪೇಪಲ್ ಪ್ರತಿಷ್ಟಾನಕ್ಕೆ ಧನ್ಯವಾದ ತಿಳಿಸಿದ ಪೋಪ್ ಫ್ರಾನ್ಸಿಸ್
ವರದಿ: ಫಾ. ಪವೇಲ್ ರೈತೆಲ್-ಅಂದ್ರಿಯಾನಿಕ್, ಅಜಯ್ ಕುಮಾರ್
ತನ್ನ ಸ್ಥಾಪನಾ ದಿನದಿಂದಲೂ ದಿ ಪೇಪಲ್ ಫೌಂಡೇಶನ್ ಪ್ರತಿಷ್ಟಾನವು ಜಗತ್ತಿನ ಹಲವಾರು ಕಥೋಲಿಕರ ಎದೆಯಲ್ಲಿ ಪುನರುತ್ಥಾನದ ಸಂತೋಷವನ್ನು ಮೂಡಿಸಿದೆ. ತನ್ನ ದಾನ ಕಾರ್ಯಗಳ ಮೂಲಕ ಅವಶ್ಯಕತೆಯಲ್ಲಿರುವವರಿಗೆ ಈ ಪ್ರತಿಷ್ಟಾನವು ಎಲ್ಲಾ ರೀತಿಯ ನೆರವನ್ನು ನೀಡುತ್ತಾ ಬಂದಿದೆ.
ಪೋಪ್ ಫ್ರಾನ್ಸಿಸ್ ಈ ಅಮೇರಿಕಾದ ಸಂಸ್ಥೆಗೆ ತಮ್ಮ ಧನ್ಯವಾದಗಳನ್ನು ಅರ್ಪಿಸುತ್ತಾ, ದಿ ಪೇಪಲ್ ಫೌಂಡೇಶನ್ ಮಾಡುತ್ತಿರುವ ಒಳ್ಳೆಯ ಕಾರ್ಯಗಳನ್ನು ಶುಕ್ರವಾರ ಬೆಳಿಗ್ಗೆ ವ್ಯಾಟಿಕನ್ನಿನಲ್ಲಿ ಶ್ಲಾಘಿಸಿದರು.
"ಶೈಕ್ಷಣಿಕ, ಪ್ರೇಷಿತಾತ್ಮಕ ಹಾಗೂ ಸಾಮಾಜಿಕ ಸೇವಾ ಕಾರ್ಯಗಳಿಗೆ ತಾವು ನೀಡುವ ನೆರವು ಜನತೆಯ ಸಮಗ್ರ ಅಭಿವೃದ್ಧಿಗೆ ಕಾರಣವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಯುದ್ಧ ಮತ್ತು ಹಿಂಸೆಯ ಕಾರಣ ಬಡವರು, ನಿರ್ಗತಿಕರು ಹಾಗೂ ವಲಸಿಗರಿಗೆ ನಿಮ್ಮ ನೆರವು ಭರವಸೆಯ ಬೆಳಕಂತೆ ಗೋಚರಿಸುತ್ತದೆ." ಎಂದು ಪೋಪ್ ಫ್ರಾನ್ಸಿಸ್ ತಮ್ಮ ಭೇಟಿಯಲ್ಲಿ ಹೇಳಿದರು.
"ದಿ ಪೇಪಲ್ ಫೌಂಡೇಶನ್ ಆರಂಭಿಸಿರುವ ಪೋಪ್ ಸಂತ ದ್ವಿತೀಯ ಜಾನ್ ಪೌಲ್ ವಿದ್ಯಾರ್ಥಿ ವೇತನದಿಂದ ಅನೇಕ ಬಡ ಮಕ್ಕಳು ವಿದ್ಯಾಬ್ಯಾಸವನ್ನು ಪಡೆದುಕೊಂಡಿದ್ದಾರೆ. ಈ ವಿದ್ಯಾರ್ಥಿ ವೇತನವು ಮಕ್ಕಳ ಶೈಕ್ಷಣಿಕ ಅಗತ್ಯಗಳನ್ನು ಪೂರೈಸುವಲ್ಲಿ ಸಹಕಾರಿಯಾಗಿದೆ." ಎಂದು ಪೋಪ್ ಫ್ರಾನ್ಸಿಸ್ ನುಡಿದರು.
