ಪ್ರವಾಹ ಹಿನ್ನೆಲೆ: ಬ್ರೆಜಿಲ್ ಆರ್ಚ್'ಬಿಷಪ್ ಅವರಿಗೆ ಕರೆ ಮಾಡಿ ಐಕ್ಯತೆಯನ್ನು ವ್ಯಕ್ತಪಡಿಸಿದ ಪೋಪ್ ಫ್ರಾನ್ಸಿಸ್
ವರದಿ: ವ್ಯಾಟಿಕನ್ ನ್ಯೂಸ್
ಕಳೆದ ಏಪ್ರಿಲ್ ತಿಂಗಳಾಂತ್ಯದಿಂದ ಬ್ರೆಜಿಲ್ ದೇಶದ ವಿವಿಧ ಭಾಗಗಳಲ್ಲಿ ಉಂಟಾಗಿರುವ ಪ್ರವಾಹದ ಪರಿಣಾಮ ಈವರೆಗೆ 37 ಜನರು ಅಸುನೀಗಿದ್ದು, 6,00,000 ಕ್ಕೂ ಹೆಚ್ಚು ಜನರು ನಿರಾಶ್ರಿತರಾಗಿದ್ದಾರೆ. ರಿಯೋ ಗ್ರಾಂಡೆ ಡೆ ಸೊಲ್ ಎಂಬ ರಾಜ್ಯದಲ್ಲಿ ಅತಿ ಹೆಚ್ಚು ಮಳೆ ಉಂಟಾಗುತ್ತಿದ್ದು, ಪ್ರವಾಹ ಪರಿಸ್ಥಿತಿ ದಿನೇ ದಿನೇ ಹೆಚ್ಚಾಗುತ್ತಿದೆ.
ಪೋಪ್ ಫ್ರಾನ್ಸಿಸ್ ಅವರು ಪ್ರವಾಹದಿಂದ ಪ್ರೀತಿಪಾತ್ರರನ್ನು ಕಳೆದುಕೊಂಡಿರುವ ಹಾಗೂ ನಿರಾಶ್ರಿತರಾಗಿರುವ ಜನರಿಗೆ ಪೋಪ್ ಫ್ರಾನ್ಸಿಸ್ ತಮ್ಮ ಐಕ್ಯತೆಯನ್ನು ವ್ಯಕ್ತಪಡಿಸಿದ್ದಾರೆ. ಮುಂದುವರೆದು, ಅವರಿಗಾಗಿ ಪ್ರಾರ್ಥಿಸುವ ಭರವಸೆಯನ್ನು ನೀಡಿ, ಕ್ರೈಸ್ತರೆಲ್ಲರೂ ಇಲ್ಲಿನ ಸಂತ್ರಸ್ಥರಿಗಾಗಿ ಪ್ರಾರ್ಥಿಸುವಂತೆ ಕರೆ ನೀಡಿದ್ದಾರೆ.
ತಮ್ಮ ಆತ್ಮೀಯತೆ ಹಾಗೂ ಐಕ್ಯತೆ ಮಾತ್ರವಲ್ಲದೆ ಪೋಪರ ನಿಧಿಯಿಂದ ಧನ ಸಹಾಯವನ್ನೂ ಸಹ ಪ್ರವಾಹ ಸಂತ್ರಸ್ಥರಿಗೆ ಪೋಪ್ ಫ್ರಾನ್ಸಿಸ್ ಕಳುಹಿಸಿದ್ದಾರೆ. ಅಲ್ಲಿನ ಪೋರ್ಟ್ ಅಲೆಗ್ರೆ ಮಹಾಧರ್ಮಕ್ಷೇತ್ರದ ಮಹಾಧರ್ಮಾಧ್ಯಕ್ಷರಾದ ಜೇಮಿ ಸ್ಪ್ರೆಂಗ್ಲರ್ ಅವರಿಗೆ ಕರೆ ಮಾಡಿ, ತಮ್ಮ ಐಕ್ಯತೆ ಹಾಗೂ ಅನ್ಯೋನ್ಯತೆಯನ್ನು ವ್ಯಕ್ತಪಡಿಸಿದ್ದಾರೆ.
ಪೋಪ್ ಫ್ರಾನ್ಸಿಸ್ ಅವರು ಕರೆ ಮಾಡಿ, ಐಕ್ಯತೆಯನ್ನು ವ್ಯಕ್ತಪಡಿಸಿರುವುದರ ಜೊತೆಗೆ ಧನ ಸಹಾಯವನ್ನು ನೀಡಿರುವುದನ್ನು ಮಹಾಧರ್ಮಾಧ್ಯಕ್ಷರಾದ ಜೇಮಿ ಸ್ಪ್ರೆಂಗ್ಲರ್ ಅವರು ದೃಢೀಕರಿಸಿದ್ದಾರೆ.