ಫಾದರ್ ಫಲ್ಟಾಸ್: ಪವಿತ್ರ ನಾಡಿನಲ್ಲಿ ಕ್ರೈಸ್ತರು ಯುದ್ಧವನ್ನು ವಿಶ್ವಾಸ ಮತ್ತು ಭರವಸೆಯಿಂದ ಸಹಿಸಿಕೊಂಡಿದ್ದಾರೆ

ಪವಿತ್ರ ನಾಡಿನ ಕಸ್ಟಡಿಯ ವಿಕಾರ್ ಆಗಿರುವ ಫಾದರ್ ಫಲ್ಟಾಸ್ ಪವಿತ್ರ ನಾಡಿನಲ್ಲಿ ಕ್ರೈಸ್ತರು ಅನುಭವಿಸುತ್ತಿರುವ ವಾಸ್ತವ ಸನ್ನಿವೇಷಗಳ ಕುರಿತು ಮಾತನಾಡಿ, ವಿಷಮ ಕಾಲಘಟ್ಟದಲ್ಲಿ ಐಕ್ಯತೆಯ, ಭರವಸೆಯ ಹಾಗೂ ಪ್ರಾರ್ಥನೆಯ ಪ್ರಾಮುಖ್ಯತೆಯನ್ನು ಕುರಿತು ಹೇಳಿದ್ದಾರೆ.

ವರದಿ: ಫ್ತಾನ್ಚೆಸ್ಕ ಮರ್ಲೋ, ಅಜಯ್ ಕುಮಾರ್

ವ್ಯಾಟಿಕನ್ನಿನ ಫಿದೆಸ್ ನ್ಯೂಸ್ ಏಜೆನ್ಸಿಗೆ ಸಂದರ್ಶನವನ್ನು ನೀಡುತ್ತಾ ಮಾತನಾಡಿರುವ ಫಾದರ್ ಇಬ್ರಾಹಿಂ ಫಲ್ಟಾಸ್ ಅವರು ಗಾಜಾದಲ್ಲಿ ಯುದ್ಧ ನಡೆಯುತ್ತಿರುವ ಪರಿಣಾಮ ಪವಿತ್ರ ನಾಡಿನಲ್ಲಿ ಕ್ರೈಸ್ತರು ಅನುಭವಿಸುತ್ತಿರುವ ಸವಾಲುಗಳ ಕುರಿತು ಹೇಳಿದ್ದಾರೆ.

ಪೋಪ್ ಫ್ರಾನ್ಸಿಸ್ ಅವರ  “ಯುದ್ಧ ಎಂದಿಗೂ ಸೋಲು” ಎಂಬ ಮಾತುಗಳನ್ನು ನೆನಪಿಸುತ್ತಾ ಮಾತನಾಡಿರುವ ಫಾದರ್ ಫಲ್ಟಾಸ್ ಅಲ್ಲಿನ ಪರಿಸ್ಥಿತಿಯ ಗಂಭೀರತೆಯ ಕುರಿತು ಬೆಳಕನ್ನು ಚೆಲ್ಲಿದರು.

ಕ್ರೈಸ್ತ ಸಮುದಾಯಗಳ ಸಂಕಷ್ಟ

ಹೇಗೆ ಪ್ರಸ್ತುತ ಯುದ್ಧಕಾಲದಲ್ಲಿ ಕ್ರೈಸ್ತ ಸಮುದಾಯಗಳು ಸಂಕಷ್ಟವನ್ನು ಎದುರಿಸುತ್ತಿವೆ ಎಂದು ಹೇಳಿರುವ ಫಾದರ್ ಫಲ್ಟಾಸ್, “ಪವಿತ್ರನಾಡಿನಲ್ಲಿ ಕ್ರೈಸ್ತರು ಅಲ್ಪಸಂಖ್ಯಾತರಾಗಿದ್ದಾರೆ. ಆದುದರಿಂದ ಇಲ್ಲಿ ಯುದ್ಧ ಎಂಬುದು ಎದುರಿಸುವುದಕ್ಕೆ ಆಗದ ಒಂದು ದುರಂತವಾಗಿದೆ” ಎಂದು ಹೇಳಿದ್ದಾರೆ.