"ರೋಮ್ ನಗರದ ಪೊಂಟಿಫಿಕಲ್ ವಿಶ್ವವಿದ್ಯಾಲಯಗಳಲ್ಲಿ ವ್ಯಾಸಾಂಗವನ್ನು ಮಾಡಲು ಈಗಷ್ಟೇ ಅಭಿವೃದ್ದಿ ಹೊಂದಿತ್ತಿರುವ ದೇಶಗಳ ಗುರು ಅಭ್ಯರ್ಥಿಗಳು, ಗುರುಗಳು, ಧಾರ್ಮಿಕ ಸಹೋದರ-ಸಹೋದರಿಯರು ಹಾಗೂ ಸಾಮಾನ್ಯ ಜನರಿಗೆ ನೀಡಲಾಗುವ ನೆರವು ಹಾಗೂ ವಿದ್ಯಾರ್ಥಿ ವೇತನವು ಅವರು ತಮ್ಮ ದೇಶಕ್ಕೆ ಹೋಗಿ, ಸಾಮಾನ್ಯ ಕ್ರೈಸ್ತರು ಉತ್ತಮ ರೀತಿಯಲ್ಲಿ ಶುಭಸಂದೇಶಕ್ಕೆ ಸಾಕ್ಷಿಗಳಾಗುವಂತೆ ಮಾಡಲಿ ನೆರವಾಗುತ್ತದೆ." ಎಂದು ಪೋಪ್ ಫ್ರಾನ್ಸಿಸ್ ತಿಳಿಸಿದರು.
ದಿ ಪೇಪಲ್ ಫೌಂಡೇಶನ್ ಪ್ರತಿಷ್ಟಾನದಿಂದ ನೆರವು ಅಥವಾ ವಿದ್ಯಾರ್ಥಿ ವೇತನವನ್ನು ಪಡೆದು ಸುಮಾರು 1700 ಜನರು ಪೊಂಟಿಫಿಕಲ್ ವಿಶ್ವವಿದ್ಯಾಲಯಗಳಲ್ಲಿ ತಮ್ಮ ಕಲಿಕೆಯನ್ನು ಪೂರ್ಣಗೊಳಿಸಿದ್ದಾರೆ.
ದಿ ಪೇಪಲ್ ಫೌಂಡೇಶನ್ನಿನ ಸುಮಾರು 140 ಜನರನ್ನುದ್ದೇಶಿಸಿ, ವ್ಯಾಟಿಕನ್ನಿನಲ್ಲಿ ಮಾತನಾಡಿದ ಪೋಪ್ ಫ್ರಾನ್ಸಿಸ್, ಈ ನಿಮ್ಮ ನೆರವಿನಿಂದ ಇಲ್ಲಿ ಕಲಿತವರು ತಮ್ಮ ದೇಶ ಹಾಗೂ ಧರ್ಮಕೇಂದ್ರಗಳಲ್ಲಿ ಬಡವರಿಗೆ, ನಿರ್ಗತಿಕರಿಗೆ ಹಾಗೂ ಶೋಷಿತರಿಗೆ ತಮ್ಮ ಕೈಲಾದ ಸೇವೆಯನ್ನು ಮಾಡಲು ಶಕ್ತರಾಗಿದ್ದಾರೆ. ನಿಮ್ಮೆಲ್ಲಾ ಉದಾರ ನೆರವಿಗಾಗಿ ನಾನು ನನ್ನ ಅಂತರಾಳದ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಹೇಳಿದರು.
ದಿ ಪೇಪಲ್ ಫೌಂಡೇಶನ್ ಈ ವರ್ಷ 14.7 ಮಿಲಿಯನ್ ಡಾಲರುಗಳಷ್ಟು ಮೊತ್ತವನ್ನು ಬಡವರಿಗೆ, ವಿದ್ಯಾರ್ಥಿಗಳಿಗೆ ಹಾಗೂ ವಲಸಿಗರ ಕಲ್ಯಾಣಕ್ಕಾಗಿ ಅನುದಾನವನ್ನಾಗಿ ನೀಡಲು ನಿರ್ಧರಿಸಿದೆ. ಈ ಅನುದಾನವು 60 ಕ್ಕೂ ಹೆಚ್ಚು ದೇಶದಳಲ್ಲಿ ಸುಮಾರು 118 ಯೋಜನೆಗಳನ್ನು ಕೈಗೆತ್ತಿಕೊಂಡಿದೆ.