ಇಸ್ರೇಲ್ ಮತ್ತು ವೆಸ್ಟ್ ಬ್ಯಾಂಕ್

ಯುದ್ಧವು ಹೇಗೆ ಇಲ್ಲಿನ ಸಮುದಾಯಗಳ ಮೇಲೆ ಆರ್ಥಿಕವಾಗಿಯೂ ಸಹ ದುಷ್ಪರಿಣಾಮವನ್ನು ಬೀರಿದೆ ಎಂಬುದನ್ನು ತಿಳಿಸುವ ಫಾದರ್ ಫಲ್ಟಾಸ್, “ಯುದ್ಧ ಆರಂಭವಾದಾಗಿನಿಂದ ಇಲ್ಲಿಗೆ ಪ್ರವಾಸಿಗರು ಹಾಗೂ ಯಾತ್ರಿಕರು ಬರುವುದು ಅತ್ಯಂತ ಕಡಿಮೆಯಾದ ಪರಿಣಾಮ, ವೆಸ್ಟ್ ಬ್ಯಾಂಕ್ ಉದ್ಯೋಗಿಗಳನ್ನು ಬ್ಯಾಂಕ್ ಉದ್ಯೋಗದಿಂದ ತೆಗೆದುಹಾಕಿದೆ. ಹೀಗೆ ಉದ್ಯೋಗ ಕಳೆದುಕೊಂಡವರಲ್ಲಿ ಅನೇಕರು ಕ್ರೈಸ್ತರಾಗಿದ್ದು, ಅವರ ಬದುಕು ಚಿಂತಾಜನಕವಾಗಿದೆ. ಇವರಲ್ಲಿ ಬಹುತೇಕರು ಪವಿತ್ರ ನಾಡನ್ನು ತೊರೆಯುವ ಕುರಿತು ಚಿಂತಿಸಿದ್ದಾರೆ.” ಎಂದು ಮಾಹಿತಿ ನೀಡಿದ್ದಾರೆ.

ಮಾನವ ಬದುಕಿನ ಮೇಲೆ ವಿನಾಶ

ದೇಶದಲ್ಲಿನ ರಾಜಕೀಯ ಸ್ಥಿತಿಗತಿಗಳ ಕುರಿತು ಮಾತನಾಡಿದ ಫಾದರ್ ಫಲ್ಟಾಸ್, “ನಾನೇನೂ ರಾಜಕೀಯ ವಿಶ್ಲೇಷಕನಲ್ಲ. ಆದರೆ ನಾನು ಇಲ್ಲಿ ಅನೇಕ ವರ್ಷಗಳಿಂದ ಜೀವಿಸುತ್ತದ್ದೇನೆ, ಈ ಹಿನ್ನೆಲೆಯಲ್ಲಿ ನನ್ನ ಅನುಭವಕ್ಕೆ ಬಂದ ಘಟನೆಗಳ ಹಿನ್ನೆಲೆಯಲ್ಲಿ ನೋಡುವುದಾದರೆ, ಯಾವುದೇ ಯುದ್ಧದ ಮೊದಲ ಬಲಿಪಶುಗಳೆಂದರೆ ಮಕ್ಕಳೇ. ಯುದ್ಧ ಎಂದಿಗೂ ಮಕ್ಕಳ ಮೇಲೆ ಹೆಚ್ಚಿನ ಪರಿಣಾಮವನ್ನು ಬೀರುತ್ತದೆ.” ಎಂದು ಹೇಳಿದ್ದಾರೆ.

ಪೋಪ್ ಫ್ರಾನ್ಸಿಸ್: ಶಾಂತಿಯ ಹರಿಕಾರ

ಕೊನೆಗೆ ತಮ್ಮ ಸಂದರ್ಶನದಲ್ಲಿ ಪೋಪ್ ಫ್ರಾನ್ಸಿಸ್ ಅವರ ಕುರಿತು ಮಾತನಾಡಿದ ಫಾದರ್ ಫಲ್ಟಾಸ್ “ಪವಿತ್ರನಾಡಿನಲ್ಲಿರುವ ಕ್ರೈಸ್ತ ಸಮುದಾಯಕ್ಕೆ ಮಾತ್ರವಲ್ಲದೆ ಒಟ್ಟಾರೆಯಾಗಿ ಯುದ್ಧವನ್ನು ನಿಲ್ಲಿಸಿ, ಶಾಂತಿಯನ್ನು ಮರುಸ್ಥಾಪಿಸಬೇಕೆಂದು ಪೋಪ್ ಫ್ರಾನ್ಸಿಸ್ ಮನವಿ ಮಾಡಿದ್ದಾರೆ. ಇದು ಇಲ್ಲಿನ ಕ್ರೈಸ್ತರಿಗೆ ಬೆಂಬಲ ಹಾಗೂ ಸ್ಥೈರ್ಯವನ್ನು ನೀಡುತ್ತದೆ” ಎಂದು ಹೇಳಿದ್ದಾರೆ.

10 April 2024, 17:09